ಕನ್ನಡಪ್ರಭ ವಾರ್ತೆ ಹುಕ್ಕೇರಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ 9 ಎಕರೆ ಜಮೀನು ಮಂಜೂರು ಮಾಡಿದ್ದು ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಈ ವಿದ್ಯಾಪೀಠ ಜ್ಞಾನಕೇಂದ್ರವಾಗಿ ಬೆಳೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ 9 ಎಕರೆ ಜಮೀನು ಮಂಜೂರು ಮಾಡಿದ್ದು ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಈ ವಿದ್ಯಾಪೀಠ ಜ್ಞಾನಕೇಂದ್ರವಾಗಿ ಬೆಳೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ತಾಲೂಕಿನ ಘೋಡಗೇರಿ ಗ್ರಾಮದ ಶಿವಾನಂದ ಮಠದ ಶಿವಾನಂದ ಗ್ರಾಮೀಣ ವಿದ್ಯಾಪೀಠಕ್ಕೆ ಸರ್ಕಾರದಿಂದ ಶೈಕ್ಷಣಿಕ ಉದ್ದೇಶಕ್ಕಾಗಿ 9 ಎಕರೆ ಜಮೀನು ಮಂಜೂರಾದ ಹಿನ್ನೆಲೆ ಮಠದ ಆಡಳಿತ ಮಂಡಳಿ ಹಾಗೂ ಭಕ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 30 ವರ್ಷಗಳ ರಾಜಕೀಯದಲ್ಲಿ ನಾವು ಮೊದಲ ಪ್ರಾಶಸ್ತ್ಯವನ್ನು ಶಿಕ್ಷಣಕ್ಕೆ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಶೇ.99 ಶಾಲಾ- ಕಾಲೇಜುಗಳನ್ನು ಅಭಿವೃದ್ಧಿಗೊಳಿಸಿದ್ದು, ಮುಂದೆಯೂ ಈ ಕೆಲಸ ನಡೆಯಲಿದೆ ಎಂದು ತಿಳಿಸಿದರು.ಕಕಮರಿ ಮಠದ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮೀಜಿ ಮಾತನಾಡಿ, ಮಾತು ಕಡಿಮೆ, ಮೌನ ಬಂಗಾರವೆಂಬ ಗಾದೆ ಮಾತಿನಂತೆ ಕಾರ್ಯ ನಿರ್ವಹಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ದಿನಗಳಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು. ಅವರು ಮುಖ್ಯಮಂತ್ರಿಯಾದರೆ ಮಾತ್ರ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಸಚಿವರು ಜಾತಿ ಮೇಲೆ ಯಾವತ್ತು ರಾಜಕಾರಣ ಮಾಡಲಿಲ್ಲ, ಅವರ ಅಭಿವೃದ್ಧಿ ಪರ ನಿಲುವು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಮುಂದೆಯೂ ಅವರ ಅಭಿವೃದ್ಧಿಪರ ರಾಜಕೀಯಕ್ಕೆ ನಾವೆಲ್ಲರೂ ಶಕ್ತಿ ತುಂಬೋಣ ಎಂದರು.ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮೀಜಿ ಮಾತನಾಡಿದರು. ಕ್ಯಾರಗುಡ್ಡ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಪಾಟೀಲ್, ಮುಖಂಡರಾದ ಅಶೋಕ್ ಪಟ್ಟಣಶೆಟ್ಟಿ, ಬಸವರಾಜ ಮಟಗಾರ, ರಿಷಬ್ ಪಾಟೀಲ, ಪಾಂಡು ಮಣ್ಣಿಕೇರಿ ಸೇರಿ ಅನೇಕರು ಉಪಸ್ಥಿತರಿದ್ದರು.