ಸಾರಾಂಶ
ಧಾರವಾಡ: ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳವನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದವಾನಿಯಲ್ಲಿ ಆ. 24 ಹಾಗೂ 25ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಆ. 24ರಂದು ಬೆಳಗ್ಗೆ 10.30ಕ್ಕೆ ಉದ್ಘಾಟಿಸುವರು. ಆದವಾನಿ ಚೌಕಿಮಠದ ಮರಿರಾಚೋಟಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಲೇಖಕಿ ಬಾ.ನೀ. ಲಕ್ಷ್ಮೀನರಸಮ್ಮ ರಚಿತ ''''''''ಮಾರುತಾತ್ಮಜಂ'''''''' ಗ್ರಂಥ ಬಿಡಗಡೆ, ಆದವಾನಿ ಬಿ. ಮಾರೆಣ್ಣ ಹಾಗೂ ವೃಂದದಿಂದ ಸುಗಮ ಸಂಗೀತ ಜರುಗಲಿದೆ. ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ 12ಕ್ಕೆ ಕರ್ನಾಟಕ ಏಕೀಕರಣದಲ್ಲಿ ಕರ್ನೂಲ್ ಅನಂತಪುರ ಜಿಲ್ಲೆ ಹೋರಾಟ, ಆಂಧ್ರ ಗಡಿನಾಡ ಶಾಸನಗಳು, 2.30ಕ್ಕೆ ಹೊರನಾಡ ಕನ್ನಡಿಗರ ಕೊಡುಗೆ, ಕರ್ನಾಟಕ ಸಂಸ್ಕೃತಿ ಅಸ್ಮಿತೆ ಗೋಷ್ಠಿಗಳು ಜರುಗಲಿವೆ ಎಂದ ಅವರು, ಆ. 25ರ ಬೆಳಗ್ಗೆ 10ಕ್ಕೆ ಆಂಧ್ರ ಗಡಿನಾಡ ಕನ್ನಡಿಗರ ಜ್ವಲಂತ ಸಮಸ್ಯೆಗಳು, ಸರ್ವಜ್ಞ-ವೇಮನರ ಸಾಮಾಜಿಕ ನೀತಿ, 11.30ಕ್ಕೆ ಗಡಿನಾಡು-ಹೊರನಾಡು ಕನ್ನಡ ಸಂಘ-ಸಂಸ್ಥೆಗಳ ಕ್ರಿಯಾಶೀಲತೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಕವಿ ಮಿಲನ ಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಲಿದ್ದು, ನಾ.ಮ. ಮರುಳಾರಾಧ್ಯ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಸಂಜೆ 4ಕ್ಕೆ ಸಮಾರೋಪದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಮಲೆ ಸಮಾರೋಪ ಭಾಷಣ ಮಾಡಲಿದ್ದು, ಸಾಧಕರಿಗೆ ಸನ್ಮಾನ, ಎರಡು ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಧನವಂತ ಹಾಜವಗೋಳ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಗುರು ಹಿರೇಮಠ, ಶಿವಾನಂದ ಭಾವಿಕಟ್ಟಿ, ಸತೀಶ ತುರಮರಿ, ವೀರಣ್ಣ ಒಡ್ಡೀನ ಇದ್ದರು.
ಮೌನ ಮುರಿದ ಸಂಘ:ನಿನ್ನೆ ಮೊನ್ನೆ ಹುಟ್ಟಿಕೊಂಡ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಕನ್ನಡ ಕಟ್ಟಿದ ಹಾಗೂ 135 ವರ್ಷಗಳ ಇತಿಹಾಸದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅನುದಾನದ ಕೊರತೆ ಮಾಡುತ್ತಿರುವುದು ರಾಜ್ಯ ಸರ್ಕಾರದ ಸರಿಯಾದ ನಡೆಯಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆ, ನೆಲ-ಜಲ ವಿಷಯವಾಗಿ ಸಂಘವು ತೆಗೆದುಕೊಂಡಿರುವ ನಿಲುವು, ಹೋರಾಟ ಪ್ರಶ್ನಾತೀತ. ಆದರೆ, ಇಂತಹ ಸಂಘಕ್ಕೆ ಸರ್ಕಾರ ಅನುದಾನ ನೀಡುವಲ್ಲಿ ತಾತ್ಸಾರ ಭಾವನೆ ತೋರುತ್ತಿರುವುದು ತಪ್ಪು. ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ₹30 ಕೋಟಿ ಸೇರಿದಂತೆ ಜನಪದ ಪರಿಷತ್ತು, ನೀನಾಸಂ ಅಂತಹ ಸಂಘಗಳಿಗೆ ಮುಕ್ತವಾಗಿ ಅನುದಾನ ಒದಗಿಸುವ ಸರ್ಕಾರ ಸಂಘಕ್ಕೆ ಏತಕ್ಕೆ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ತಮ್ಮ ಸಾತ್ವಿಕ ಸಿಟ್ಟನ್ನು ಹೊರ ಹಾಕಿದರು.ವಿದ್ಯಾವರ್ಧಕ ಸಂಘಕ್ಕೆ ಶತಮಾನೋತ್ತರ ಇತಿಹಾಸ ಹಾಗೂ ಘನತೆ, ಅನುದಾನ ಹಾಗೂ ಇತರ ವಿಷಯಗಳಿಗೆ ಬೀದಿಗೆ ಇಳಿದು ಹೋರಾಡಬಾರದು ಎಂದುಕೊಂಡಿದ್ದೇವೆ. ಇನ್ನು ತಾಳ್ಮೆಯಿಂದ ಕಾಯುತ್ತೇವೆ. ಸಂಘದ ಕಾರ್ಯಚಟುವಟಿಕೆಗೆ ಅನುದಾನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಇದ್ದಾಗ ಸಂಘಕ್ಕೆ ಐದು ಎಕರೆ ಜಾಗ ಕೊಡುತ್ತೇನೆಂಬ ಭರವಸೆ ಈಡೇರಿಸಬೇಕು ಎಂದು ಹಲಗತ್ತಿ ಆಗ್ರಹಿಸಿದರು.