794 ಕೊಠಡಿಗಳು ಶಿಥಿಲ, 300 ಶಿಕ್ಷಕರ ಕೊರತೆ

| Published : May 29 2024, 12:58 AM IST

ಸಾರಾಂಶ

ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಹಾಗೂ ಮೊರಾರ್ಜಿ ಶಾಲೆಗಳು ಸೇರಿ ಒಟ್ಟು 290 ಸರ್ಕಾರಿ ಶಾಲೆಗಳಿವೆ. 34568 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ 1815 ಕೊಠಡಿಗಳಿವೆ. ಅದರಲ್ಲಿ 373 ಕೊಠಡಿಗಳನ್ನು ನೆಲಸಮ ಮಾಡಬೇಕಿದೆ. 421 ಕೊಠಡಿಗಳು ದುರಸ್ತಿಗೊಳ್ಳಬೇಕಾಗಿದೆ.

ಬಿ. ರಾಮಪ್ರಸಾದ್ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಈ ವರ್ಷ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಮುಂದೆಯೂ ಉತ್ತಮ ಮಳೆ ಬೀಳುವ ಸೂಚನೆಗಳನ್ನು ಹವಾಮಾನ ಇಲಾಖೆಯವರು ನೀಡಿದ್ದಾರೆ, ಇಂತಹ ಸಂದರ್ಭದಲ್ಲಿ ತಾಲೂಕಿನಲ್ಲಿ 794 ಶಿಥಿಲ ಕೊಠಡಿಗಳ ಹಾಗೂ 300 ಶಿಕ್ಷಕರ ಕೊರತೆ ಮಧ್ಯೆ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಹಾಗೂ ಮೊರಾರ್ಜಿ ಶಾಲೆಗಳು ಸೇರಿ ಒಟ್ಟು 290 ಸರ್ಕಾರಿ ಶಾಲೆಗಳಿವೆ. 34568 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗಳಲ್ಲಿ 1815 ಕೊಠಡಿಗಳಿವೆ. ಅದರಲ್ಲಿ 373 ಕೊಠಡಿಗಳನ್ನು ನೆಲಸಮ ಮಾಡಬೇಕಿದೆ. 421 ಕೊಠಡಿಗಳು ದುರಸ್ತಿಗೊಳ್ಳಬೇಕಾಗಿದೆ.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಜಯಗಳಿಸಿದ ಒಂದು ವರ್ಷದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಡಿ 57 ಶಾಲೆಗಳ ಛಾವಣಿಗೆ ಕಬ್ಬಿಣದ ಶೀಟ್‌ಗಳನ್ನು ಹಾಕಿ ಸೋರುವುದನ್ನು ತಪ್ಪಿಸಲಾಗಿದೆ. ಇನ್ನೂ 100 ಶಾಲೆಗಳ ಕಟ್ಟಡಗಳ ದುರಸ್ತಿ ಕಾರ್ಯದ ಕ್ರಿಯಾಯೋಜನೆಗೆ ಒಪ್ಪಿಗೆ ದೊರೆತು ಶೀಘ್ರ ಕೆಲಸ ಆರಂಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ಕೊಠಡಿಗಳು ದುರಸ್ತಿಗಾಗಿ ಕಾಯುತ್ತಿವೆ. ಕೆಆರ್‌ಐಡಿಎಲ್‌ ಏಜನ್ಸಿಯಿಂದ ಕಾಮಗಾರಿ ಅಪೂರ್ಣ ಗೊಂಡು ಸ್ಥಗಿತಗೊಂಡೇ 2-3 ವರ್ಷಗಳೇ ಕಳೆದಿವೆ.

300 ಶಿಕ್ಷಕರ ಕೊರತೆ

ಶಾಲಾ ಕೊಠಡಿಗಳ ಪರಿಸ್ಥಿತಿ ಈ ರೀತಿಯಾದರೆ ಇನ್ನು ತಾಲೂಕಿನಲ್ಲಿ ಅಂದಾಜು 300 ಶಿಕ್ಷಕರ ಕೊರತೆ ಇದೆ. ಮೇ 31ರಿಂದ ಶಾಲೆಗೆ ಮಕ್ಕಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಶಿಕ್ಷಕರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ವರೆಗೂ ಅತಿಥಿ ಶಿಕ್ಷಕರ ನೇಮಕದ ಬಗ್ಗೆ ಸರ್ಕಾರ ಪ್ರಕ್ರಿಯೆ ಪ್ರಾರಂಭಿಸಿಲ್ಲ.

ಈ ಬಾರಿ ತಾಲೂಕಿನ 23 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರಾರಂಭ ಮಾಡಲಾಗುತ್ತಿದೆ.

10 ಸರ್ಕಾರಿ ಪ್ರೌಢ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಹಿಂದಿ ವಿಷಯದ ಬದಲಾಗಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ್ಯ ಚೌಕಟ್ಟು ಕೋರ್ಸ್‌ (ಎನ್‌ಎಸ್‌ ಕ್ಯೂಎಫ್‌) ಆರಂಭಿಸಲಾಗುತ್ತಿದ್ದು, ಇದರಲ್ಲಿ 10 ವಿಷಯಗಳು ಬರುತ್ತವೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಬಿಸಿಯೂಟ, ಹಾಲು, ಮೊಟ್ಟೆ ಕೊಡುವುದರಿಂದ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವುದು ಸರಿ, ಆದರೆ ಅದರ ಜೊತೆ ಶೈಕ್ಷಣಿಕ ಪ್ರಗತಿಯಾಗಬೇಕಾದರೆ ಕೊಠಡಿಗಳ ದುರಸ್ತಿ, ಅತಿಥಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.ಮೂಲಸೌಕರ್ಯ

ಹರಪನಹಳ್ಳಿ ತಾಲೂಕು ಸೇರಿದಂತೆ ಇಡೀ ವಿಜಯನಗರ ಜಿಲ್ಲೆಯಲ್ಲಿಯೇ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಮೂಲ ಸೌಕರ್ಯದ ಅಗತ್ಯತೆ ಇದ್ದು, ಸರ್ಕಾರ ತ್ವರಿತವಾಗಿ ಈ ಸಮಸ್ಯೆ ಬಗೆಹರಿಸಬೇಕು.

ಬಸವರಾಜ ಸಂಗಪ್ಪನವರ್, ವಿಜಯನಗರ ಜಿಲ್ಲಾದ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದುರಸ್ತಿಗೆ ಕ್ರಮ

ಶೇ. 75ರಷ್ಟು ಪಠ್ಯಪುಸ್ತಕಗಳು ಬಂದಿದ್ದು, ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ವಿತರಣೆ ಮಾಡಲಾಗಿದೆ. ಶಾಲಾ ಆರಂಭಕ್ಕೆ ಮುಖ್ಯ ಶಿಕ್ಷಕರ ಸಭೆ ಮಾಡಿ ಸೂಚನೆಗಳನ್ನು ನೀಡಲಾಗಿದೆ. ಶಾಲಾ ಪ್ರಾರಂಭೋತ್ಸವ ದಿನ ಮಿಂಚಿನ ಸಂಚಾರವನ್ನು ನಮ್ಮ ಕಚೇರಿ ಸಿಬ್ಬಂದಿ ಹಮ್ಮಿಕೊಳ್ಳುತ್ತಾರೆ. ಕೊಠಡಿಗಳ ದುರಸ್ತಿಗೆ ಶಾಸಕರು ಕೆಕೆಆರ್‌ ಡಿಬಿಯಲ್ಲಿ ಕ್ರಮಕೈಗೊಂಡಿದ್ದಾರೆ.

ಯು. ಬಸವರಾಜಪ್ಪ, ಬಿಇಒ, ಹರಪನಹಳ್ಳಿ.