ಸಾರಾಂಶ
16ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಉಡುಪಿಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ನ.14ರಿಂದ 20ರ ವರೆಗೆ ಜಿಲ್ಲಾಮಟ್ಟದ ಹಾಗೂ ರಾಜ್ಯಮಟ್ಟದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ.
ಈ ಬಗ್ಗೆ ಮಂಗಳವಾರ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.ಈ ಬಾರಿ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ಮುಖ್ಯ ವಿಷಯದ ಮೇಲೆ ಸಪ್ತಾಹವನ್ನು ಆಚರಿಸಲಾಗುತ್ತಿದೆ.
14ರಂದು ಸಹಕಾರ ಸಪ್ತಾಹವನ್ನು, ‘ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರಿ ಚಳುವಳಿಯನ್ನು ಬಲಪಡಿಸುವುದು’ ಎಂಬ ಕಾರ್ಯಕ್ರಮದಲ್ಲಿ ಕುಂದಾಪುರದ ಮಂದಾರ್ತಿಯ ಶ್ರೀ ದುರ್ಗಾ ಸಹಕಾರ ಸೌಧದ ಶ್ರೀ ಚಾಮುಂಡೇಶ್ವರಿ ಸಭಾಂಗಣದಲ್ಲಿ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅದ್ಯಕ್ಷತೆ ವಹಿಸಲಿದ್ದಾರೆ.15ರಂದು ‘ಸಹಕಾರ ಸಂಸ್ಥೆಗಳಲ್ಲಿ ಅನ್ವೇಷಣೆ, ತಾಂತ್ರಿಕತೆ ಮತ್ತು ಉತ್ತಮ ಆಡಳಿತ’ ಎಂಬ ಕಾರ್ಯಕ್ರಮವನ್ನು ಕಾರ್ಕಳದ ಜೋಡುರಸ್ತೆಯ ರಾಜಾಪುರ ಸಭಾಭವನದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ರಾಜಪುರ ಸಾರಸ್ವತ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ.
16ರಂದು ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ, ರಾಜ್ಯ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಭಾಗವಹಿಸಲಿದ್ದಾರೆ.17ರಂದು ‘ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’ ಕಾರ್ಯಕ್ರಮವು ಬೈಂದೂರಿನ ಶ್ರೀ ಕೃಷ್ಣ ಲಲಿತಕಲಾ ಮಂದಿರದಲ್ಲಿ ನಡೆಯಲಿದ್ದು, ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಲಿದ್ದಾರೆ. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
18ರಂದು ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು’ ಎಂಬ ಕಾರ್ಯಕ್ರಮವನ್ನು ಕಾಪು ತಾಲೂಕಿನ ಇನ್ನಂಜೆಯ ಸಹಕಾರ ಸೌರಭ ಸಭಾಂಗಣಗದಲ್ಲಿ ಆಯೋಜಿಸಲಾಗಿದ್ದು, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಉದ್ಘಾಟಿಸಲಿದ್ದಾರೆ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ.19ರಂದು ‘ಮಹಿಳೆಯರು, ಯುವಕರು ಮತ್ತು ಅಬಲ ವರ್ಗಗಳಿಗಾಗಿ ಸಹಾಕರ ಸಂಸ್ಥೆಗಳು’ ಕಾರ್ಯಕ್ರಮವು ಕುಂದಾಪುರದ ಬೆಳ್ವೆಯ ವಾಸುಕಿ ಸಭಾಭವನದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
20ರಂದು ‘ಸಪ್ತಾಹದ ಸಮಾರೋಪ ಸಮಾರಂಭ, ಉತ್ತಮ ವಿಶ್ವ ನಿರ್ಮಾಣದ ಹಾದಿ’ ಎಂಬ ಕಾರ್ಯಕ್ರಮ ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಾಸಕ ಯಶಪಾಲ್ ಸುವರ್ಣ ಭಾಗವಹಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಅಲೆವೂರು ಹರೀಶ್ ಕಿಣಿ, ಶ್ರೀಧರ್ ಬಿ.ಎಸ್. ಮತ್ತು ಸಿಇಓ ಅನುಷಾ ಕೋಟ್ಯಾನ್ ಉಪಸ್ಥಿತರಿದ್ದರು.