ಸಾರಾಂಶ
-ಹಲವಾರು ಪ್ರಯೋಜನಗಳ ನೇರಳೆ ಹಣ್ಣು । ಚಿಕ್ಕಬಳ್ಳಾಪುರದ ಗಲ್ಲಿಗಲ್ಲಿಗಳಲ್ಲಿ ಹಣ್ಣಿನ ಮಾರಾಟ ಜೋರು । ರೈತರ ಹರ್ಷ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಈ ಬಾರಿ ಜಂಬುನೇರಳೆ ಮರಗಳಲ್ಲಿ ಭರಪೂರ ಫಸಲು ಬಂದಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಕಾರುಬಾರು ಜೋರಾಗಿದೆ. ನಗರ, ಪಟ್ಟಣ ಮತ್ತು ಗ್ರಾಮಗಳ ಗಲ್ಲಿ ಗಲ್ಲಿಗಳಲ್ಲಿ ನೇರಳೆ ಹಣ್ಣಿನದ್ದೆ ಕಮಾಲ್ ಶುರುವಾಗಿದೆ. ಬೆಳೆದ ರೈತರಿಗೂ ಲಾಭ ಸೇವಿಸಿದ ಗ್ರಾಹಕರಿಗೂ ಭಾರೀ ಲಾಭವಾಗಿದೆ.
ನೇರಳೆ ಹಣ್ಣಿನಲ್ಲಿ ವಿವಿಧ ಔಷಧಿಯ ಗುಣಗಳಿದ್ದು, ಕೆಲವು ಕಾಯಿಲೆಗಳಿಗೆ ನೇರಳೆ ಹಣ್ಣು ರಾಮಬಾಣ ಅನ್ನೋ ಪ್ರಚಾರ ಆಗಿದ್ದೇ ತಡ, ಮಾರುಕಟ್ಟೆಯಲ್ಲಿ ಮುಗಿಬಿದ್ದು ನೇರಳೆ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ನೇರಳೆ ಬೆಳೆದ ರೈತರಿಗೆ ಜಣ ಜಣ ಕಾಂಚಣವಾದರೆ, ಗ್ರಾಹಕರು ಔಷಧಯುಕ್ತ ಹಣ್ಣು ತಿಂದು ಖುಷಿಪಡುತ್ತಿದ್ದಾರೆ.ಕಾಡು ಮೇಡು ಬೆಟ್ಟಗುಡ್ಡ, ರೈತರ ಬದುಗಳಲ್ಲಿ ಕಾಣಸಿಗುತ್ತಿದ್ದ ನೇರಳೆ ಹಣ್ಣನ್ನು ಕಂಡರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಆದರೆ ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನು ವಾಸಿಮಾಡಬಲ್ಲದ್ದು ಎಂದು ಬಾರೀ ಡಿಮ್ಯಾಂಡ್ ಬಂದಿದೆ.
ಚಿಕ್ಕಬಳ್ಳಾಪುರದ ಗಲ್ಲಿ ಗಲ್ಲಿಗಳಲ್ಲಿ ಸಣ್ಣ ಹಣ್ಣಿನ ಅಂಗಡಿಯಿಂದ ದೊಡ್ಡ ದೊಡ್ಡ ಹಣ್ಣಿನ ಅಂಗಡಿಗಳಲ್ಲೂ ನೇರಳೆ ಹಣ್ಣು ಹೇರಳವಾಗಿ ಸಿಗುತ್ತಿದೆ. ನಗರದ ರಸ್ತೆಗಳಲ್ಲಿ ತಳ್ಳುಗಾಡಿಗಳಲ್ಲಿ ಮಾವಿನ ಹಣ್ಣುಗಳ ಜೊತೆಯಲ್ಲಿ ನೇರಳೆ ಹಣ್ಣುಗಳನ್ನು ಗುಡ್ಡೆ ಹಾಕಿ ಮಾರಾಟ ಮಾಡುವವರು ಸಂಖ್ಯೆ ಹೆಚ್ಚಾಗಿದೆ.ಕೆ.ಜಿ. ನೇರಳೆ ಹಣ್ಣಿಗೆ ಈ ಬಾರಿ 150 ರಿಂದ 200 ರು.ಗೆ ಮಾರಾಟವಾಗುತ್ತದೆ. ಆದರೆ ಕಳೆದ ಬಾರಿ ಫಸಲು ಕಡಿಮೆ ಬಂದಿದ್ದರಿಂದ 200 ರುಪಾಯಿಂದ 300 ರುಪಾಯಿ ಕೊಟ್ಟು ಸಾರ್ವಜನಿಕರು ಖರೀದಿ ಮಾಡಿದ್ದರು.
ಈ ಬಾರಿ ಮಾರುಕಟ್ಟೆಗೆ ಬೇಗನೇ ನೇರಳೆ ಹಣ್ಣು ಬಂದಿದ್ದು, ನಾಲ್ಕೈದು ದಿನಗಳಿಂದೀಚೆಗೆ ಆಕರ್ಷಕ ಹಾಗೂ ರುಚಿಕರ ಹಣ್ಣಿನ ಮಾರಾಟ ಜೋರಾಗಿದೆ. ಬೆಲೆ ಕೊಂಚ ದುಬಾರಿಯಾದರೂ ಗ್ರಾಹಕರು ಹಣ್ಣನ್ನು ಖರೀದಿಸುತ್ತಿದ್ದಾರೆ. ಆರಂಭದಲ್ಲಿ ಕೆಜಿಗೆ 200ರವರೆಗೂ ಇದ್ದ ಬೆಲೆ ಈಗ 150ಕ್ಕೆ ಕುಸಿದಿದೆ. ಈಗ ಕೆಜಿಗೆ 150ರಿಂದ 160 ರ ನಡುವೆ ಮಾರಾಟವಾಗುತ್ತಿದೆ ಎಂದು ನೇರಳೆ ಹಣ್ಣಿನ ತಳ್ಳುಗಾಡಿ ವ್ಯಾಪಾರಿ ಸೈಯ್ಯದ್ ಅಸ್ಲಾಂ ತಿಳಿಸಿದರು.ಎರಡೇ ದಿನ ಬಾಳಿಕೆ:
ಕೊಯ್ದಿಟ್ಟ ನೇರಳೆ ಹಣ್ಣು ಹೆಚ್ಚು ಎಂದರೆ ಎರಡು ದಿನ ಬಾಳಿಕೆ ಬರುತ್ತದೆ. ಆಮೇಲೆ ಹಾಳಾಗಲು ಆರಂಭವಾಗುತ್ತದೆ. ಹಾಗಾಗಿ ವ್ಯಾಪಾರಸ್ಥರು ಆದಷ್ಟೂ ಒಂದೇ ದಿನದಲ್ಲಿ ಮಾರಾಟ ಮಾಡಲು ಯತ್ನಿಸುತ್ತಾರೆ. ಸಂಜೆ ಹೊತ್ತಿಗೆ ಮುಗಿಯದಿದ್ದರೆ, ಕಡಿಮೆ ದರಕ್ಕೆ ಕೊಡುವವರೂ ಇದ್ದಾರೆ.ಆಯುರ್ವೇದದಲ್ಲಿ ನೇರಳೆ ಹಣ್ಣು:
ಆಯುರ್ವೇದ ವೈದ್ಯರು ನೇರಳೆ ಹಣ್ಣಿ (ಜಾಮೂನ್)ನ ಆಯುರ್ವೇದ ಗುಣಲಕ್ಷಣಗಳನ್ನು ಮತ್ತು ಅದನ್ನು ತಿನ್ನುವ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ಐಬಿಎಸ್, ಅತಿಸಾರ, ಅತಿಯಾದ ರಕ್ತಸ್ರಾವ, ಲ್ಯುಕೋರಿಯಾ, ವಾಕರಿಕೆ ಮತ್ತು ವಾಂತಿ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ನೇರಳೆ ಹಣ್ಣು ಅಮೃತವಾಗಿದೆ. ಇದರ ಗುಣಲಕ್ಷಣಗಳು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ಮಧುಮೇಹಿಗಳಿಗೂ ಈ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ. ನೇರಳೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದ ನಂತರ ಅನೇಕ ಜನರು ಅದನ್ನು ಅತಿಯಾಗಿ ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ ಹಾಗೆ ಮಾಡುವುದು ಅಪಾಯಕಾರಿಯಾಗಬಹುದು ಎಂದು ಧನ್ವಂತರಿ ವೈದ್ಯ ಕೃಷ್ಣ ಮೂರ್ತಿ ತಿಳಿಸಿದ್ದಾರೆ.ನೇರಳೆ ಮರದ ಎಲೆ, ಕಾಯಿ, ತೊಗಟೆ, ಹಣ್ಣು, ಬೀಜ ಎಲ್ಲವೂ ಔಷಧಿಯ ಗುಣಗಳನ್ನು ಒಳಗೊಂಡಿದೆ. ನೇರಳೆ ಹಣ್ಣನ್ನು ಮಾತ್ರವಲ್ಲದೆ ಅದರ ಬೀಜಗಳು, ತೊಗಟೆ ಮತ್ತು ಎಲೆಗಳನ್ನು ವಿವಿಧ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇಡೀ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಫ್ಲೇವನಾಯ್ಡ್‌ಗಳ ಜೊತೆಗೆ ಜಾಮೂನ್ ರೋಗ ನಿರೋಧಕಗಳ ಶ್ರೀಮಂತ ಮೂಲವಾಗಿದೆ.
ಇದರಿಂದ ನೇರಳೆ ಮರಗಳನ್ನು ಬೆಳೆದ ರೈತರಿಗೆ ಸಂತಸ ಹೆಚ್ಚಾಗಿದೆ. ಮೇನಿಂದ ಜುಲೈ ತಿಂಗಳಲ್ಲಿ ಹಣ್ಣಿಗೆ ಭಾರೀ ಬೇಡಿಕೆ ಬಂದು ಹಣ್ಣುಗಳ ವರ್ತಕರು ರೈತರ ತೋಟಗಳಿಗೆ ಬಂದು ಖರೀದಿಸುತ್ತಿದ್ದಾರೆ. ಇನ್ನು ಹೂ ಮೊಗ್ಗು ಇರುವಾಗಲೇ ನೇರಳೆ ಮರಗಳ ಗುತ್ತಿಗೆ ಪಡೆಯುತ್ತಾರೆ. ನೇರಳೆ ಮರಕ್ಕೆ ಬಂಗಾರದ ಬೆಲೆ ಬಂದ ಕಾರಣ, ಕಾಡು ಮೇಡುಗಳಲ್ಲಿ ಇರುತ್ತಿದ್ದ ನೇರಳೆ ಮರಗಳು ರೈತರ ಜಮೀನುಗಳಲ್ಲಿ ತೋಟಗಳಾಗಿ ಮಾರ್ಪಡುತ್ತಿವೆ. ಇನ್ನು ಚಿಕ್ಕಬಳ್ಳಾಪುರ ತೋಟಗಾರಿಕಾ ಇಲಾಖೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, ಸಸಿಯಿಂದ ನಾಟಿ ಮಾಡೋವರೆಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತೋಟಗಾರಿಕಾಧಿಕಾರಿಗಳು ತಿಳಿಸಿದ್ದಾರೆ.ಸಿಕೆಬಿ-1ಮರದಲ್ಲಿ ಜೋತು ಬಿದ್ದಿರುವ ನೇರಳೆಹಣ್ಣು
ಸಿಕೆಬಿ-2 ತಳ್ಳುಗಾಡಿಯಲ್ಲಿ ಮಾರಾಟ ವಾಗುತ್ತಿರುವ ನೇರಳೆ ಹಣ್ಣುಸಿಕೆಬಿ-3 ನೇರಳೆ ಹಣ್ಣು