ಇಲ್ಲಿಯವರೆಗೆ ಕರ್ನಾಟಕ ರಾಜ್ಯಕ್ಕೆ 24,267.78 ಕಿ.ಮೀ.ಗಳಷ್ಟು ಪಿಎಂಜಿಎಸ್‌ವೈ ರಸ್ತೆ ಮಂಜೂರು ಮಾಡಿದ್ದು, ಅದರಲ್ಲಿ 23,971.94 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಸಂಸದ ಕೋಟರಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಮಾಹಿತಿ ಉಡುಪಿ: ಕರ್ನಾಟಕ ರಾಜ್ಯಕ್ಕೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ)ಯಡಿ ಗ್ರಾಮೀಣ ರಸ್ತೆ ಮಂಜೂರು ಮಾಡುವಲ್ಲಿ ಯಾವುದೇ ವಿಳಂಬ ಮಾಡುವುದಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಕಮಲೇಶ್ ಪಾಸ್ವನ್ ಹೇಳಿದ್ದಾರೆ. ಅವರು ಬುಧವಾರ ಲೋಕಸಭಾ ಅಧಿವೇಶನದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪ್ರಸ್ತುತ ಈ ಯೋಜನೆ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದಂತೆ, ಸಂಪರ್ಕ ವ್ಯವಸ್ಥೆ ಇಲ್ಲದ ಜನ ವಾಸ ಸ್ಥಳಗಳಿಗೆ ಸರ್ವಋತು ರಸ್ತೆ ನಿರ್ಮಾಣಕ್ಕಾಗಿ ಪಿಎಂಜಿಎಸ್‌ವೈ ಆರಂಭಿಸಲಾಗಿದೆ. ಯೋಜನೆಯ 3 ಹಂತಗಳು ಈಗಾಗಲೇ ಮುಗಿದಿದ್ದರೂ, 2011ರ ಜನಗಣತಿಯಂತೆ ನಿಗದಿತ ಜನ ಸಂಖ್ಯೆ ಇರುವ ವಸತಿ ಪ್ರದೇಶಗಳಿಗೆ 2029 ಮಾರ್ಚ್‌ನೊಳಗೆ ರಸ್ತೆ ಕಾಮಗಾರಿಗಳ‍ನ್ನು ಪೂರ್ಣಗೊಳಿಸುವ ಗುರಿಯೊಂದಿಗೆ, ರಾಜ್ಯ ಗಳಿಂದ ಅನುಮೋದನೆ ಪಡೆದು ಕಾಮಗಾರಿಗೆ ಮಂಜೂರಾತಿ ನೀಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಜೊತೆ ಸಮನ್ವಯ ಸಾಧಿಸುತ್ತಿದ್ದು, ರಾಜ್ಯದಿಂದ ಪ್ರಸ್ತಾವನೆ ಪಡೆಯಲಾಗುತ್ತಿದೆ. ಇಲ್ಲಿಯವರೆಗೆ ಕರ್ನಾಟಕ ರಾಜ್ಯಕ್ಕೆ 24,267.78 ಕಿ.ಮೀ.ಗಳಷ್ಟು ಪಿಎಂಜಿಎಸ್‌ವೈ ರಸ್ತೆ ಮಂಜೂರು ಮಾಡಿದ್ದು, ಅದರಲ್ಲಿ 23,971.94 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇದರ ವೆಚ್ಚ ರಾಜ್ಯ ಸರ್ಕಾರದ ಪಾಲು ಸೇರಿದಂತೆ 8426.74 ಕೋಟಿ ಆಗಿದ್ದು ಪ್ರಗತಿಯನ್ನಾಧರಿಸಿ ಹಂತ ಹಂತವಾಗಿ ಹಣ ಬಿಡುಗಡೆಗೊಳ್ಳುತ್ತದೆ ಮತ್ತು ಇನ್ನೂ ರಾಜ್ಯದಿಂದ ಬಂದ ಪ್ರಸ್ತಾಪನೆಗಳನ್ನು ಸ್ವೀಕರಿಸಲಾಗುವುದು ಎಂದು ಸಚಿವ ಕಮಲೇಶ ಪಾಸ್ವನ್ ಹೇಳಿದ್ದಾರೆ ಎಂದು ಸಂಸದ ಕೋಟ ಪ್ರಟಣೆಯಲ್ಲಿ ತಿಳಿಸಿದ್ದಾರೆ.