ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನಲ್ಲಿ ಅ. 3 ರಿಂದ ಅ. 12 ರವರೆಗೆ ದಸರಾ- 2024 ಉತ್ಸವಗಳು ನಡೆಯಲಿದ್ದು, ಪ್ರವಾಸೋದ್ಯಮ ಇಲಾಖೆಯು ಸಾಮಾಜಿಕ ಜಾಲತಾಣಗಳನ್ನು ಕೇಂದ್ರೀಕರಿಸಿ ''''ಡಿಸ್ಕವರ್ ಮೈಸೂರು'''' ಉಪಕ್ರಮದ ಮೂಲಕ ಪ್ರಚಾರ ಅಭಿಯಾನ ಪ್ರಾರಂಭಿಸಿದೆ.ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಟೂರಿಸಂ ಸೊಸೈಟಿ (ಕೆಟಿಎಸ್) ಸಹಯೋಗದಲ್ಲಿ ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವುದು ಮತ್ತು ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ಗುರುವಾರ ಬ್ಲಾಗರ್ ಗಳ ತಂಡ ಸೋಮನಾಥಪುರದ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಇತಿಹಾಸ ಹಾಗೂ ವಾಸ್ತುಶಿಲ್ಪದ ಬಗ್ಗೆ ಪ್ರವಾಸಿ ಮಾರ್ಗದರ್ಶಿಗಳಿಂದ ಮಾಹಿತಿ ಪಡೆದು ದೇವಸ್ಥಾನದ ಶಿಲ್ಪಕಲೆ ಹಾಗೂ ಕೆತ್ತನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.ಈ ವೇಳೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಅವರು ಬ್ಲಾಗರ್ ಗಳನ್ನು ಸ್ವಾಗತಿಸಿದರು. ಈ ವೇಳೆ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಪ್ರಾದೇಶಿಕ ಆಯುಕ್ತ ಫಾರುಕ್ ಅಹಮದ್, ಸಹಾಯಕ ನಿರ್ದೇಶಕ ಕೇದಾರ್ ನಾಥ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ದಸರಾ ವಸ್ತು ಪ್ರದರ್ಶನ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಸಿ. ನಾರಾಯಣ ಗೌಡ, ಸೇಫ್ ವ್ಹೀಲ್ಸ್ ಅಧ್ಯಕ್ಷ ಪ್ರಶಾಂತ್, ಗೈಡ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಮೊದಲಾದವರು ಇದ್ದರು.ಬಂಡೀಪುರಕ್ಕೆ ಭೇಟಿ ನೀಡಿ ಬ್ಲಾಗರ್ ಗಳ ತಂಡ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಸಹಯೋಗದಲ್ಲಿ ಬ್ಲಾಗರ್ಸ್ ಮೀಟ್ ಹಿನ್ನೆಲೆಯಲ್ಲಿ ಬ್ಲಾಗರ್ ಗಳ ತಂಡ ಬಂಡಿಪುರದ ಜಂಗಲ್ ಲಾಡ್ಜ್ ಗೆ ತೆರಳಿ ಅಲ್ಲಿನ ಸ್ಥಳದ ಪ್ರಾಚೀನತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಿ ಆನಂದಿಸಿದರು.ಬಳಿಕ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡುಗಳಲ್ಲಿ ಅತ್ಯಾಕರ್ಷಕ ಸಫಾರಿಗೆ ತೆರಳಿದರು. ಅಲ್ಲಿ ಆನೆ, ಚಿರತೆ, ಭಾರತೀಯ ಗೌರ್, ಜಿಂಕೆ, ಸಾಂಬಾರ್ ಮತ್ತು ಸುಂದರವಾದ ನವಿಲು ಸೇರಿದಂತೆ ಹಲವು ಬಗೆಯ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ, ಕಾಡಿನ ನಿವಾಸಿಗಳೊಂದಿಗೆ ಸಂವಾದ ನಡೆಸಿ ಅವರ ಜೀನವನ ಕ್ರಮ ತಿಳಿದರು.ಭೇಟಿಯ ನೆನಪಿಗಾಗಿ ಮತ್ತು ಡಿಸ್ಕವರ್ ಮೈಸೂರು ಕಾರ್ಯಕ್ರಮದ ಭಾಗವಾಗಿ ಸಸಿ ನೆಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.