ಬೆಂಗಳೂರು : ನೀರು ಚೆಲ್ಲಿಕೊಂಡು ಆಟವಾಡುವಾಗ ಶಿಕ್ಷಕಿಯ ಹೊಡೆತಕ್ಕೆ ಮುರಿದ ಹಲ್ಲು !

| Published : Nov 09 2024, 01:23 AM IST / Updated: Nov 09 2024, 08:13 AM IST

ಬೆಂಗಳೂರು : ನೀರು ಚೆಲ್ಲಿಕೊಂಡು ಆಟವಾಡುವಾಗ ಶಿಕ್ಷಕಿಯ ಹೊಡೆತಕ್ಕೆ ಮುರಿದ ಹಲ್ಲು !
Share this Article
  • FB
  • TW
  • Linkdin
  • Email

ಸಾರಾಂಶ

ತರಗತಿಯಲ್ಲಿ ಸಹಪಾಠಿಗಳ ಜತೆಗೆ ನೀರು ಚೆಲ್ಲಿಕೊಂಡು ಆಟವಾಡುವಾಗ ಹಿಂದಿ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಕೋಲಿನಿಂದ ಹೊಡೆದು ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದೆ.

 ಬೆಂಗಳೂರು : ತರಗತಿಯಲ್ಲಿ ಸಹಪಾಠಿಗಳ ಜತೆಗೆ ನೀರು ಚೆಲ್ಲಿಕೊಂಡು ಆಟವಾಡುವಾಗ ಹಿಂದಿ ಶಿಕ್ಷಕಿ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಕೋಲಿನಿಂದ ಹೊಡೆದು ಹಲ್ಲು ಮುರಿದಿರುವ ಆರೋಪ ಕೇಳಿ ಬಂದಿದೆ.

ಜಯನಗರ 4ನೇ ಬ್ಲಾಕ್‌ನ ಹೋಲಿ ಕ್ರೈಸ್ತ ಶಾಲೆಯಲ್ಲಿ ನ.7ರಂದು ಈ ಘಟನೆ ನಡೆದಿದೆ. 6ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದಾನೆ. ಈ ಸಂಬಂಧ ವಿದ್ಯಾರ್ಥಿಯ ತಂದೆ ಅನಿಲ್‌ ಕುಮಾರ್‌ ವಿ.ಪೈ ಅವರು ನೀಡಿದ ದೂರಿನ ಮೇರೆಗೆ ಹಿಂದಿ ಶಿಕ್ಷಕಿ ಅಜ್ಮತ್‌ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಜಯನಗರ 4ನೇ ಬ್ಲಾಕ್‌ ನಿವಾಸಿ ಅನಿಲ್‌ ಕುಮಾರ್ ವಿ.ಪೈ ಅವರ 11 ವರ್ಷದ ಪುತ್ರ ಹೋಲಿ ಕ್ರೈಸ್ತ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನ.7ರಂದು ಮಧ್ಯಾಹ್ನ ಸುಮಾರು 12.30ಕ್ಕೆ ದೂರುದಾರರ ಪುತ್ರ ತನ್ನ ಸಹಪಾಠಿಗಳೊಂದಿಗೆ ತರಗತಿಯಲ್ಲಿ ನೀರು ಚೆಲ್ಲುತ್ತಾ ಆಡುವಾಡುತ್ತಿದ್ದ. ಈ ವಿಚಾರ ತಿಳಿದು ಹಿಂದಿ ಶಿಕ್ಷಕಿ ಅಜ್ಮತ್‌ ಕೋಲಿನಿಂದ ವಿದ್ಯಾರ್ಥಿ ಮುಖಕ್ಕೆ ಹೊಡೆದಿದ್ದಾರೆ.

ಇದರಿಂದ ವಿದ್ಯಾರ್ಥಿ ಮುಖಕ್ಕೆ ಗಾಯವಾಗಿದ್ದು, ಹಲ್ಲೊಂದು ಮುರಿದಿದೆ. ಪುತ್ರನ ಮೇಲಿನ ಹಲ್ಲೆ ವಿಚಾರ ತಿಳಿದ ಅನಿಲ್‌ ಕುಮಾರ್‌, ಪುತ್ರನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ಹಲ್ಲೆ ಘಟನೆ ಸಂಬಂಧ ಹಿಂದಿ ಶಿಕ್ಷಕಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.