ಸಾರಾಂಶ
ಗದಗ: ಪ್ರಕೃತಿಯ ಮಡಿಲು ಬಿಟ್ಟು ಮಾನವ ಜೀವಿ ಬದುಕಲು ಸಾಧ್ಯವಿಲ್ಲ, ಇಂತಹ ಪರಿಸರ ಉಳಿಸಿ ಬೆಳೆಸಿ ಹಸಿರು ಸಮುದಾಯ ನಿರ್ಮಿಸುವ ಸಂಕಲ್ಪದಿಂದ ತಾಲೂಕಿನ ಬಿಂಕದಕಟ್ಟಿ ಹೈಟೆಕ್ ನರ್ಸಿಂಗ್ ಕೇಂದ್ರದಲ್ಲಿ 70 ಸಾವಿರ ವಿವಿಧ ತಳಿಯ ಸಸಿಗಳು ಸಿದ್ಧವಾಗಿವೆ.
ಕೇಂದ್ರದಿಂದ ಪ್ರಸಕ್ತ ವರ್ಷ 70 ಸಾವಿರ ಸಸಿ ವಿತರಿಸುವ ಗುರಿ ಹೊಂದಿದ್ದು, ಗದಗ ತಾಲೂಕಿನಾದ್ಯಂತ ಹಬ್ಬಿರುವ ಸಾಮಾಜಿಕ ವಲಯದ ವ್ಯಾಪ್ತಿಯಲ್ಲಿ ಹಸಿರು ಸಮುದಾಯ ಸೃಷ್ಠಿಸುವ ಪ್ರಮುಖ ಉದ್ದೇಶದಿಂದ ಆರ್.ಎಸ್.ಪಿ.ಡಿ, ಆರ್.ಕೆ.ವಿ.ವೈ ಹಾಗೂ ನರೇಗಾ ಯೋಜನೆಗಳಡಿಯಲ್ಲಿ ರಿಯಾಯತಿ ದರದಲ್ಲಿ ಸಸಿ ವಿತರಿಸಲಾಗುತ್ತಿದೆ.ಮಾರುಕಟ್ಟೆಯಲ್ಲಿ ಒಂದು ವರ್ಷದ ಸಸಿಗೆ ₹40 ಗಳಿದ್ದರೇ ₹6ಗಳಲ್ಲಿ ಸಸಿಗಳನ್ನು ಕೇಂದ್ರದಲ್ಲಿ ವಿತರಿಸುವ ಮೂಲಕ ಸಸಿ ನೆಡಲು ಪ್ರೇರಣೆ ನೀಡಿದೆ.
ವಿವಿಧ ಬಗೆಯ ಸಸಿಗಳು:ನುಗ್ಗಿ, ಸಾಗವಾನಿ, ಹುಣಸಿ, ಮಹಾಗಣಿ, ನೀರಲ್, ನೆಲ್ಲಿ, ಬಿದಿರು, ಬೇವು, ಹೆಬ್ಬೇವು, ಶ್ರೀಗಂಧ, ಕರಿಬೇವು, ಚತುರ್ಮುಖ, ಸಂಪಿಗೆ, ಬಂಗಾಳಿ, ಗಜಗ, ತಬುಬಿಯ, ಶಿವನಿ, ಹೊಳೆಮತ್ತಿ, ಚರಿ,ಬಳುಲ, ಹೊಂಗೆ, ಪೇರಲ್, ಮಾವು, ಲಿಂಬಿ, ಸೀತಾಫಲ್, ಅರಳಿ, ಬಸರಿ, ಬಸವನಪಾದ, ಆಕಾಶ ಮಲ್ಲಿಗೆ, ಜವಾನಿಕಾ, ಕಾಡು ಬದಾಮಿ, ತಪಸ್, ಅತ್ತಿ, ಚಳ್ಳ,ಗುಲಮೊಹರ್, ಸಿರಸಲ್, ಸಿಹಿ ಹುಣಸಿ, ರೇನ ಟ್ರೀ ಸೇರಿದಂತೆ ವಿವಿಧ ತಳಿಯ ಸಸಿಗಳು ಇಲ್ಲಿ ಲಭ್ಯವಿವೆ.
ಪರಿಸರ ಸೃಷ್ಠಿಗೆ ಸಸಿಗಳ ಬೆಳವಣಿಗೆ ಅತಿ ಮುಖ್ಯವಾಗಿರುವ ಪ್ರಮುಖ ಉದ್ದೇಶದಿಂದ ಕಳೆದ ವರ್ಷ 48 ಸಾವಿರ ಸಸಿ ವಿತರಿಸಲಾಗಿತ್ತು, ಪ್ರಸಕ್ತ ವರ್ಷ 70 ಸಾವಿರ ಸಸಿಗಳನ್ನು ವಿತರಿಸುವ ಗುರಿ ಹೊಂದಿದೆ. ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರೈತರು ತಮ್ಮ ಉದ್ಯೋಗ ಗುರುತಿನ ಚೀಟಿಯ ಮೂಲಕ ಉಚಿತವಾಗಿ ಸಸಿ ಪಡೆಯಬಹುದು ಎಂದು ಗದಗ ಸಾಮಾಜಿಕ ವಲಯದ ಅರಣ್ಯ ಅಧಿಕಾರಿ ನವೀನ ನಾಯ್ಕ ತಿಳಿಸಿದ್ದಾರೆ.ವಿವಿಧ ಸಸಿ ತಳಿಗಳಿಗೆ ಹೆಸರುವಾಸಿಯಾಗಿರುವ ಬಿಂಕದಕಟ್ಟಿ ಹೈಟೆಕ್ ನರ್ಸರಿ ಕೇಂದ್ರದಲ್ಲಿ ಎಲ್ಲ ರೀತಿಯ ಸಸಿಗಳು ಲಭ್ಯ ಇವೆ. ಬೇಸಿಗೆ ಕಾಲದಲ್ಲಿ ನಮಗೆ ಬೇಕಾದ ಬೀಜಗಳನ್ನು ಗದಗ ಜಿಲ್ಲೆಯಾದ್ಯಂತ ಸಂಚರಿಸಿ ಶೇಖರಣೆ ಮಾಡುತ್ತೇವೆ, ಸಿಗಲಾರದ ಬೀಜಗಳನ್ನು ಇತರೆ ಜಿಲ್ಲೆಗಳಿಂದ ತರಿಸುತ್ತೇವೆ. ಶ್ರೀಗಂಧ, ಕಬೂಬಿಯ, ನುಗ್ಗಿ, ಹೆಬ್ಬೇವು, ಬಿದರ ಬೀಜಗಳನ್ನು ಮೈಸೂರು, ದಾವಣಗೇರಿ, ಶಿವಮೊಗ್ಗದಿಂದ ತರಿಸುತ್ತೇವೆ. ಬೀಜಗಳಿಂದ ಸಸಿ ಬೆಳೆದು ಒಂದು ವರ್ಷ ಆದ ಬಳಿಕ ಪೂರೈಕೆ ಮಾಡುತ್ತೇವೆ ಎಂದು ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ. ಲಮಾಣಿ ಹೇಳಿದರು.