ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದ 8 ಜೋಡಿ: ನ್ಯಾ.ರಾಜೇಶ್ವರಿ ಎನ್.ಹೆಗಡೆ

| Published : Mar 17 2024, 01:49 AM IST

ಸಾರಾಂಶ

ಕೌಟುಂಬಿಕ ಕಲಹದಿಂದಾಗಿ ಬೇರೆಯಾಗಿದ್ದ 8 ಜೋಡಿ ದಂಪತಿ ಒಂದಾಗಿದ್ದು ವಿಶೇಷವಾಗಿತ್ತು. ಜಿಲ್ಲಾದ್ಯಂತ ಸುಮಾರು 513ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರುಗಳಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜಿ ಸಂಧಾನದಡಿ ಜಿಲ್ಲೆಯಲ್ಲಿ 4,000 ನ್ಯಾಯಾಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆದ ಲೋಕ ಅದಾಲತ್‌ನಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಕಂಡು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ದಂಪತಿಯಲ್ಲಿ 8 ಜೋಡಿ ದಂಪತಿ ಕಳೆದ 4 ವರ್ಷದಿಂದ ನ್ಯಾಯಾಲಯಕ್ಕೆ ವಿಚ್ಛೇದನಕ್ಕಾಗಿ ಅಲೆದಾಡುತ್ತಿದ್ದರು. ಇವರಲ್ಲಿ ಪರಶುರಾಮ ಕೋಂ ಇಂದಿರಾ, ಇಂದು ನಡೆದ ಲೋಕ ಅದಾಲತ್‌ನಲ್ಲಿ ಒಂದಾಗಿದ್ದಾರೆ. ವೀರೇಶ್ ಕೋಂ ಪೂಜಾ, ಇವರು 2 ವರ್ಷದಿಂದ ನ್ಯಾಯಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈಗ ಲೋಕಅದಾಲತ್‌ನಲ್ಲಿ ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಪ್ರೀತಂ ಕೋಂ ಚಂದನ್, ಮಂಜುನಾಥ ಕೋಂ ಕಲ್ಪನ, ಸಂದೀಪ ಕೋಂ ವಿಶಾಲ ಲೋಕದಾಲತ್‌ನಲ್ಲಿ ಒಂದಾಗಿದ್ದಾರೆ ಎಂದು ಹೇಳಿದರು.

ಲೋಕ ಅದಾಲತ್‌ನಲ್ಲಿ ಇನ್ನೂ 1000 ಪ್ರಕರಣಗಳು ರಾಜಿಯಾಗಬಹುದು. ಲೋಕ ಅದಾಲತ್ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳಲ್ಲಿ ಒಂದು. ವ್ಯಾಜ್ಯ ಪೂರ್ವ ಹಂತದಲ್ಲಿ ಬಾಕಿ ಇರುವ ವಿವಾದಗಳು, ಪ್ರಕರಣಗಳನ್ನು ಇತ್ಯರ್ಥಪಡಿಸುವ ವೇದಿಕೆಯಾಗಿದೆ ಎಂದರು.

ಮೇಲ್ಕಾಣಿಸಿದ ಇತ್ಯರ್ಥವಾದ ಪ್ರಕರಣಗಳಲ್ಲಿ ಪ್ರಮುಖವಾಗಿ ಕೌಟುಂಬಿಕ ಕಲಹದಿಂದಾಗಿ ಬೇರೆಯಾಗಿದ್ದ 8 ಜೋಡಿ ದಂಪತಿ ಒಂದಾಗಿದ್ದು ವಿಶೇಷವಾಗಿತ್ತು. ಜಿಲ್ಲಾದ್ಯಂತ ಸುಮಾರು 513ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರುಗಳಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಯಿತು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ದಶರಥ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರವೀಣಕುಮಾರ್, ಪೋಕ್ಸೋ ನ್ಯಾಯಾಧೀಶರಾದ ಶ್ರೀಪಾದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಹಾಗೂ ಇನ್ನಿತರರಿದ್ದರು.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಹಕರಿಸಿದ ನ್ಯಾಯಾವಾದಿಗಳು, ವಕೀಲರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಭಿನಂದಿಸಿದ್ದಾರೆ.ರಾಜಿ ಮೂಲಕ ಇತ್ಯರ್ಥವಾದ ವಿವಿಧ ಪ್ರಕರಣಗಳ ವಿವರ

ರಾಜಿ ಸಂಧಾನದ ಮೂಲಕ ಜಿಲ್ಲೆಯಲ್ಲಿ 4568 ಜಾರಿಯಲ್ಲಿರುವ ಪ್ರಕರಣಗಳಲ್ಲಿ ರು.12,56,89,479 ಹಣದ ಪರಿಹಾರ ಒದಗಿಸಲಾಗಿದೆ. ಮತ್ತು 1,44,773 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 47,33,07,260 ಹಣದ ಪರಿಹಾರವಾಗಿ ರಾಜೀ ಮೂಲಕ ಕೊಡಿಸಿ ಪ್ರಕರಣಗಳ ಮುಕ್ತಾಯಗೊಳಿಸಲಾಗಿದೆ. 81 ಅಪರಾಧಿಕ ಪ್ರಕರಣಗಳು, 143 ಚೆಕ್ ಅಮಾನ್ಯ ಪ್ರಕರಣಗಳು, 19 ಬ್ಯಾಂಕ್ ವಸೂಲಾತಿ ಪ್ರಕರಣಗಳು, 14 ಇತರೆ ಹಣ ವಸೂಲಾತಿ ಪ್ರಕರಣಗಳು, 53 ಅಪಘಾತ ಪ್ರಕರಣಗಳು, 19 ಪಾಲು ವಿಭಾಗ ಪ್ರಕರಣಗಳು, 200 ಜಾರಿ ಅರ್ಜಿಗಳು ಅಲ್ಲದ ಹಲವು ಕಾರಣಕ್ಕಾಗಿ ದಾಖಲಿಸಿದ 55 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು ರಾಜೀ ಮೂಲಕ ಇತ್ಯರ್ಥಗೊಂಡಿರುತ್ತದೆ. ಇದಲ್ಲದೇ ಇತರೆ ಪ್ರಕರಣಗಳು ಸೇರಿ ಒಟ್ಟು 1568 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿದೆ.