ಸಾರಾಂಶ
ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.
ಹುಬ್ಬಳ್ಳಿ:
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ 2024-25ರ ವಾರ್ಷಿಕ ಯೋಜನೆಯಲ್ಲಿ ಕರ್ನಾಟಕದ 470 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗಾಗಿ ₹ 8006 ಕೋಟಿ ಮಂಜೂರಿ ಮಾಡಿದೆ. ಉಳಿದಂತೆ ಹೊಸದಾಗಿ 459 ಕಿಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಯನ್ನು ಸಿದ್ಧಪಡಿಸಲು ₹ 15 ಕೋಟಿ ಮಂಜೂರಿ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.
ಈ ಪೈಕಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನವಲಗುಂದ ಪಟ್ಟಣದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 52ಕ್ಕೆ 12 ಕಿಮೀ ಉದ್ದದ ಬೈಪಾಸ್ ನಿರ್ಮಾಣಕ್ಕಾಗಿ ₹ 350 ಕೋಟಿ ಮಂಜೂರು ಮಾಡಿದೆ. ಪಟ್ಟಣದ ಮಧ್ಯದಿಂದ ಹಾದು ಹೋಗುವ ಹೆದ್ದಾರಿಯ ಕಾರಣ ಟ್ರಾಫಿಕ್ ಸಮಸ್ಯೆಗಳಿಂದಾಗಿ ನವಲಗುಂದದ ಸಾರ್ವಜನಿಕರು ರೋಸಿ ಹೋಗಿದ್ದರು. ಹೀಗಾಗಿ ಬೈಪಾಸ್ ರಸ್ತೆ ನಿರ್ಮಾಣ ಮಂಜೂರಾತಿಯಿಂದ ಬಹುವರ್ಷದ ಕನಸು ನನಸಾಗಿದಂತಾಗಿದೆ.ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವರ್ತುಳದಿಂದ ಬೆಂಗಳೂರು ಮಾರ್ಗದಲ್ಲಿ ಬಂಕಾಪುರ ಚೌಕ್ ಬಿಡ್ನಾಳ ಕ್ರಾಸ್‌ವರೆಗೆ ವಿಸ್ತರಿಸುವ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯ ವಿಸ್ತೃತ ಯೋಜನಾ ವರದಿ ತಯಾರಿಗಾಗಿ ₹ 25 ಲಕ್ಷ ಮತ್ತು ಕುಸುಗಲ್‌ನಿಂದ ನರೇಂದ್ರ ಕ್ರಾಸ್ ವರೆಗಿನ ವರ್ತುಳ ರಸ್ತೆಯ ಕಾಮಗಾರಿಯ ವಿಸ್ತೃತ ಯೋಜನಾ ವರದಿ ತಯಾರಿಗಾಗಿ ₹ 41 ಲಕ್ಷ ಕೂಡಾ ತೆಗೆದಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಸದರ ಅಭಿವೃದ್ಧಿಪರ ದೂರದೃಷ್ಟಿತ್ವದಿಂದಾಗಿ 5 ವರ್ಷಗಳ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭಿವೃಧ್ಧಿಯ ಸಂಪೂರ್ಣ ಚಿತ್ರಣವೇ ಬದಲಾವಣೆಯಾಗಿದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ. ಕೂಡಲೇ ಡಿಪಿಆರ್ ಸಿದ್ಧಪಡಿಸಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳಿಗೆ ಚಾಲನೆ ನೀಡಲು ರಾಜ್ಯ ಸರ್ಕಾರವನ್ನು ಜೋಶಿ ಆಗ್ರಹಿಸಿದ್ದಾರೆ.