ಉಡುಪಿ: ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗಕ್ಕೆ ಪ್ರತಿ ತಿಂಗಳು ಸರ್ಕಾರದ ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ 700ರಿಂದ 800 ದೂರುಗಳು ಬರುತ್ತವೆ. ಕೆಲವು ತಿಂಗಳಲ್ಲಿ ಗರಿಷ್ಠ 1200ರಷ್ಟು ದೂರುಗಳು ಬಂದದ್ದಿದೆ ಎಂದು ಆಯೋಗದ ಪ್ರಭಾರ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹೇಳಿದ್ದಾರೆ. ಗುರುವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಆಯೋಗಕ್ಕೆ ದಾಖಲಾಗಿರುವ ದೂರುಗಳ ವಿಚಾರಣೆ, ವಿಲೇವಾರಿ, ಸಾರ್ವಜನಿಕರಿಂದ ದೂರು ಸ್ವೀಕಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ 2023ರಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಸುಮಾರು 8500ರಷ್ಟು ದೂರುಗಳು ಬಾಕಿ ಇದ್ದವು. ಅವುಗಳಲ್ಲೀಗ ಸುಮಾರು 5000 ದೂರುಗಳನ್ನು ಇತ್ಯರ್ಥ ಮಾಡಲಾಗಿದ್ದು, 3500 ದೂರುಗಳು ಬಾಕಿ ಇವೆ, ಪ್ರತಿ ದಿನವೂ ದೂರಗಳ ಇತ್ಯರ್ಥವಾಗುತ್ತದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಹೊಸ ದೂರುಗಳ ದಾಖಲಾಗುತ್ತಲೇ ಇವೆ ಎಂದರು.ಈ ದೂರುಗಳಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ದೂರುಗಳೇ ಅಧಿಕವಾಗಿವೆ. ಬೆಂಗಳೂರಿನಲ್ಲಂತೂ ಅನಗತ್ಯವಾಗಿ ಠಾಣೆಗೆ ಕರೆದು ವಿಚಾರಣೆ ನಡೆಸಿದ ದೂರುಗಳೇ ಜಾಸ್ತಿ ಇರುತ್ತವೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಮೇಲೂ ಸಾಕಷ್ಟು ದೂರುಗಳು ಬರುತ್ತವೆ ಎಂದು ಹೇಳಿದರು. ಉಡುಪಿ ಜಿಲ್ಲೆಯಲ್ಲಿ 12 ಹೊಸ ದೂರು ದಾಖಲು: ಉಡುಪಿ ಜಿಲ್ಲೆಯಲ್ಲಿ ಕೇವಲ 9 ದೂರುಗಳು ವಿಲೇವಾರಿಗೆ ಬಾಕಿ ಇದ್ದವು. ಅವುಗಳಲ್ಲಿ 8 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, ಹಾಜಿ ಅಬ್ದುಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸಿದ್ದ ಬಗ್ಗೆ ಒಂದು ದೂರನ್ನು ರಾಜ್ಯ ಆರೋಗ್ಯ ಇಲಾಖೆಗೆ ಶಿಪಾರಸು ಮಾಡಲಾಗಿದ್ದು, ಅಲ್ಲಿ ಈ ಬಗ್ಗೆ ತೀರ್ಮಾನವಾಗಬೇಕಾಗಿದೆ ಎಂದರು.ಈ ದಿನ ಜಿಲ್ಲೆಯಲ್ಲಿ ಹೊಸದಾಗಿ 12 ದೂರುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ. ಅವುಗಳು ಕಂದಾಯ, ಜಿಪಂ ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ದೂರುಗಳಾಗಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಕಲಿ ಆಯೋಗ, ಪರಿಷತ್, ಮಂಡಳಿ !: ರಾಜ್ಯದಲ್ಲಿ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿರುವ ಮಾನವ ಹಕ್ಕು ಆಯೋಗವೇ ಅಧಿಕೃತವಾದುದು. ಆದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಪರಿಷತ್. ಮಂಡಳಿ ಎಂದೆಲ್ಲ ಸಾಕಷ್ಟು ನಕಲಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಕೆಲವು ನೋಂದಾಯಿತ, ಇನ್ನು ಕೆಲವು ಅಕ್ರಮವಾಗಿ ಕಾರ್‍ಯಾಚರಿಸುತ್ತಿವೆ. ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನಪೇಕ್ಷಿತ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿವೆ. ಉಡುಪಿ ಜಿಲ್ಲೆಯಲ್ಲೂ ಇಂತಹ ನಕಲಿ ಆಯೋಗದ ಬಗ್ಗೆ ದೂರು ಬಂದಿದೆ. ಇಂತಹ ಸಂಸ್ಥೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.ಜೈಲು, ಠಾಣೆ, ಆಸ್ಪತ್ರೆ, ಹಾಸ್ಟೆಲ್ ಭೇಟಿ: ಇದೇ ಸಂದರ್ಭ ರಾಜ್ಯ ಮಾನವ ಹಕ್ಕು ಆಯೋಗವು ಉಡುಪಿಯ ಸಬ್ ಜೈಲು, ಜಿಲ್ಲಾಸ್ಪತ್ರೆ, ಹೊಸ ಕಟ್ಟಡ, ಮಣಿಪಾಲ ಪೊಲೀಸ್ ಠಾಣೆ, ವಿದ್ಯಾರ್ಥಿಗಳ ಹಾಸ್ಟೆಲ್, ಸಬ್ ರಿಜಿಸ್ಚ್ರಾರ್ ಕಚೇರಿಗಳಿಗೂ ಧಿಡೀರ್ ಭೇಟಿ ನೀಡಿದರು. ಆದರೆ ತಮಗೆ ಯಾವುದೇ ಅವ್ಯವಸ್ಥೆ ಅಥವಾ ದೂರುಗಳು ಕೇಳಿ ಬರಲಿಲ್ಲ ಎಂದು ಆಯೋಗದ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಿಗೋಡಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉಪಸ್ಥಿತರಿದ್ದರು.