ಸಾರಾಂಶ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಶಾಲೆ ಪುನಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂಬುದು ಅನೇಕ ಪಾಲಕರ ಅಭಿಪ್ರಾಯವಾಗಿದ್ದರೂ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಮಳೆ ಗಾಳಿಗೆ ಹೆಂಚು ಹಾರಿ ಹೋಗಿರುವುದು, ಗೋಡೆ ಕುಸಿದಿರುವುದು, ಮೇಲ್ಛಾವಣಿ ಬಿದ್ದಿರುವುದು ಹೀಗೆ ಜಿಲ್ಲೆಯಲ್ಲಿ 687 ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಗೆ ಕಾಯುತ್ತಿವೆ.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ೧ರಿಂದ ೧೦ನೇ ತರಗತಿವರೆಗೆ ಸುಮಾರು 1.75 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 1130 ಪ್ರಾಥಮಿಕ ಹಾಗೂ 154 ಪ್ರೌಢಶಾಲೆಗಳು ಸೇರಿದಂತೆ 1284 ಶಾಲೆಗಳಿವೆ. ಇವುಗಳಲ್ಲಿ ಸುಮಾರು 7800 ತರಗತಿ ಕೊಠಡಿಗಳಿವೆ. ಆದರೆ, ಪ್ರತಿ ವರ್ಷ ಅತಿವೃಷ್ಟಿ, ಮಳೆ ಗಾಳಿ ಸೇರಿದಂತೆ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಲವು ಶಾಲಾ ಕೊಠಡಿಗಳು ಹಾಳಾಗಿವೆ. ಇನ್ನು ಅನೇಕ ವರ್ಷಗಳಿಂದ ದುರಸ್ತಿಯನ್ನೇ ಕಾಣದೇ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಮಕ್ಕಳಿಗೆ ತರಗತಿ ಕೊರತೆ ಎದುರಾಗುತ್ತಿದ್ದು, ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ದುರಸ್ತಿಗೆ ಕಾಯುತ್ತಿರುವ ಕೊಠಡಿಗಳು: ಜಿಲ್ಲೆಯ 5500 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಇನ್ನುಳಿದ 687 ಕೊಠಡಿಗಳು ಸಣ್ಣಪುಟ್ಟ ದುರಸ್ತಿ, ಮೇಜರ್ ರಿಪೇರಿಗೆ ಕಾಯುತ್ತಿವೆ. ಅವುಗಳಲ್ಲಿ ಕಳೆದ ವರ್ಷ ಎನ್‌ಡಿಆರ್‌ಎಫ್, ವಿವೇಕ ಯೋಜನೆ, ಜಿಪಂ, ಶಿಗ್ಗಾಂವಿ ಮತ್ತು ಸವಣೂರು ತಾಲೂಕಿನಲ್ಲಿ ವಿಶೇಷ ಯೋಜನೆಯಡಿ 134 ಶಾಲೆ ದುರಸ್ತಿ ಸೇರಿದಂತೆ ವಿವಿಧ ಯೋಜನೆಗಳಲ್ಲಿ 346 ಶಾಲೆಗಳ ಕೊಠಡಿಗಳ ದುರಸ್ತಿ ಕಾಮಗಾರಿ ನಡೆದಿದೆ. ಚುನಾವಣಾ ನೀತಿ ಸಂಹಿತೆ, ಅನುದಾನ ಕೊರತೆ ಇತ್ಯಾದಿ ಸಬೂಬು ಹೇಳುತ್ತ ಸಣ್ಣಪುಟ್ಟ ದುರಸ್ತಿಯನ್ನೂ ಮಾಡದೇ ಈಗ ಮಳೆಗಾಲ ಶುರುವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚರಗೊಳ್ಳುತ್ತಿದ್ದಾರೆ. ಅನಿವಾರ್ಯವಾಗಿ ಒಂದೇ ಕೊಠಡಿಯಲ್ಲಿ ಮೂರು ನಾಲ್ಕು ತರಗತಿಗಳ ಮಕ್ಕಳನ್ನು ಕೂರಿಸಿ ಕಲಿಸುವ ಪರಿಸ್ಥಿತಿ ಪ್ರತಿ ವರ್ಷದಂತೆ ಈ ಸಲವೂ ಮುಂದುವರಿಯಲಿದೆ. ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಗೆ ಕೆಲವು ಶಾಲೆಗಳ ಕೊಠಡಿಗಳು ಸೋರುತ್ತಿವೆ. ಸೋರುತಿಹುದು: ಅನೇಕ ವರ್ಷಗಳ ಹಿಂದೆ ನಿರ್ಮಿಸಿದ್ದ ಸರ್ಕಾರಿ ಶಾಲೆಗಳ ಕಟ್ಟಡಗಳು ಹೆಂಚು, ತಗಡಿನಿಂದ ಕೂಡಿವೆ. ಈ ಹೆಂಚುಗಳು ಮಳೆ ಗಾಳಿಗೆ ಹಾರಿಹೋಗಿದ್ದರೂ ಅದನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯವೂ ಆಗುತ್ತಿಲ್ಲ. ಇದರಿಂದಾಗಿ ಹೆಂಚಿನ ಕಟ್ಟಡಗಳು ಮಳೆ ಬಂದರೆ ಸೋರುವುದು ಸಾಮಾನ್ಯವಾಗಿವೆ.ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್‌ಸಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಕಟ್ಟಿದ ಕೆಲವೇ ವರ್ಷಗಳಲ್ಲಿ ಬಿರುಕು ಬಿಟ್ಟು ಅವು ಸೋರುವಂತಾಗಿವೆ. ಕೆಲವು ಶಾಲೆಗಳಲ್ಲಿ ಸಿಮೆಂಟ್ ತುಂಡುಗಳು ಮಕ್ಕಳ ತಲೆಮೇಲೆ ಬೀಳುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಅಂಥ ಅಪಾಯಕರ ಕಟ್ಟಡಗಳಲ್ಲೇ ಅನಿವಾರ್ಯವಾಗಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ದುರಸ್ತಿ ಭಾಗ್ಯ: ೨೦೨೨-೨೩ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹದಿಂದ ನೂರಾರು ಶಾಲೆಗಳಿಗೆ ಹಾನಿಯಾಗಿತ್ತು. ಎನ್‌ಡಿಆರ್‌ಎಫ್ ಯೋಜನೆಯಲ್ಲಿ ೧೩.೩ ಕೋಟಿ ರು. ಅನುದಾನ ಮಂಜೂರಾಗಿದ್ದು, ೩೩೯ ಶಾಲೆಗಳಲ್ಲಿ ೭೫೩ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯ ಸರ್ಕಾರದ ವಿವೇಕ ಯೋಜನೆಯಡಿ ೨೧ ಕೋಟಿ ರು.ಅನುದಾನದಲ್ಲಿ ೧೯೭ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕೆಲವು ಕಡೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ವಿವೇಕ ಯೋಜನೆಯಡಿ ಮಂಜೂರಾದ ೧೪೭ ಕೊಠಡಿಗಳಲ್ಲಿ ಕೆಲವು ಪೂರ್ಣಗೊಂಡಿಲ್ಲ. ಇವು ಪೂರ್ಣಗೊಂಡು ಬಳಕೆಗೆ ಸಿಗುವ ವೇಳೆಗೆ ಶಾಲೆಗಳಲ್ಲಿ ಕೊಠಡಿ ಕೊರತೆಯ ನಡುವೆಯೇ ಪಾಠ ಪ್ರವಚನ ನಡೆಸಬೇಕಿದೆ.ಆಂಗ್ಲ ಮಾಧ್ಯಮ ಇದ್ದಲ್ಲಿ ಕೊಠಡಿ ಕೊರತೆ: ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರಕ್ಕೆ ಸರ್ಕಾರಿ ಶಾಲೆಗಳು ನಲುಗುತ್ತಿರುವುದು ಹೊಸದೇನಲ್ಲ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಈ ಮಧ್ಯೆ ಅನೇಕ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ, ಎಲ್‌ಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆದರೆ, ಅಲ್ಲಿ ತರಗತಿ ಕೋಣೆಗಳಿಲ್ಲದೇ ಸಮಸ್ಯೆ ಎದುರಾಗುತ್ತಿದೆ. ಇಂಗ್ಲಿಷ್ ಮಾಧ್ಯಮ ಇರುವ ಶಾಲೆಗಳಲ್ಲಿ ಒಂದೇ ತರಗತಿಗೆ ಎರಡು ಮಾಧ್ಯಮವಿರುವುದರಿಂದ ಕೊಠಡಿಗಳಿಲ್ಲದೇ ಸಮಸ್ಯೆಯಾಗುತ್ತಿದೆ. ಈ ವರ್ಷ ೧ರಿಂದ೫ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಇರಲಿದ್ದು, ಮತ್ತಷ್ಟು ಸಮಸ್ಯೆ ನಿಶ್ಚಿತ ಎನ್ನುವುದು ಪಾಲಕರ ಅಭಿಪ್ರಾಯವಾಗಿದೆ. ನೂರಾರು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಬಾಕಿಯಿದೆ. ಆಟದ ಮೈದಾನ, ಶಾಲೆಗಳಿಗೆ ಕಾಂಪೌಂಡ್ ಬೇಡಿಕೆಯಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿ ಶೌಚಾಲಯಗಳಿದ್ದರೂ ಅವು ಬಳಕೆಗೆ ಬಾರದಂತಾಗಿವೆ. ಇವೆಲ್ಲ ಕಾರಣಗಳಿಂದ ಗ್ರಾಮೀಣ ಭಾಗದ ಪಾಲಕರೂ ನಗರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪರಿಪಾಠ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಅನೇಕ ಶಾಲೆಗಳಲ್ಲಿ ಕೊಠಡಿ ಸಮಸ್ಯೆಯಿದೆ. ಸಣ್ಣಪುಟ್ಟ ದುರಸ್ತಿ, ಮರುನಿರ್ಮಾಣ ಮಾಡಬೇಕಾದ ಕೊಠಡಿಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಅನೇಕ ಕೊಠಡಿ ನಿರ್ಮಾಣ ಕಾಮಗಾರಿ ನಡೆದಿದೆ. ಶಿಥಿಲಾವಸ್ಥೆ ಇರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಹಾವೇರಿ ಡಿಡಿಪಿಐ ಸುರೇಶ ಹುಗ್ಗಿ ಹೇಳಿದರು.