ದಾವಣಗೆರೆ ಬಿಐಇಟಿಯಲ್ಲಿ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಇಂಬು

| Published : May 18 2025, 01:59 AM IST

ದಾವಣಗೆರೆ ಬಿಐಇಟಿಯಲ್ಲಿ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ಇಂಬು
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನ ಪ್ರಮಾಣ ಹೆಚ್ಚಿಸಲು ಮನೆಯಿಂದಲೇ ಮತ ಚಲಾಯಿಸಲು ಪೂರಕವಾಗಿರುವ ಆ್ಯಪ್‌, ಕೃಷಿ ಬೆಳೆಗಳ ಸಾಲಿನಲ್ಲಿ ಕಳೆಯಲ್ಲೂ ಕಾಣಿಸುವ ಕ್ಯಾನ್ಸರ್‌ಗೆ ಔಷಧಿ, ಹೀಗೆ ವಿದ್ಯಾರ್ಥಿಗಳ ಆಲೋಚನೆಯಲ್ಲಿ ರೂಪುಗೊಂಡ ಅನೇಕ ಸಂಶೋಧನೆಗಳು ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ (ಬಿಐಇಟಿ) ಕಾಲೇಜನಲ್ಲಿ ಅನಾವರಣಗೊಂಡವು.

ಯೋಜನಾ ಪ್ರದರ್ಶನ, ರಾಷ್ಟ್ರೀಯ ತಂತ್ರಜ್ಞಾನ ದಿನ । ಎಂಜಿನಿಯರ್‌ ವಿದ್ಯಾರ್ಥಿಗಳ ಹೊಸ ಸಂಶೋಧನೆಗಳ ಅನಾವರಣ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೈಗಾರಿಕೆಗಳಲ್ಲಿ ಅನಿಲ ಸೋರಿಕೆಯಿಂದಾಗುವ ಭಾರೀ ಅನಾಹುತ ತಪ್ಪಿಲು ಗ್ಯಾಸ್ ಸೋರಿಕೆಯಾಗುತ್ತಿದ್ದಂತೆಯ ಸಿಗ್ನಲ್ ನೀಡುವ ಯಂತ್ರ, ವಾಹನ, ರೈಲುಗಳ ಅಪಘಾತ ತಡೆಯುವ ಯಂತ್ರ, ಮತದಾನ ಪ್ರಮಾಣ ಹೆಚ್ಚಿಸಲು ಮನೆಯಿಂದಲೇ ಮತ ಚಲಾಯಿಸಲು ಪೂರಕವಾಗಿರುವ ಆ್ಯಪ್‌, ಕೃಷಿ ಬೆಳೆಗಳ ಸಾಲಿನಲ್ಲಿ ಕಳೆಯಲ್ಲೂ ಕಾಣಿಸುವ ಕ್ಯಾನ್ಸರ್‌ಗೆ ಔಷಧಿ, ಹೀಗೆ ವಿದ್ಯಾರ್ಥಿಗಳ ಆಲೋಚನೆಯಲ್ಲಿ ರೂಪುಗೊಂಡ ಅನೇಕ ಸಂಶೋಧನೆಗಳು ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ (ಬಿಐಇಟಿ) ಕಾಲೇಜನಲ್ಲಿ ಅನಾವರಣಗೊಂಡವು.

ನಗರದ ಬಿಐಇಟಿ ಕಾಲೇಜಿನ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಿರ್ಮಾಣ 5.0 ಯೋಜನಾ ಪ್ರದರ್ಶನ-2025 ಮತ್ತು ರಾಷ್ಟ್ರೀಯ ತಂತ್ರಜ್ಞಾನ ದಿನ-2025 ಸಮಾರಂಭದಲ್ಲಿ ಎಂಜಿನಿಯರಿಂದ್ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಆಲೋಚನೆ, ಪ್ರಯತ್ನದಿಂದ ರೂಪುಗೊಂಡ ಅನೇಕ ಸಂಶೋಧನೆಗಳು ಅತಿಥಿಗಳು, ಗಣ್ಯರು, ಕಾಲೇಜು ಪ್ರಾಚಾರ್ಯರು, ಪ್ರಾಧ್ಯಾಕರ ಗಮನ ಸೆಳೆಯುವಂತಿದ್ದವು.

ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಕಿರಣಕುಮಾರ, ವಿ.ಗಣೇಶ, ರಾಜೀವ್‌, ಮಹೇಶ ತಂಡವು ಬೃಹತ್ ಉದ್ದಿಮೆ, ಕೈಗಾರಿಕೆಗಳಲ್ಲಿ ಅನಿಲ ಸೋರಿಕೆಯಿಂದ ಆಗುತ್ತಿದ್ದ ಅಪಾಯ ತಡೆಗೆ ಸಿಗ್ನಲ್ ಮೂಲಕ ಜಾಗೃತಿ ಮೂಡಿಸುವ ಸಂಶೋಧನೆ ಮಾಡಿದ್ದಾರೆ. ಅನಿಲ ಸೋರಿಕೆಯಿಂದಾಗುವ ಭಾರೀ ಅನಾಹುತ ತಪ್ಪಿಸುವ ಯಂತ್ರವನ್ನು ಈ ತಂಡ ಸಂಶೋಧಿಸಿದ್ದು, ಎಲ್ಲರ ಗಮನ ಸೆಳೆಯಿತು. ಇ ಅಂಡ್‌ ಸಿ ವಿಭಾಗದ ಸ್ಮಿತಾ, ದೀಕ್ಷಿತಾ ತಂಡ ಸೋಲಾರ್ ಬೈಸಿಕಲ್ ತಯಾರಿಸಿದ್ದು, ಅದೇ ವಿಭಾಗದ ಖುಷಿ, ಉಸ್ಮಾಜಾನ್‌ ಶಾಪಿಂಗ್ ಮಾಲ್‌ನಲ್ಲಿ ಸರದಿಯಲ್ಲಿ ನಿಂತು, ಖರೀದಿಸಿರುವ ವಸ್ತುಗಳಿಗೆ ಬಿಲ್ ಪಡೆಯುವುದನ್ನು ತಪ್ಪಿಸಲು ಸ್ಮಾರ್ಟ್ ಶಾಪಿಂಗ್ ಕಾರ್ಡ್ ಸಂಶೋಧಿಸಿದ್ದಾರೆ.

ಇ ಅಂಡ್‌ ಸಿ ವಿಭಾಗದ ಟಿ.ಸಹನಾ, ಎಂ.ಎಸ್.ಸಂಜನಾ, ಧನಂಜಯ, ಕೆ.ಸಹನಾ ತಂಡವು ರೈಲುಗಳ ಮಧ್ಯೆ ಆಗುವ ಅಪಘಾತ ತಪ್ಪಿಸಲು ಸಿಗ್ನಲ್‌ಗಳನ್ನು ಪ್ರಾಯೋಗಿಕವಾಗಿ ಸಂಶೋಧನೆ ಮಾಡಿದ್ದು, ರೈಲುಗಳು ಮುಖಾಮುಖಿಯಾಗುವುದನ್ನು ಸಿಗ್ನಲ್‌ನಿಂದಲೇ ಜಾಗೃತಿ ಮೂಡಿಸಿ, ರೈಲು ಅಪಘಾತ ತಪ್ಪಿಸುವ ಯೋಜನೆ ಇದಾಗಿದೆ. ಇನ್ಫಾರ್ಮೇಷನ್‌ ಸೈನ್ಸ್ ವಿಭಾಗದ ಐಶ್ವರ್ಯ, ಪವನ್, ಶಿವಪ್ರಸಾದ, ಚಂದನ ತಂಡವು ಅಂಧರಿಗೆ ಅನುಕೂಲವಾಗಲು ಕ್ಯಾಮೆರಾ ಕನ್ನಡ ತಯಾರಿಸಿದ್ದಾರೆ.

ಇನ್ಫಾರ್ಮೇಷನ್ ಅಂಡ್ ಸೈನ್ಸ್‌ ವಿಭಾಗದ ವಿದ್ಯಾರ್ಥಿಗಳಾದ ಮನೀಶ್ ಎಸ್.ಚಿಕ್ಕಮಠ, ಪ್ರಜ್ವಲ್ ಮಲ್ಲೂರ್, ಎನ್.ಎಚ್.ಶಂಕರ್, ವೈ.ರವಿತೇಜ ತಂಡವು ರಸ್ತೆ ನಿಯಮ, ಸಂಚಾರ ನಿಯಮ ಪಾಲಿಸಿದರೂ ವಾಹನಗಳ ಅಪಘಾತ ತಡೆ ಸಾಧ್ಯವಾಗುತ್ತಿಲ್ಲವೆಂಬ ಕೊರಗನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ.

ಇದೇ ವಿಭಾಗದ ನಂದನ್‌, ಮನೋಜ್, ಮಂಜುನಾಥ, ತೇಜಸ್‌ ತಂಡವು ವಿದೇಶಗಳ ಮಾದರಿಯಲ್ಲಿ ಮತದಾನಕ್ಕೆ ವೆಬ್ ಅಭಿವೃದ್ಧಿಪಡಿಸಿದ್ದಾರೆ. ಬಿಐಇಟಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರ ತರುವಲ್ಲಿ ಇಂತಹದ್ದೊಂದು ವೇದಿಕೆ ಕಲ್ಪಿಸಿದ್ದು, 9 ವಿಭಾಗಗಳ 60 ವಿದ್ಯಾರ್ಥಿ ಯೋಜನೆಗಳು ಪ್ರದರ್ಶನಗೊಂಡವು. ಅತ್ಯುತ್ತಮ ನವೀನ ಯೋಜನೆ, ಸಾಮಾಜಿಕ ಕಳಕಳಿಯಿಂದ ಅತ್ಯುತ್ತಮ ಯೋಜನೆ, ವಿಭಾಗದ ಅತ್ಯುತ್ತಮ ಯೋಜನೆಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

ಬೆಂಗಳೂರಿನ 1 ಪೇಜ್ ಸಂಸ್ಥಾಪಕ, ಸಿಇಒ, ಕಾಲೇಜಿನ ಹಳೆಯ ವಿದ್ಯಾರ್ಥಿ ಪೂರಣ ಪ್ರಸಾದ್ ರಾಜಣ್ಣ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕಾಲೇಜು ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ.ಎಚ್.ಬಿ.ಅರವಿಂದ, ಸಂಚಾಲಕರಾದ ಡಾ.ಎ.ಜಿ.ಶಂಕರಮೂರ್ತಿ, ಕೆಮಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಕಲ್ಲೇಶಪ್ಪ, ಶ್ರೀನಿಧಿ ಕುಲಕರ್ಣಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.