ಸಾರಾಂಶ
-ಯೋಗಾಚರ್ಯ ನರಸಿಂಹ ವೈದ್ಯಜನುಮದಿನದ ಪ್ರಯುಕ್ತ ರಕ್ತದಾನ ಶಿಬಿರ ಉದ್ಘಾಟನೆ
-----ಕನ್ನಡಪ್ರಭ ವಾರ್ತೆ ಶಹಾಪುರ
ಮನುಷ್ಯ ಸಾತ್ವಿಕ ಭಾವನೆಯಿಂದ ಬದುಕಬೇಕು. ಜೀವನದಲ್ಲಿ ಸಾಧ್ಯವಾದಷ್ಟು ಸತ್ಕಾರ್ಯಗಳನ್ನು ಮಾಡಬೇಕು. ಅಂದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ಸತ್ಕಾರ್ಯ ಮಾಡುವವರಿಗೆ ಮಾತ್ರ ಈ ಭೂಮಿಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಹಿರಿಯ ವಕೀಲರಾದ ಆರ್.ಎಂ. ಹೊನ್ನಾರಡ್ಡಿ ತಿಳಿಸಿದರು.ನಗರದ ಯೋಗಾಲಯ ಸಭಾಂಗಣದಲ್ಲಿ ಯೋಗ ಗುರು ನರಸಿಂಹ ವೈದ್ಯ ಅವರ 62ನೇ ಜನುಮದಿನದ ಪ್ರಯುಕ್ತ ಅವರ ಶಿಷ್ಯ ಬಳಗದ ವತಿಯಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ಎರಡು ದಶಕಗಳಿಂದ ಆರೋಗ್ಯಕರ ಸಮಾಜ ನಿರ್ಮಿಸಲು ಯೋಗಾಚಾರ್ಯ ನರಸಿಂಹ ವೈದ್ಯ ಅವರು ಮತ್ತು ಅವರ ತಂಡ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಭಾಗಿತ್ವ ಅಗತ್ಯವೆಂದರು.ಅನೇಕ ವರ್ಷಗಳಿಂದ ವೈದ್ಯ ಗುರುಗಳು, ಉಚಿತ ಯೋಗ ಶಿಬಿರದ ಮೂಲಕ ನಾಗರಿಕರ ಆರೋಗ್ಯ ಜೀವನಕ್ಕೆ ಬೋಧನೆ ಮಾಡಿದ್ದಾರೆ. ಯೋಗ ಅಭ್ಯಾಸ ಮಾಡಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಯೋಗಾಲಾಯ ನಿರ್ಮಿಸಬೇಕಾದರೆ ಹಲವಾರು ಏರಿಳಿತ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ, ಈ ಮಟ್ಟಕ್ಕೆ ಬರಲಾಗಿದೆ. ಪ್ರಸ್ತುತ ನಗರದಲ್ಲಿ ಯೋಗ ಗುರುಗಳಿಂದ ಸಾವಿರಾರು ಯುವಕರು
ಸ್ಫೂರ್ತಿಗೊಂಡ ಯೋಗ ಅಭ್ಯಾಸ ಮಾಡುವ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಹೆಮ್ಮೆಯ ವಿಷಯವಾಗಿದೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿ, ಮಾನವ ಜೀವನ ಶಾಶ್ವತವಲ್ಲ. ಆದರೆ, ಅವರು ಮಾಡಿದ ಸತ್ಕಾರ್ಯಗಳು ಯಾವಾಗಲೂ ಶಾಶ್ವತವಾಗಿ ಉಳಿಯುತ್ತವೆ. ಎನ್ನುವುದಕ್ಕೆ ಯೋಗ ಗುರು ನರಸಿಂಹ ವೈದ್ಯರೆ ಜೀವಂತ ಸಾಕ್ಷಿ ಎಂದರು.
20 ವರ್ಷಗಳ ಹಿಂದೆಯೇ ನಗರದಲ್ಲಿ ಯೋಗ ಅಭ್ಯಾಸ ಮಾಡಿಸುವ ಮೂಲಕ ಯುವಕರನ್ನು ಯೋಗ ಶಿಕ್ಷಕರನ್ನಾಗಿಸಿದ ಕೀರ್ತಿ ಅವರಿಗಿದೆ. ಉತ್ತಮ ಸಮಾಜ ನಿರ್ಮಿಸಬೇಕೆಂಬ ಅವರ ತುಡಿತ ಹೆಚ್ಚಿದೆ. ಹೀಗಾಗಿ ವಯಸ್ಸು ಮತ್ತು ಆಯುಸ್ಸು ನಡುವೆ ಜನುಮ ದಿನವೆಂಬುದು ಸೇತುವೆಯಾಗಿದೆ. ದೇವರು ವೈದ್ಯ ಗುರುಗಳಿಗೆ ಹೆಚ್ಚಿನ ಆಯಸ್ಸು ಒದಗಿಸಲಿ ಎಂದು ಶುಭ ಹಾರೈಸಿದರು.ಡಾ. ದೇವಿಪ್ರಸಾದ ಮಾತನಾಡಿದರು. ಡಾ. ವಿನೋದಕುಮಾರ, ಡಾ. ವೀರೇಂದ್ರ ವಾಲಿ, ಡಾ. ಸಂಗಣ್ಣ ನುಚ್ಚಿನ್, ಪ್ರೇಮನಾಥ ಶೆಟ್ಟಿ ಇತರರಿದ್ದರು.
ಯೋಗ ಬಂಧು ಸೀಮಾ ಪ್ರಾರ್ಥನೆ ಗೀತೆ ಹಾಡಿದರು. ಸಂಗಣ್ಣಗೌಡ ಅನ್ವಾರ ಸ್ವಾಗತಿಸಿದರು. ಶರಣಗೌಡ ವಂದಿಸಿದರು. 25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.-----
ಫೋಟೊ: 22ವೈಡಿಆರ್6: ಶಹಾಪುರ ನಗರದ ಯೋಗಾಲಾಯ ಸಭಾಂಗಣದಲ್ಲಿ ಯೋಗಾಚರ್ಯ ನರಸಿಂಹ ವೈದ್ಯ ಅವರ ಜನುಮದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಉದ್ಘಾಟಿಸಲಾಯಿತು.