ಕಾರೊಂದರಲ್ಲಿ ದಾಖಲೆ ಇಲ್ಲದ 99.20 ಲಕ್ಷ ರು. ಹಣ ಪತ್ತೆ: ವಶಕ್ಕೆ

| Published : Mar 19 2024, 12:49 AM IST

ಸಾರಾಂಶ

ಬೆಂಗಳೂರು ಕಡೆಯಿಂದ ಬಂದ ಕಾರನ್ನು ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ಈ ಸಮಯದಲ್ಲಿ ಡ್ಯಾಶ್‌ಬೋರ್ಡ್‌ನಲ್ಲಿ ಬ್ಯಾಗುಗಳಲ್ಲಿ ತುಂಬಿದ್ದ ಕಂತೆ ಕಂತೆ ಹಣ ಕಂಡುಬಂದಿದೆ. ಹಣದ ಸಂಬಂಧ ಕಾರಿನಲ್ಲಿದ್ದವರನ್ನು ವಿಚಾರಿಸಿದಾಗ ಸಾಗಿಸುತ್ತಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಲಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ/ ಮದ್ದೂರು

ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರದಲ್ಲಿ ಕಾರೊಂದರಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 99.20 ಲಕ್ಷ ರು. ಹಣವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮದ್ದೂರು ಬಳಿಯ ನಿಡಘಟ್ಟ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.

ಬೆಂಗಳೂರು ಕಡೆಯಿಂದ ಬಂದ ಕಾರನ್ನು ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ಈ ಸಮಯದಲ್ಲಿ ಡ್ಯಾಶ್‌ಬೋರ್ಡ್‌ನಲ್ಲಿ ಬ್ಯಾಗುಗಳಲ್ಲಿ ತುಂಬಿದ್ದ ಕಂತೆ ಕಂತೆ ಹಣ ಕಂಡುಬಂದಿದೆ. ಹಣದ ಸಂಬಂಧ ಕಾರಿನಲ್ಲಿದ್ದವರನ್ನು ವಿಚಾರಿಸಿದಾಗ ಸಾಗಿಸುತ್ತಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಲಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಕೆ.ಆರ್.ಪೇಟೆ ಗಿರೀಶ್ ಎಂಬುವವರು ಅಡಿಕೆ ವ್ಯಾಪಾರಿಯಾಗಿದ್ದು, ಅಡಿಕೆ ವ್ಯಾಪಾರದಿಂದ ಬಂದ ಹಣವನ್ನು ಬೆಂಗಳೂರಿನಿಂದ ಕೆ.ಆರ್.ಪೇಟೆ ಕಡೆಗೆ ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ.

ಆದರೆ, ಇದಕ್ಕೆ ಸೂಕ್ತ ದಾಖಲೆಗಳು ಇರಲಿಲ್ಲವಾದ ಕಾರಣ ಪೊಲೀಸರು ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಪೊಲೀಸರು ಕಾಲಾವಕಾಶ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಹಣ ಸಾಗಿಸುತ್ತಿದ್ದ ಮಾಹಿತಿ ಆಧಾರದ ಮೇಲೆ ತಹಸೀಲ್ದಾರ್ ಸೋಮಶೇಖರ್, ಮದ್ದೂರು ಠಾಣೆ ವೃತ್ತ ನಿರೀಕ್ಷಕ ಕೆ.ಆರ್ .ಪ್ರಸಾದ್ ಹಾಗೂ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು, ಸಿಬ್ಬಂದಿಗಳು ತಪಾಸಣಾ ಕಾರ್ಯದಲ್ಲಿ ಇದ್ದರು.

ಅಧಿಕಾರಿಗಳಿಂದ ಚೆಕ್‌ಪೋಸ್ಟ್‌ಗಳ ರಿಶೀಲನೆಕನ್ನಡಪ್ರಭ ವಾರ್ತೆ ಮಂಡ್ಯಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ೨೫ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೋಮವಾರ ಚೆಕ್‌ ಪೋಸ್ಟ್‌ಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು. ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಗೇಟ್ ಮತ್ತು ನಿಡಘಟ್ಟದ ಬಳಿ ಸ್ಥಾಪಿತವಾಗಿರುವ ಚೆಕ್‌ ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಿಯೋಜನೆ, ಸಿಸಿ ಕ್ಯಾಮೆರಾ, ವಾಹನಗಳ ತಪಾಸಣೆ ಕುರಿತು ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಉಪಸ್ಥಿತರಿದ್ದರು.