ಸಾರಾಂಶ
ಅಣ್ಣೂರು ಸತೀಶ್ಕನ್ನಡಪ್ರಭ ವಾರ್ತೆ ಭಾರತೀನಗರ
ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಪ್ರಾರಂಭಗೊಂಡು ನೀರಿನ ಅಭಾವದಲ್ಲೂ 9.35 ಲಕ್ಷ ಟನ್ ಕಬ್ಬು ಅರೆದಿದೆ. ಫೆಬ್ರವರಿಯಲ್ಲಿ ಕಬ್ಬು ಅರೆಯುವಿಕೆಯನ್ನು ಕಾರ್ಖಾನೆಯಲ್ಲಿ ಸ್ಥಗಿತಗೊಳಿಸಲಾಗಿದೆ.ಕಳೆದ 2021- 2022ನೇ ಸಾಲಿನಲ್ಲಿ 10.28 ಟನ್ , 2022-23ನೇ ಸಾಲಿನಲ್ಲಿ 10.35 ಟನ್ ಕಬ್ಬು ಅರೆಯಲಾಗಿತ್ತು. ಆದರೆ, ಈ ಬಾರಿ ಮಳೆ ಅಭಾವ ಮತ್ತು ನೀರಿನ ಕೊರತೆಯಿಂದ 10 ಲಕ್ಷ ಟನ್‌ಗೂ ಹೆಚ್ಚು ಕಬ್ಬು ಅರೆಯಲು ಸಾಧ್ಯವಾಗಲಿಲ್ಲ.
2024ರ ಜುಲೈಗೆ ಮತ್ತೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸುವ ಸಾಧ್ಯತೆಗಳು ಇದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೇಸಿಗೆಯಲ್ಲಿ ನೀರಿನ ಅಭಾವವು ಮತ್ತಷ್ಟು ಉಲ್ಬಣಗೊಳ್ಳಲಿದೆ. ಹಾಗಾಗಿ ಕಾರ್ಖಾನೆಯನ್ನು ಆರಂಭಿಸಿ ಕಬ್ಬನ್ನು ಎಲ್ಲಿ ತರುತ್ತಾರೆ ಎಂಬುವುದೇ ಪ್ರಶ್ನೆಯಾಗಿದೆ.ಈಗಾಗಲೇ ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿರುವುದು ಕಂಡುಬರುತ್ತಿದೆ. ರೈತರು ಕಾವೇರಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಕಬ್ಬಿನ ಬೆಳೆಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಾ ನೀರು ಬಿಡಿಸಿಕೊಳ್ಳುತ್ತಿದ್ದಾರೆ. ಚಂದೂಪುರ, ಹಾಗಲಹಳ್ಳಿ, ಎಸ್.ಐ.ಹೊನ್ನಲಗೆರೆ, ಹುಸ್ಕೂರು ಹೀಗೆ ಕೊನೆಭಾಗಗಳಿಗಂತೂ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಇತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಹ ನೀರಿಲ್ಲದೆ ರೈತರಿಗೆ ಉತ್ತರ ನೀಡಲಾಗದೆ ಮೌನ ವಹಿಸಿದ್ದಾರೆ.
ಚಿಕ್ಕರಸಿನಕೆರೆ ಹೋಬಳಿಯ ರೈತರು ಕಬ್ಬು, ಭತ್ತವನ್ನೇ ಅವಲಂಬಿಸಿದ್ದಾರೆ. ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಸಾಕಷ್ಟು ರೈತರ ಕಬ್ಬು ಒಣಗಿಹೋಗಿತ್ತು. ಈಗಾಗಲೆ ಸಾಕಷ್ಟು ರೈತರು ನಷ್ಟವನ್ನು ಸಹ ಅನುಭವಿಸಿದ್ದಾರೆ.ರೈತರು ಸಾಲ ಮಾಡಿ ಬೋರ್ ವೆಲ್ ಕೊರೆಸಿದ್ದಾರೆ. ಮಳೆ ಅಭಾವದಿಂದ ನೀರು ಭೂಮಿಯಲ್ಲಿ ಬತ್ತಿಹೋಗುತ್ತಿದೆ. ಸರ್ಕಾರ ಬೆಳೆ ಸಮೀಕ್ಷೆ ನಡೆಸಿದ್ದರೂ ಪರಿಹಾರ ಮಾತ್ರ ಇನ್ನೂ ರೈತರಿಗೆ ದೊರೆತ್ತಿಲ್ಲ. ಈ ಬಾರಿ ಮಳೆ ಇಲ್ಲದೇ ಸೂಳೆಕೆರೆಯಲ್ಲಿಯೂ ನೀರು ಕಡಿಮೆಯಾಗಿದೆ. ಕಬ್ಬಿನ ಬೆಳೆ ಕಡಮೆಯಾಗಿದ್ದರಿಂದ ಕಾರ್ಖಾನೆ ಕಬ್ಬು ಅರೆವಿಕೆಗೂ ಪೆಟ್ಟು ಬಿದ್ದು ಆರ್ಥಿಕ ಹೊರೆಯಾಗಲಿದೆ. ಕಬ್ಬು ಸರಬರಾಜಿಲ್ಲದೆ ಸಾವಿರಾರು ಮಂದಿಗೆ ಕಾರ್ಖಾನೆಯಲ್ಲಿ ನೌಕರಿ ನೀಡಿರುವ ವ್ಯವಸ್ಥಾಪಕರ ಸ್ಥಿತಿ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರಸಕ್ತ ಸಾಲಿನಲ್ಲಿ 33 ಬ್ಯಾಚ್‌ಗಳಿಗೂ ಟನ್ ಕಬ್ಬಿಗೆ ಎಫ್‌ಆರ್‌ಪಿ ದರ 2984 ರು. ರೈತರಿಗೆ ಸಕಾಲಕ್ಕೆ ಬಟವಾಡೆ ಮಾಡಿದೆ. ರೈತರಿಗೆ ಸಕಾಲಕ್ಕೆ ಕಬ್ಬಿನ ಹಣ ಪಾವತಿಸಿ ಕಾರ್ಖಾನೆ ರೈತರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇನ್ನು 6 ಬ್ಯಾಚ್‌ಗಳಿಗೆ ಮಾತ್ರ ಬಾಕಿ ಹಣ ನೀಡಬೇಕಾಗಿದೆ.ತಾಯಿ ಶ್ರೀಚಾಮುಂಡೇಶ್ವರಿಯ ಅನುಗ್ರಹದಿಂದ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ. ಕಬ್ಬು ಸರಬರಾಜು ಮಾಡಿದ ರೈತರಿಗೂ ಬಟವಾಡೆ ಮಾಡಲಾಗಿದೆ. ಮುಂದೆಯೂ ಯಾವುದೇ ತೊಂದರೆ ಇಲ್ಲದೆ ರೈತರು, ಮತ್ತು ಕಾರ್ಮಿಕರನ್ನು ನೋಡಿಕೊಳ್ಳಲಾಗುವುದು.
- ಎಂ.ಶ್ರೀನಿವಾಸನ್, ವ್ಯವಸ್ಥಾಪಕ ನಿರ್ದೇಶಕರು, ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಕಾರ್ಖಾನೆಯಲ್ಲಿ 10 ಲಕ್ಷ ಟನ್‌ಗೂ ಹೆಚ್ಚು ಕಬ್ಬು ಅರೆಯುವ ನಿರೀಕ್ಷೆ ಇತ್ತು. ಆದರೆ, ನೀರು ಮತ್ತು ವಿದ್ಯುತ್ ಅಭಾವದಿಂದ ಸ್ವಲ್ಪ ಇಳಿಮುಖಗೊಂಡಿದೆ. 5 ರಿಂದ 6 ಬ್ಯಾಚ್‌ಗಳ ರೈತರಿಗೆ ಬಾಕಿ ಹಣ ಬಟವಾಡೆ ಮಾಡಬೇಕಾಗಿದೆ. ಅದನ್ನು ಫೆಬ್ರವರಿ ಅಂತ್ಯದೊಳಗೆ ಮಾಡಲಾಗುವುದು.- ಮಣಿ, ಉಪಾಧ್ಯಕ್ಷರು, ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ