ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿ ವರ್ಷ ಯುಗಾದಿ ಹಬ್ಬದ ಮೂರನೇ ದಿನ ತಾಲೂಕಿನ ಸಂತೆಕಸಲಗೆರೆಯ ಶ್ರೀಭೂಮಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ ಜಾತ್ರೆ ಅಟ್ಟುಣ್ಣುವ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಶತಮಾನಗಳಿಂದ ವೈಶಿಷ್ಟ್ಯಪೂರ್ಣವಾಗಿ ನಡೆದುಕೊಂಡು ಬರುತ್ತಿರುವ ಜಾತ್ರೆ ಈ ಬಾರಿ ಏ.೧೧ರಂದು ನಡೆಯಲಿದೆ. ಏಳೂರಿನ ಜನರು ಸೇರಿ ಈ ಜಾತ್ರೆಯನ್ನು ಆಚರಿಸುತ್ತಾರೆ. ಅಂದು ಜಾತ್ರೆ ಮುಗಿದ ಬಳಿಕ ಕತ್ತಲು ಆವರಿಸುವುದರೊಳಗೆ ಒಂದು ನರಪಿಳ್ಳೆಯೂ ಅಲ್ಲಿರುವಂತಿಲ್ಲ. ಎಲ್ಲರೂ ಜಾಗ್ರತೆಯಿಂದ ವಾಪಸಾಗುವುದು ಜಾತ್ರೆಯ ವಿಶೇಷವಾಗಿದೆ.ಸಂತೆಕಲಸಗೆರೆ ಗ್ರಾಮದ ಶ್ರೀಭೂಮಿಸಿದ್ದೆಶ್ವರಸ್ವಾಮಿಯ ದೇವಾಲಯಕ್ಕೆ ಶತಮಾನಗಳ ಇತಿಹಾಸವಿದೆ. ಶ್ರೀಭೂಮಿಸಿದ್ದೆಶ್ವರಸ್ವಾಮಿ ಮನೆದೇವರ ಭಕ್ತರು ಪುರಾತನ ಕಾಲದಿಂದಲೂ ಕುರಿ, ಕೋಳಿಗಳನ್ನು ಬಲಿಕೊಟ್ಟು ಅಟ್ಟುಣ್ಣುವ ಜಾತ್ರೆ ಮಾಡುವುದು ವಾಡಿಕೆ. ಇದು ತಲೆಮಾರುಗಳಿಂದ ನಡೆದು ಬಂದಿದೆ.
ಹಿಂದಿನ ತಲೆಮಾರಿನ ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಅರಣ್ಯ ಪ್ರದೇಶದಲ್ಲಿ ಅವರಿಗೆ ಇಷ್ಟ ಬಂದ ಕಡೆ ಅಡುಗೆ ತಯಾರು ಮಾಡುತ್ತಾರೆ. ಮಧ್ಯಾಹ್ನ ೨ ನಂತರ ಊಟಕ್ಕೆ ಬರುವ ನೆಂಟರಿಸ್ಟರಿಗೆ ಎಲೆಗಲ ಮೇಲೆ ಊಟ ಬಡಿಸುವರು. ಊಟ ಮಾಡಿದ ಬಳಿಕ ಎಲೆಗಳನ್ನು ಎತ್ತದೆ ಹಾಗೆಯೇ ಬಿಟ್ಟು ಸಂಜೆ ಸುಮಾರು ಏಳು ಗಂಟೆ ವೇಳೆಗೆ ಅಲ್ಲಿಂದ ಜಾಗ ಮಾಡುವುದು ಸಂಪ್ರದಾಯ. ರಾತ್ರಿಯಾದ ಮೇಲೆ ಯಾರೊಬ್ಬರೂ ಆ ಜಾಗದಲ್ಲಿರುವಂತಿಲ್ಲ. ಇಂದಿಗೂ ಅದನ್ನೇ ಅನುಸರಿಸಿಕೊಂಡು ಬರಲಾಗುತ್ತಿದೆ. ಮಾರನೇ ದಿನ ಬೆಳಗ್ಗೆ ಬಂದು ನೋಡಿದರೆ ಊಟ ಮಾಡಿದ ಎಲೆಗಳು ಅಲ್ಲಿ ಇರುವುದಿಲ್ಲ. ಅವು ಗಾಳಿಗೆ ತೂರಿ ಹೋಗಿರುತ್ತವೋ ಅಥವಾ ನಿಜವಾಗಿಯೂ ಮಾಯಾವಾಗಿರುತ್ತವೋ ತಿಳಿಯದಾಗಿದೆ.ಯುಗಾದಿ ಹಬ್ಬದ ಮಾರನೇ ದಿನ ಗ್ರಾಮದ ನಡಕೇರಪ್ಪನ ಗುಡಿಯಲ್ಲಿ ಹರಕೆ ಕಟ್ಟಿಕೊಂಡು ಬಂದ ಭಕ್ತರಿಗೆ ಬಾಯಿಬೀಗ ಚುಚ್ಚುತ್ತಾರೆ. ತಮಟೆ, ಕಹಳೆ, ಛತ್ರಿ ಸಮೇತವಾಗಿ ಪತ್ತಿನ ಸೇವೆ ಮಾಡಿ ಭಕ್ತ ಸಮೂಹವು ಸಾಲಾಗಿ ಹೆಬ್ಬಾಗಿಲು ದಾಟಿ ಶ್ರೀ ಭೂಮಿಸಿದ್ದೇಶ್ವರ ದೇವಾಲಯ ತಲುಪುತ್ತಾರೆ. ಮರು ದಿನ ದೇವಾಲಯದ ಅಂಗಳದಲ್ಲಿ ಏಳೂರಿನ ಜನರು ಸೇರಿ ನಡೆಸುವ ಜಾತ್ರೆಯೇ ‘ಶ್ರೀ ಭೂಮಿಸಿದ್ದೇಶ್ವರ ಜಾತ್ರೆ’ ಅಥವಾ ‘ಅಟ್ಟುಣ್ಣುವ ಜಾತ್ರೆ’ ಎಂದು ಜನಜನಿತವಾಗಿದೆ.
ವಾಸ್ತವದಲ್ಲಿ ಈ ಸ್ಥಳದಲ್ಲಿ ಮರಾಠರಿಗೂ ಮೈಸೂರಿನ ಸೈನಿಕರಿಗೂ ಯುದ್ಧ ನಡೆದ ಸ್ಥಳವಾದ್ದರಿಂದ ಈ ನೆಲಕ್ಕೆ ಶಾಂತಿ ಮಾಡುವುದಕ್ಕಾಗಿ ಅಂದು ಮರಿಯ ರಕ್ತ ಕೆಡವಿ ಶಾಂತಿ ಮಾಡುತ್ತಾರೆ. ಮಧ್ಯಾಹ್ನ ಪ್ರತಿ ಊರುಗಳಿಂದ ಅಸಿಟ್ಟಿನ ಹೆಡಿಗೆಯನ್ನು ತರುವ ಮಹಿಳೆಯರು ಮಾರಿಗುಡಿಯಲ್ಲಿ ಮಡಿಯಿಂದ ಹೆಡಿಗೆಯೊಳಗೆ ಅಡುಗೆ ಸಾಮಾನುಗಳನ್ನು ತಮಟೆ ಸಮೇತ ತರುತ್ತಾರೆ. ಮಾಂಸದಡುಗೆಯಾದ ನಂತರ ದಾಸಯ್ಯನನ್ನು ಕರೆದು ಎಡಕೊಟ್ಟು ನಂತರ ತಮ್ಮೊಂದಿಗೆ ಬಂದ ನೆಂಟರಿಷ್ಟರೊಂದಿಗೆ ಕೂತು ಉಂಡು ಕತ್ತಲಾಗುವುದರೊಳಗೆ ಊರಿಗೆ ವಾಪಸಾಗಿಬಿಡುತ್ತಾರೆ. ಯಾರೊಬ್ಬರೂ ರಾತ್ರಿ ಅಲ್ಲಿ ಉಳಿಯುವಂತಿಲ್ಲ. ಸ್ವತಃ ಶ್ರೀ ಭೂಮಿಸಿದ್ದೇಶ್ವರ ಪಲ್ಲಕ್ಕಿಯಲ್ಲಿ ಕುಳಿತು ಅಂಗಳದ ಸುತ್ತ ಓಡಾಡಿಕೊಂಡು ಭಕ್ತರು ಉಂಡು ಎಸೆದ ಎಲೆಗಳನ್ನು ಎತ್ತಿಸಿ ಒಂದು ಗುಂಡಿಗೆ ಹಾಕಿಸುತ್ತಾನೆಂಬುದು ಜನಪದರ ನಂಬಿಕೆ. ಇಂದಿಗೂ ಊರ ಜನರು ಈ ಕಥೆಯನ್ನು ನಂಬುತ್ತಾರೆ. ಹಾಗಾಗಿ ಜಾತ್ರೆ ನಡೆದ ರಾತ್ರಿ ಯಾರೂ ಕೂಡ ಅಲ್ಲಿ ಸುಳಿದಾಡುವುದಿಲ್ಲ.ತಲೆಎತ್ತಿದ ಶಿಲಾಮಯ ದೇಗುಲ:
ಈ ಪದ್ದತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇದೀಗ ಶ್ರೀಭೂಮಿಸಿದ್ದೇಶ್ವರ ದೇವಸ್ಥಾನ ಸಮಿತಿಯು ಸುಮಾರು ೬-೮ ಕೋಟಿ ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾದ ದೇವಾಲಯ ನಿರ್ಮಾಣಗೊಳಿಸುತ್ತಿದ್ದು, ಗೋಪುರ, ಗರ್ಭಗುಡಿ, ವಿಶಾಲ ಪ್ರಾಂಗಣ, ಕಲ್ಲಿನ ಕಂಬಗಳು ಶಿಲ್ಪಕಲೆಯನ್ನು ಬಿಂಬಿಸುವಂತೆ ಆಂಧ್ರಪ್ರದೇಶದ ಪ್ರಭಾಕರ್ ಕುಪ್ಪಂ ಎಂಬುವರು ನಿರ್ಮಿಸುತ್ತಿದ್ದಾರೆ. ಸಮಿತಿಯು ೨೪ ಸದಸ್ಯರನ್ನು ಹೊಂದಿದ್ದು, ಸಂತೆಕಸಲಗೆರೆ, ಕೊತ್ತತ್ತಿ, ಮಂಗಲ, ಕಾರಸವಾಡಿ, ಮೊತ್ತಹಳ್ಳಿ, ಯತ್ತಗದಹಳ್ಳಿ, ಎ.ಹುಲ್ಲುಕೆರೆ, ಹನಿಯಂಬಾಡಿ, ಬೇವಿನಹಳ್ಳಿ, ದೇವಿಪುರ ಸೇರಿದಂತೆ ಒಟ್ಟು ಹತ್ತು ಗ್ರಾಮಗಳನ್ನು ಒಳಗೊಂಡಿದೆ.೨೬ ಎಕರೆ ೨೦ ಕುಂಟೆ ವಿಸ್ತಾರ ಜಾಗ ಹೊಂದಿರುವ ಈ ದೇವಾಲಯಕ್ಕೆ ಹೊರ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ವಿಶೇಷ. ಹಾಗಾಗಿ ಇಲ್ಲಿ ಅರಕೆರೆ ಹೋಬಳಿ ಬನ್ನಹಳ್ಳಿಯ ಜವರೇಗೌಡರು ದೇವಸ್ಥಾನದ ಸುತ್ತಲೂ ಆಲದ ಮರಗಳನ್ನು ನೆಟ್ಟು ೧೫ ವರ್ಷಗಳ ಕಾಲ ಪೋಷಿಸಿದ್ದರಿಂದ ಇಲ್ಲಿ ನರಳಿಗೆ ಬರವಿಲ್ಲ.
ಅಭಿವೃದ್ಧಿ ಕಾರ್ಯಕೈಗೊಂಡ ಸಮಿತಿಗೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ರವೀಂದ್ರ ಶ್ರೀಕಂಠಯ್ಯ ೨೦ ಲಕ್ಷ ರು. ಮಧು ಜಿ.ಮಾದೇಗೌಡರು ೧೦ ಲಕ್ಷ ರು. ಹಣವನ್ನು ತಮ್ಮ ಶಾಸಕತ್ವದ ಅನುದಾನವನ್ನು ಒದಗಿಸಿದ್ದು, ಅದರಂತೆ ಅನೇಕ ಜನಪ್ರತಿನಿಧಿಗಳು, ಭಕ್ತಾದಿ ಮುಖಂಡರು ಸೇರಿದಂತೆ ಜನಸಾಮಾನ್ಯರೂ ಯಥಾಶಕ್ತಿ ಧನಸಹಾಯ ಮಾಡಿದ್ದರಿಂದ ಸಮಿತಿಯು ೨೦೦೩ರಲ್ಲಿ ಸಮುದಾಯ ಭವನ, ೨೦೧೨ರಲ್ಲಿ ಹೊಸ ಸಮುದಾಯ ಭವನ ಮತ್ತು ಮಿನಿ ಸಮುದಾಯ ಭವನಗಳೂ ನಿರ್ಮಾಣಗೊಳಿಸಿದೆ. ಪರಿಣಾಮ ಸುತ್ತಮುತ್ತಲ ಹಳ್ಳಿಗಳ ರೈತರಿಗೆ ವಿವಾಹ, ನಾಮಕರಣ, ಬೀಗರ ಔತಣ, ದೇವರ ಕಾರ್ಯ ಮುಂತಾದವನ್ನು ಮಾಡಲು ಅನುಕೂಲ ಕಲ್ಪಿಸಲಾಗಿದೆ.