ಮಂಗಳೂರು : ಕೈಗಾರಿಕೆಗಳಿಗೆ ಅಡಚಣೆ ರಹಿತ ವಿದ್ಯುತ್‌ - ಮೆಸ್ಕಾಂ ಎಂಡಿ ಪದ್ಮಾವತಿ ಭರವಸೆ

| Published : Aug 23 2024, 01:17 AM IST / Updated: Aug 23 2024, 12:20 PM IST

ಮಂಗಳೂರು : ಕೈಗಾರಿಕೆಗಳಿಗೆ ಅಡಚಣೆ ರಹಿತ ವಿದ್ಯುತ್‌ - ಮೆಸ್ಕಾಂ ಎಂಡಿ ಪದ್ಮಾವತಿ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮೆಸ್ಕಾಂ ನೀಡುತ್ತಿರುವ ಗ್ರಾಹಕ ಸ್ನೇಹಿ ಸೇವೆಯನ್ನು ಅಭಿನಂದಿಸಿ ಎಂಡಿ ಪದ್ಮಾವತಿ ಮತ್ತು ಕವಿಪ್ರನಿನಿ ಅಧೀಕ್ಷಕ ಎಂಜಿನಿಯರ್‌ ಇವರನ್ನು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

 ಮಂಗಳೂರು :  ಕೆನರಾ ಕೈಗಾರಿಕಾ ಅಸೋಸಿಯೇಶನ್‌ ಬೈಕಂಪಾಡಿ ಇದರ ವತಿಯಿಂದ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕೈಗಾರಿಕೆಗಳ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು.

ಇದಕ್ಕಾಗಿ 24 x 7 ವಾಹನವನ್ನು ಕೈಗಾರಿಕಾ ವಲಯ ಬೈಕಂಪಾಡಿಗೆ ಮಂಜೂರು ಮಾಡಲಾಗಿದೆ. ಇನ್ನು ಮಂದೆಯೂ ಇದೇ ರೀತಿಯ ಸೇವೆಯನ್ನು ನೀಡಲಾಗುವುದು ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಹೇಳಿದ್ದಾರೆ.ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕೈಗಾರಿಕಾ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ವ್ಯವಸ್ಥೆ ಸುಧಾರಣೆ ಬಗ್ಗೆ ಸಮಾಲೋಚನೆ ನಡೆಸಿದ ಅವರು, ಈ ವರ್ಷದ ಮಳೆಗಾಲದಲ್ಲಿ ಗಾಳಿ ಮಳೆಯಿಂದ ಕೈಗಾರಿಕಾ ವಲಯದಲ್ಲಿ ಅಡಚಣೆ ಉಂಟಾಗಿತ್ತು. ಅದನ್ನು ಕಡಿಮೆ ಮಾಡುವ ಸಲುವಾಗಿ ಹೆಚ್ಚುವರಿಯಾಗಿ ಸಿಬ್ಬಂದಿ, ವಾಹನ ಮತ್ತು ದೂರು ಸ್ವೀಕರಿಸಲು ಆಪರೇಟರ್‌ಗಳನ್ನು ನಿಯೋಜಿಸಿದ ಬಗ್ಗೆ ತಿಳಿಸಿದರು.ಸಭೆಯಲ್ಲಿ 110/11 ಕೆವಿ ಬೈಕಂಪಾಡಿ ಉಪಕೇಂದ್ರವನ್ನು ಸಂಪರ್ಕಿಸುವ ವಿದ್ಯುತ್‌ ಮಾರ್ಗ ತೀರಾ ಇಕ್ಕಟ್ಟಾಗಿರುವುದರಿಂದ ಪ್ರತ್ಯೇಕ ವಿದ್ಯುತ್‌ ಮಾರ್ಗದ ನಿರ್ಮಾಣ ಕಷ್ಟಸಾಧ್ಯವಾಗಿದೆ. ಆದ್ದರಿಂದ ಒಂದೇ ಕಂಬದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್‌ ಮಾರ್ಗಗಳನ್ನು ತರಲಾಗಿದೆ ಮತ್ತು ಬಿಪಿಸಿಎಲ್‌ ಫೀಡರ್‌ 5 ರ ಜೋಕಟ್ಟೆ ಫೀಡರ್‌ನೊಂದಿಗೆ ಹಾದುಹೋಗಿರುವ 1.2 ಕಿ.ಮೀ ಉದ್ದಕ್ಕೆ ಭೂಗತ ಕೇಬಲ್‌ನಿಂದ ಬದಲಾಯಿಸುವ ಕ್ರಮಕ್ಕೆ ಮೆಸ್ಕಾಂ ಮುಂದಾಗಿದ್ದು ಪ್ರಸ್ತಾವನೆಯನ್ನು ಮಂಜೂರಾತಿಗಾಗಿ ಸಲ್ಲಿಸಲಾಗಿದೆ ಎಂದರು.

ಪ್ರೀ ಪೇಯಿಡ್‌ ಮಾಪಕ ಬಗ್ಗೆ ಕೈಗಾರಿಕಾ ಸಂಘದ ಪ್ರಸ್ತಾವನೆಗೆ ಉತ್ತರಿಸಿದ ಅವರು, ಕೆಇಆರ್‌ಸಿ ನಿರ್ದೇಶನದಂತೆ ಈಗಾಗಲೆ ತಾತ್ಕಾಲಿಕ ಸ್ಥಾವರಗಳಿಗೆ ಕಡ್ಡಾಯವಾಗಿ ಮತ್ತು ಇತರೆ ಗ್ರಾಹಕರಿಗೆ ಕೋರಿಕೆ ಮೇರೆಗೆ ಮಾಪಕ ಅಳವಡಿಸಲಾಗುತ್ತದೆ. ಅಲ್ಲದೇ ಪ್ರೀ ಪೇಯಿಡ್‌ ಮಾಪಕ ಸರಬರಾಜಿಗಾಗಿ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಕೆನರಾ ಕೈಗಾರಿಕಾ ಅಸೋಸಿಯೇಶನ್‌ ಅಧ್ಯಕ್ಷ ಎನ್‌. ಅರುಣ್‌ ಪಡಿಯಾರ್‌ ವಹಿಸಿದ್ದರು. ಅಧೀಕ್ಷಕ ಎಂಜಿನಿಯರ್‌ ರವಿ ಕಾಮತ್‌, ಮುಖ್ಯ ಆರ್ಥಿಕ ಅಧಿಕಾರಿ ಮೌರೀಸ್‌ ಡಿʼಸೋಜಾ, ಕೆನರಾ ಕೈಗಾರಿಕಾ ಅಸೋಸಿಯೇಶನ್‌, ಪೂರ್ವಾಧ್ಯಕ್ಷ ಬಿ.ಎ. ನಜೀರ್‌, ಕಾರ್ಯದರ್ಶಿ ಬಿ.ಎ. ಇಕ್ಬಾಲ್‌ ಮತ್ತಿತರರು ಇದ್ದರು.

ಮೆಸ್ಕಾಂ ನೀಡುತ್ತಿರುವ ಗ್ರಾಹಕ ಸ್ನೇಹಿ ಸೇವೆಯನ್ನು ಅಭಿನಂದಿಸಿ ಎಂಡಿ ಪದ್ಮಾವತಿ ಮತ್ತು ಕವಿಪ್ರನಿನಿ ಅಧೀಕ್ಷಕ ಎಂಜಿನಿಯರ್‌ ಇವರನ್ನು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಕೈಗಾರಿಕಾ ವಲಯದಲ್ಲಿ ಆಗಬೇಕಿರುವ ವಿದ್ಯುತ್‌ ಸವಲತ್ತುಗಳು ಮತ್ತು ಅಹವಾಲುಗಳ ಬಗ್ಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿಯನ್ನು ಕೈಗಾರಿಕಾ ಸಂಘದವರು ಸಲ್ಲಿಸಿದರು.