ದ್ವೇಷ ಭಾಷಣದ ಮೂಲಕ ಸಮಾಜದ ಸಾಮರಸ್ಯ ಕದಡುವ ಕೃತ್ಯ ತಡೆಯುವ ಉದ್ದೇಶ ಹೊಂದಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ಪ್ರತಿಬಂಧಕ) ವಿಧೇಯಕವನ್ನು ಬುಧವಾರ ಸರ್ಕಾರ ಮಂಡಿಸಿತು.
ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸಭೆ
ದ್ವೇಷ ಭಾಷಣದ ಮೂಲಕ ಸಮಾಜದ ಸಾಮರಸ್ಯ ಕದಡುವ ಕೃತ್ಯ ತಡೆಯುವ ಉದ್ದೇಶ ಹೊಂದಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ಪ್ರತಿಬಂಧಕ) ವಿಧೇಯಕವನ್ನು ಬುಧವಾರ ಸರ್ಕಾರ ಮಂಡಿಸಿತು. ದ್ವೇಷ ಹರಡುವವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ವಿಧಿಸುವುದು, ಸಂತ್ರಸ್ತರಿಗೆ ಪರಿಹಾರ ನೀಡುವುದು ಸೇರಿ ಹಲವು ಕಠಿಣ ಅಂಶಗಳನ್ನು ಈ ವಿಧೇಯಕ ಹೊಂದಿದೆ.ಪ್ರತಿ ಪಕ್ಷಗಳ ವಿರೋಧದ ನಡುವೆಯೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧೇಯಕ ಮಂಡಿಸಿದರು. ದ್ವೇಷ ಭಾಷಣ ಮತ್ತು ದ್ವೇಷ ಹರಡುವ ಅಪರಾಧ ಎಸಗುವವರಿಗೆ ಒಂದು ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ, 50 ಸಾವಿರ ರು. ದಂಡ ವಿಧಿಸುವ ಅವಕಾಶವಿದೆ. ಜತೆಗೆ, ಪುನರಾವರ್ತಿತ ಅಪರಾಧಗಳಿಗೆ ಎರಡು ವರ್ಷಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರು.ವರೆಗೆ ದಂಡ ವಿಧಿಸಬಹುದು. ಯಾವುದೇ ಸಂಘ-ಸಂಸ್ಥೆ ಅಪರಾಧ ಎಸಗಿದರೆ ಆ ಸಂಘ-ಸಂಸ್ಥೆಯ ಜವಾಬ್ದಾರನಾಗಿರುವ ಪ್ರತಿಯೊಬ್ಬರೂ ಅದರಲ್ಲಿ ಭಾಗೀದಾರರಾಗಲಿದ್ದಾರೆ. ಈ ಅಪರಾಧವನ್ನು ಜಾಮೀನು ರಹಿತ ಎಂದು ಪರಿಗಣಿಸಲಾಗುತ್ತಿದ್ದು, ಪ್ರಥಮ ದರ್ಜೆ ಮಾಜಿಸ್ಟ್ರೇಟ್ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ದ್ವೇಷ ಭಾಷಣದಿಂದ ಸಂತ್ರಸ್ತರಾದವರಿಗೆ ನ್ಯಾಯಾಲಯದ ತೀರ್ಮಾನ ಮೂಲಕ ಪರಿಹಾರ ಕೊಡಿಸಲು ಅವಕಾಶವಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.ವಿಪಕ್ಷಗಳ ವಿರೋಧ:
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ಪ್ರತಿಬಂಧಕ) ವಿಧೇಯಕ ಮಂಡನೆ ಸಂದರ್ಭದಲ್ಲೇ ವಿರೋಧ ಪಕ್ಷ ಸದಸ್ಯರು ಗದ್ದಲ ಎಬ್ಬಿಸಿದರು. ಸ್ಪೀಕರ್ ಯು.ಟಿ.ಖಾದರ್ ಅವರು ವಿಧೇಯಕ ಮಂಡನೆಗೆ ಧ್ವನಿಮತದ ಮೂಲಕ ಅನುಮೋದನೆ ನೀಡುವಂತೆ ಕೋರಿದಾಗ ವಿರೋಧ ಪಕ್ಷದ ಶಾಸಕರು ಒಕ್ಕೊಲರಲಿಂದ ‘ಇಲ್ಲ’ ಎಂದು ಕೂಗಿದರು. ಬಿಜೆಪಿಯ ಸುನೀಲ್ ಕುಮಾರ್ ವಿಧೇಯಕವನ್ನು ಮತಕ್ಕೆ ಹಾಕುವಂತೆ ಆಗ್ರಹಿಸಿದರು. ಅದರ ನಡುವೆಯೂ ವಿಧೇಯಕ ಮಂಡಿಸಲಾಯಿತು.-ಬಾಕ್ಸ್-
ದ್ವೇಷ ಭಾಷಣ-ಅಪರಾಧ ಎಂದರೇನು?:ವಿಧೇಯಕದಲ್ಲಿರುವಂತೆ ಯಾವುದೇ ಪೂರ್ವಕಲ್ಪಿತ ಹಿತಾಸಕ್ತಿ ಸಾಧಿಸಲು, ಬದುಕಿರುವ ವ್ಯಕ್ತಿ ಅಥವಾ ಮೃತ ವ್ಯಕ್ತಿಗಳ ಮೇಲೆ, ಯಾವುದೇ ಸಮುದಾಯದ ಮೇಲೆ ವೈರತ್ವದ ಅಥವಾ ದ್ವೇಷ ಪೂರಿತ ಮಾತುಗಳನ್ನಾಡಿದರೆ, ಅವರ ಮಾತಿನಿಂದ ಸಮಾಜದಲ್ಲಿ ಕೆಡುಕಿನ ಭಾವನೆ ಮೂಡಿಸುವಂತಿದ್ದರೆ ಅದನ್ನು ದ್ವೇಷ ಭಾಷಣ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ದ್ವೇಷ ಭಾಷಣದ ಪ್ರಚಾರ, ಅದರಿಂದ ದ್ವೇಷ ಹರಡುವುದು, ಪ್ರಚೋದಿಸುವುದನ್ನು ದ್ವೇಷ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಸಾರ್ವಜನಿಕರ ದೃಷ್ಟಿಗೆ ಬೀಳುವಂತಹ ಮೌಖಿಕ, ಮುದ್ರಣ, ಪ್ರಕಟಣೆ, ವಿದ್ಯುನ್ಮಾನ ವಿಧಾನಗಳ ಮೂಲಕ ದ್ವೇಷ ಭಾಷಣ ಹರಡುವುದನ್ನೂ ದ್ವೇಷ ಅಪರಾಧ ಎಂದು ವಿಧೇಯದಲ್ಲಿ ಉಲ್ಲೇಖಿಸಲಾಗಿದೆ. ವಿಧೇಯಕದಡಿ ಶಿಕ್ಷೆ ಏನು?
- ಒಂದು ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ- 50 ಸಾವಿರ ರು. ದಂಡ ವಿಧಿಸಲು ವಿಧೇಯಕದಲ್ಲಿ ಅವಕಾಶ- ಪುನರಾವರ್ತಿತ ಅಪರಾಧಗಳಿಗೆ 2ರಿಂದ 10 ವರ್ಷವರೆಗೆ ಜೈಲು- 1 ಲಕ್ಷ ರು.ವರೆಗೆ ದಂಡ ವಿಧಿಸಲೂ ವಿಧೇಯದಲ್ಲಿ ಅವಕಾಶ- ಸಂಘ-ಸಂಸ್ಥೆ ಅಪರಾಧ ಎಸಗಿದ್ರೆ ಪದಾಧಿಕಾರಿಗಳಿಗೆ ಸಂಕಷ್ಟ- ದ್ವೇಷ ಭಾಷಣ ಜಾಮೀನು ರಹಿತ ಅಪರಾಧವಾಗಿ ಪರಿಗಣನೆ- ಪ್ರಥಮ ದರ್ಜೆ ಮಾಜಿಸ್ಟ್ರೇಟ್‌ರಿಂದ ಪ್ರಕರಣದ ವಿಚಾರಣೆ - ಸಂತ್ರಸ್ತರಿಗೆ ಕೋರ್ಟ್ ಮೂಲಕ ಪರಿಹಾರ ಪಡೆಯಲೂ ಅವಕಾಶದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರ ಹಾಗೂ ಯಾವುದೇ ವ್ಯಕ್ತಿ, ಸಮೂಹ ಅಥವಾ ಸಂಸ್ಥೆಗಳ ವಿರುದ್ಧ ಸಾಮರಸ್ಯ ಕದಡುವ, ದ್ವೇಷ ಹುಟ್ಟಿಸುವ ಅಪರಾಧಗಳನ್ನು ಪ್ರತಿಬಂಧಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಲಿಖಿತ ಅಥವಾ ಮೌಖಿಕವಾಗಿ, ಸಂಕೇತಗಳ ಮೂಲಕ, ವಿದ್ಯುನ್ಮಾನ ಸಂವಹನದ ಮೂಲಕ ದ್ವೇಷ ಹರಡುವುದನ್ನು ನೂತನ ವಿಧೇಯಕದ ಅಡಿ ಅಪರಾಧ ಎಂದು ಪರಿಗಣಿಸುವ ಅವಕಾಶವಿದೆ.ಧರ್ಮ, ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಲಿಂಗತ್ವ, ಲೈಂಗಿಕ ಮನೋಗುಣ, ಜನ್ಮ ಸ್ಥಳ, ವಾಸಸ್ಥಳ, ಭಾಷೆ, ನ್ಯೂನತೆ ಅಥವಾ ಪಂಗಡಗಳ ವಿರುದ್ಧ ಯಾವುದೇ ರೀತಿ ದ್ವೇಷ ಹರಡುವ ಕೆಲಸ ಮಾಡಿದರೆ ಅಂತಹವರ ವಿರುದ್ಧ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ.