ಸಾರಾಂಶ
- ಜಗಳೂರು ಶಾಸಕ ದೇವೇಂದ್ರಪ್ಪಗೆ ರೈತಮಿತ್ರ ಸೇರಿ ಹಲವರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ: ಮಹಾಂತೇಶ ಬ್ರಹ್ಮ - - - ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದ ಗುರು ಭವನದಲ್ಲಿ ಆ.7ರಂದು ಬೆಳಗ್ಗೆ 11.30 ಗಂಟೆಗೆ ವಿಕಲಚೇತನರ ಅಭಿವೃದ್ಧಿ ಸಂಘ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಕಲಚೇತನರ ಅಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ತಿಳಿಸಿದ್ದಾರೆ.ತಾಲೂಕಿನ ರೈತ ಬಾಂಧವರಿಗೆ ₹70 ಕೋಟಿಗಿಂತ ಹೆಚ್ಚು ಬೆಳೆವಿಮೆ ಪರಿಹಾರವನ್ನು ತರಲು ಹೋರಾಟ ಮಾಡಿದ ಕಾರಣಕ್ಕಾಗಿ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ರೈತಮಿತ್ರ ಪ್ರಶಸ್ತಿ ನೀಡಲಾಗುವುದು. ಅಂಗವಿಕಲರ ಹಕ್ಕುಗಳ ಕಾಯ್ದೆ-2016ರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ತಾಲೂಕು ಕಚೇರಿ ಮುಂದೆ ರ್ಯಾಂಪ್ ರೈಲಿಂಗ್ಸ್ ನಿರ್ಮಾಣ ಮಾಡಿ, ವಿಶೇಷಚೇತನರಿಗೆ ಅನುಕೂಲ ಕಲ್ಪಿಸಿರುವ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ವಿಶೇಷಚೇತನಸ್ನೇಹಿ ಪ್ರಶಸ್ತಿ, ವಿಕಲಚೇತನರ ಹಕ್ಕುಗಳ ಕಾಯ್ದೆ-2016 ಕಾನೂನುಗಳನ್ನು ಕಟ್ಟುನಿಟ್ಟಾಗಿ ತಾಲ್ಲೂಕಿನಲ್ಲಿ ಅನುಷ್ಠಾನ ಮಾಡಿರುವ ಆರಕ್ಷಕ ನಿರೀಕ್ಷಕ ಎಂ.ಶ್ರೀನಿವಾಸ್ ರಾವ್ ಅವರಿಗೆ ಕಾನೂನು ಸುವ್ಯವಸ್ಥೆ ಸೇವಾರತ್ನ ಪ್ರಶಸ್ತಿ, ಜಿಲ್ಲಾದ್ಯಂತ ಬಡರೋಗಿಗಳಿಗೆ ಆರೈಕೆ ಸಂಘ ಸಂಸ್ಥೆ ಮೂಲಕ ಆರೋಗ್ಯ ಶಿಬಿರಗಳ ನಡೆಸಿ, ಸೇವೆ ಸಲ್ಲಿಸಿರುವ ಡಾ. ಟಿ.ಜಿ. ರವಿಕುಮಾರ್ ಅವರಿಗೆ ಆರೋಗ್ಯ ಸೇವಾರತ್ನ ಪ್ರಶಸ್ತಿ, ಎರಡು ದಶಕಗಳಿಗಿಂತ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ-ಅಕ್ಷರ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ, ಎರಡು ದಶಕಗಳ ಕಾಲ ನಿರಂತರ ರಾಜಕಾರಣದಲ್ಲಿ ಸಕ್ರಿಯವಾಗಿ ಯುವಕರ ಪಡೆಯೊಂದಿಗೆ ಸಮಾಜ ಸೇವೆ ಸಲ್ಲಿಸುತ್ತಿರುವ ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ ಅವರಿಗೆ ಯುವರತ್ನ ಪ್ರಶಸ್ತಿ, ಬೆಂಗಳೂರಿನ ವಾರ್ತಾ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ರಾಜ್ಯದ ಹಲವು ಪ್ರಾದೇಶಿಕ ಪತ್ರಿಕೆಗಳ ಉಳಿವಿಗಾಗಿ ಹೋರಾಟ ನಡೆಸಿ, ದಿನಪತ್ರಿಕೆಗಳ ಸಂಪಾದಕರ ಸಂಘಕ್ಕೆ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎ.ಸಿ. ತಿಪ್ಪೇಸ್ವಾಮಿ ಅವರಿಗೆ ಪತ್ರಿಕಾ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.ತಾಲೂಕಿನಲ್ಲಿ 3364 ವಿಶೇಷಚೇತನರಿದ್ದು, ಜಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶೇಷಚೇತನರ ಯುಡಿಐಡಿ ಕಾರ್ಡ್ ಶಿಬಿರ, ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರ ಮೀಸಲು ಶೇ.5ರ ಅನುದಾನದಲ್ಲಿ ಕ್ರಿಯಾಯೋಜನೆ ಸೇರಿದಂತೆ ಅಂಗವಿಕಲರ ಹಕ್ಕುಗಳ ಕಾಯ್ದೆ-2016ರ ಕಾನೂನುಗಳ ಅನುಷ್ಠಾನ ಸೇರಿದಂತೆ ಇತರೆ ವಿಷಯಗಳ ಕುರಿತಂತೆ ವಿಕಲಚೇತನರ ಅಭಿವೃದ್ಧಿ ಸಂಘ ನಿರಂತರವಾಗಿ ಹೋರಾಟ ಮಾಡುತ್ತಿದೆ ಎಂದಿದ್ದಾರೆ.
ತಾಲೂಕಿನ ವಿಶೇಷಚೇತನರು, ತಾಲೂಕು ಮಟ್ಟದ ಅಧಿಕಾರಿಗಳು , ರೈತಪರ ದಲಿತಪರ ಕನ್ನಡಪರ ಸಂಘಟನೆಗಳು ಸೇರಿದಂತೆ ವಿಶೇಷಚೇತನರಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕೆಂದು ಮಹಾಂತೇಶ್ ಬ್ರಹ್ಮ ಮನವಿ ಮಾಡಿದ್ದಾರೆ.- - - ಬಾಕ್ಸ್ * ವಿವಿಧ ಬೇಡಿಕೆಗಳ ಮನವಿ ಜಗಳೂರು ಪಟ್ಟಣದ ಕೇಂದ್ರ ಭಾಗದಲ್ಲಿ ವಿಕಲಚೇತನರ ಭವನ ನಿರ್ಮಾಣ, ವಿಕಲಚೇತನರ ವಸತಿಯುತ ಶಾಲೆ ನಿರ್ಮಾಣ ಮತ್ತು ಗ್ರಾಮೀಣ ಪುನಶ್ಚೇತನ ಕಾರ್ಯಕರ್ತರ ಸೇವಾ ಭದ್ರತೆ ಹಾಗೂ ವಿಕಲಚೇತನ ಪೋಷಕರಿಗೆ ಆರ್ಥಿಕ ಭದ್ರತೆ ಒದಗಿಸಲು ಶಾಸಕರಲ್ಲಿ ತಾಲೂಕಿನ 22 ಗ್ರಾಮ ಪಂಚಾಯಿತಿಗಳ ಪುನಶ್ಚೇತನ ಕಾರ್ಯಕರ್ತರು, ವಿಶೇಷಚೇತನರು, ಪೋಷಕರು ಹಾಗೂ ಹಲವು ಸಂಘ ಸಂಸ್ಥೆಯವರ ಸಮ್ಮುಖ ಮನವಿ ಸಲ್ಲಿಸಲಾಗುವುದು.
- - --04ಜೆಎಲ್ಆರ್2: ಮಹಾಂತೇಶ್ ಬ್ರಹ್ಮ