ಹಸಿರೀಕರಣಕ್ಕೆ ಬೇರೂರಲು 60 ಸಾವಿರ ಸಸಿಗಳು ಸಿದ್ಧ

| Published : Jun 01 2024, 12:46 AM IST

ಹಸಿರೀಕರಣಕ್ಕೆ ಬೇರೂರಲು 60 ಸಾವಿರ ಸಸಿಗಳು ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರಗಳಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಬೇರೂರಲು 60, 800 ಸಸಿಗಳು ಸಿದ್ಧವಾಗಿವೆ. ಈ ಅರಣ್ಯ ಸಸ್ಯ ಕ್ಷೇತ್ರಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಹಸಿರು ವನಗಳಾಗಿ ಮಾರ್ಪಟ್ಟಿವೆ. ಹಸಿರು ನೆರಳಿನ ಛಾಮರ ಬೀಸುತ್ತಿದ್ದು ದಾರಿ ಹೋಕರನ್ನು ಕೈ ಬೀಸಿ ಕರೆಯುತ್ತಿವೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರಗಳಲ್ಲಿ ಹುಕ್ಕೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಬೇರೂರಲು 60, 800 ಸಸಿಗಳು ಸಿದ್ಧವಾಗಿವೆ. ಈ ಅರಣ್ಯ ಸಸ್ಯ ಕ್ಷೇತ್ರಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಹಸಿರು ವನಗಳಾಗಿ ಮಾರ್ಪಟ್ಟಿವೆ. ಹಸಿರು ನೆರಳಿನ ಛಾಮರ ಬೀಸುತ್ತಿದ್ದು ದಾರಿ ಹೋಕರನ್ನು ಕೈ ಬೀಸಿ ಕರೆಯುತ್ತಿವೆ.ತಾಲೂಕಿನ ಹಿಡಕಲ್ ಡ್ಯಾಮ್, ಗುಡಸ ಗ್ರಾಮದ ಸಸ್ಯಪಾಲನಾ ಕ್ಷೇತ್ರಗಳಲ್ಲಿ ವಿವಿಧ ಜಾತಿಯ ರೋಗಾಣು ರಹಿತ ಸಾವಿರಾರು ಉತ್ತಮ ಸಸಿಗಳನ್ನು ಬೆಳೆಸಲಾಗಿದೆ. ಇಲ್ಲಿ ಸಸಿಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದ್ದು, ಬೆಳೆದಿರುವ ನಾನಾ ತರಹದ ಗಿಡ-ಮರಗಳು ಕಣ್ಣನ್ನು ತಣಿಸುತ್ತಿವೆ. ಜತೆಗೆ ಪರಿಸರ ಕಾಳಜಿಯ ಪಾಠ ಪರಿಚಯಿಸುತ್ತಿವೆ.ಮಳೆ ಇಲ್ಲದೇ ಬರಕ್ಕೆ ತತ್ತರಿಸಿದ ತಾಲೂಕಿನಲ್ಲಿ ನೀರಿನ ಸಮಸ್ಯೆ ಇದ್ದಾಗಲೂ ಕಡಿಮೆ ಅವಧಿಯಲ್ಲಿ ಸಸಿಗಳನ್ನು ಬೆಳೆಸಲಾಗಿದೆ. ದಿನಗೂಲಿಗಳು ಹಾಗೂ ಇಲಾಖೆ ಸಿಬ್ಬಂದಿ ವರ್ಷವಿಡಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ಮೂಲಕ ಅರಣ್ಯ ಅಭಿವೃದ್ಧಿ, ಬರ ಅಳಿಸುವ ಸಂಕಲ್ಪದಿಂದ ಸಸಿಗಳನ್ನು ನೆಟ್ಟು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ತಾಲೂಕಿನ ಅರಣ್ಯ ಕ್ಷೇತ್ರಾಭಿವೃದ್ಧಿ ಮತ್ತಷ್ಟು ವಿಸ್ತರಿಸುವ ಆಶಾಭಾವ ಮೂಡಿಸಿದೆ.ಪ್ರಸಕ್ತ 2024-25ನೇ ಸಾಲಿನಲ್ಲಿ ತಾಲೂಕಿನ ವಿವಿಧ ರಸ್ತೆಗಳ ಬದಿ, ಗೋಮಾಳ, ಸ್ಮಶಾನ, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳ ಆವರಣ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಸಸಿಗಳನ್ನು ನೆಡಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಅದರನ್ವಯ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮುಂಗಡ ಗುಂಡಿ ತೆಗೆಯುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.ಇನ್ನು ಕ್ಷೇತ್ರದ ಶಾಸಕರೂ ಆಗಿದ್ದ ಅಂದಿನ ಸಚಿವ ದಿ.ಉಮೇಶ ಕತ್ತಿ ಅವರ ದೂರದೃಷ್ಟಿ ಯೋಜನೆಯಿಂದ 2022ರಲ್ಲಿ ಹಿಡಕಲ್ ಡ್ಯಾಮ್‌ನ ರಾಜಾ ಲಖಮಗೌಡ ಜಲಾಶಯ ಆವರಣದಲ್ಲಿ ಒಂದೇ ದಿನ 21 ಸಾವಿರ ಸಸಿಗಳನ್ನು ನೆಟ್ಟು ಹಸಿರೀಕರಣದ ರೂವಾರಿ ಎನಿಸಿದ್ದರು. ಈ ಹಸಿರು ಹಬ್ಬ ತಾಲೂಕಿನ ಇತಿಹಾಸದಲ್ಲಿ ಹೊಸ ಹೆಜ್ಜೆ ಮೂಡಿಸಿ ಹಸಿರು ಕ್ರಾಂತಿ ಎನ್ನುವ ದಾಖಲೆಗೆ ಕಾರಣವಾಗಿತ್ತು.

ಪ್ರಾದೇಶಿಕ ಅರಣ್ಯ ವಲಯ

ಪ್ರಾದೇಶಿಕ ಅರಣ್ಯ ಇಲಾಖೆ ಬರ ಅಳಿಸುವುದರ ಕಾಳಜಿ ತೋರಿದ್ದು ಸಸಿಗಳನ್ನು ವಿತರಿಸುವ ಕಾರ್ಯಕ್ಕೆ ಮುಂದಾಗಿದೆ. ಬೇವು, ಅರಳಿ, ಆಲ, ಹೊಂಗೆ, ತಪಸಿ, ಗುಲಗುಂಜಿ, ಬಿಲ್ಪತ್ರಿ, ಕದಂಬ ಸೇರಿದಂತೆ ವಿವಿಧ 61 ಜಾತಿಯ ಒಟ್ಟು 34 ಸಾವಿರ ಸಸಿಗಳನ್ನು ಬೆಳೆಸಲಾಗಿದೆ. ಈ ಬಾರಿ ಸಂಕೇಶ್ವರ ಎಪಿಎಂಸಿ ಪ್ರದೇಶ, ಹುಕ್ಕೇರಿ ತಹಸೀಲ್ದಾರ್‌ ಕಚೇರಿ, ಹೊಸಪೇಟನಲ್ಲಿ ಈ ಸಸಿಗಳನ್ನು ನೆಡಲು ಯೋಜನೆ ಸಿದ್ಧಪಡಿಸಲಾಗಿದೆ.ಸಾಮಾಜಿಕ ಅರಣ್ಯ ವಲಯ :

ಇನ್ನು ತಾಲೂಕಿನ ರೈತರ ಜಮೀನುಗಳ ಬದುವುಗಳ ಹಸೀರಿಕರಣಕ್ಕಾಗಿ, ನಗರ ಸೌಂದರ್ಯಕ್ಕಾಗಿ ಸಾಮಾಜಿಕ ಅರಣ್ಯ ವಲಯವು ಹೊಂಗೆ, ತಪಸಿ, ಬಸರಿ, ಗೋನಿ, ಬಾದಾಮ, ಬೇವು, ಅರಳಿ ಸೇರಿದಂತೆ ವಿವಿಧ ಜಾತಿಯ ಸುಮಾರು 26,800 ಸಸಿಗಳನ್ನು ಬೆಳೆಸಿದೆ. ಈ ಸಸಿಗಳನ್ನು ನೆಡಲು ನರೇಗಾ ಯೋಜನೆಯಡಿ ಮುಂಗಡ ಗುಂಡಿಗಳನ್ನು ತೆಗೆಯಲು ಅಗತ್ಯ ಕ್ರಿಯಾ ಯೋಜನೆ ರೂಪಿಸಲಾಗಿದೆ.

--------ಬಾಕ್ಸ್‌...

ಜೋಡೆತ್ತು ಪ್ರಸನ್, ಮಹಾಂತೇಶ ಶ್ರಮ

ಹಸಿರು ಹಬ್ಬದ ಸಾವಿರಾರು ಸಸಿಗಳ ಬೆಳವಣಿಗೆಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ಪ್ರಸನ್ ಬೆಲ್ಲದ, ಮಹಾಂತೇಶ ಸಜ್ಜನ ಜೋಡೆತ್ತುಗಳಂತೆ ಶ್ರಮಿಸಿದ್ದಾರೆ. ಈ ಮೂಲಕ ಬೆಲ್ಲದ ಮತ್ತು ಸಜ್ಜನ ಹಸಿರು ಪ್ರೀತಿ ಹುಟ್ಟುಹಾಕಿದ್ದಾರೆ. ಈ ಇಬ್ಬರು ಅಧಿಕಾರಿಗಳದ್ದು ಗಿಡಗಳನ್ನು ಬೆಳೆಸುವುದು ಅವರ ವೃತ್ತಿ. ಆದರೂ, ಹಸಿರೀಕರಣ ಅವರ ಪ್ರವೃತ್ತಿಯಾಗಿದೆ. ಹಾಗಾಗಿ ಅವರ ಕಾಳಜಿಯಿಂದ ಸಾವಿರಾರು ಸಸಿಗಳು ಬೆಳೆದು ಹಸಿರು ಚೆಲ್ಲುತ್ತಿವೆ.

----------------------

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಹುಕ್ಕೇರಿ ತಾಲೂಕಿನ ವಿವಿಧೆಡೆ ನೆಡಲು ಹಿಡಕಲ್ ಡ್ಯಾಂ ಸಸ್ಯ ಸಮೃದ್ಧಿ ಸಸ್ಯಪಾಲನಾಲಯದಲ್ಲಿ ನಾನಾ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ಹದ ಮಳೆ ಸುರಿಯುತ್ತಿದ್ದು ಶೀಘ್ರವೇ ಸಸಿ ನೆಡುವ ಕಾರ್ಯ ಆರಂಭಿಸಲಾಗುವುದು.

-ಪ್ರಸನ್ ಬೆಲ್ಲದ, ಪ್ರಾದೇಶಿಕ ಆರ್‌ಎಫ್‌ಒ

-----ನೆಟ್ಟ ಸಸಿಗಳ ಪೋಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಪರಿಸರ ಪ್ರಜ್ಞೆ ಮೂಡಿಸಲು, ಅರಣ್ಯೀಕರಣಕ್ಕೆ ಪ್ರತಿಯೊಬ್ಬರು ಒಂದು ಸಸಿಯನ್ನಾದರೂ ನೆಟ್ಟು ಪೋಷಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ.

-ಮಹಾಂತೇಶ ಸಜ್ಜನ, ಸಾಮಾಜಿಕ ಆರ್‌ಎಫ್‌ಒ

29ಎಚ್‌ಯುಕೆ-1

ಹುಕ್ಕೇರಿ ತಾಲೂಕು ಹಿಡಕಲ್ ಡ್ಯಾಮ್ ಸಸ್ಯ ಪಾಲನಾ ಕ್ಷೇತ್ರದಲ್ಲಿ ಬೆಳೆದ ಸಸಿ---------