ನಗರದ ನೀರಿನ ಸಮಸ್ಯೆ ಕುರಿತು ಕಾವೇರಿದ ಚರ್ಚೆ

| Published : Mar 05 2024, 01:35 AM IST

ಸಾರಾಂಶ

ಜಲಮಂಡಳಿ ಎಇಇ, ಜೆಇ ನಮ್ಮ ಫೋನ್ ಕರೆಯನ್ನೇ ಸ್ವೀಕರಿಸುವುದಿಲ್ಲ. ಜನ ನೀರಿಲ್ಲದೇ ಭವಣೆ ಅನುಭವಿಸುತ್ತಿದ್ದಾರೆ. ವಾರ್ಡ್ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿರುವ ಬೋರ್‌ವೆಲ್‌ಗಳನ್ನು ದುರಸ್ತಿಗಳಿಸಲು ಕ್ರಮ ವಹಿಸುತ್ತಿಲ್ಲ. ನೀರಿನ ಸಮಸ್ಯೆ ಪರಿಹರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ತಿಳಿಸಿ ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ನಗರ ಪ್ರದೇಶದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ, ಇ-ಖಾತೆ ಅವ್ಯವಹಾರ, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಸೇರಿ ಹಲವು ವಿಚಾರಗಳ ಕುರಿತು ನಗರಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಆಯವಯ್ಯ ಮಂಡನೆ ಹಾಗೂ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷದ ನಗರಸಭೆ ಸದಸ್ಯರು ಪಕ್ಷಭೇದ ಮರೆತು ಜಲಮಂಡಳಿ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಜನ ದಿನಬಳಕೆಗೆ ನೀರಿಲ್ಲದೇ ಪರಿತಪಿಸುತ್ತಿದ್ದಾರೆ. ಐದಾರು ದಿನಗಳಿಗೆ ಒಮ್ಮೆ ನೀರು ಬಿಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಐದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ಆದರೆ, ಈಗ ಆರು ದಿನಗಳಾದರೂ ನೀರು ಬಿಡಲಾಗುತ್ತಿಲ್ಲ. ಜನರಿಗೆ ಉತ್ತರ ನೀಡುವುದೇ ನಮಗೆ ಸಮಸ್ಯೆಯಾಗಿದೆ ಎಂದು ನಗರಸಭೆ ಸದಸ್ಯರಾದ ಶಾಬೀರ್, ಲಿಯಾಕತ್ ಜಲಮಂಡಳಿ ಎಇಇಯನ್ನು ತರಾಟೆಗೆ ತೆಗೆದುಕೊಂಡರು.

ಜಲಮಂಡಳಿ ಎಇಇ, ಜೆಇ ನಮ್ಮ ಫೋನ್ ಕರೆಯನ್ನೇ ಸ್ವೀಕರಿಸುವುದಿಲ್ಲ. ಜನ ನೀರಿಲ್ಲದೇ ಭವಣೆ ಅನುಭವಿಸುತ್ತಿದ್ದಾರೆ. ವಾರ್ಡ್ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿರುವ ಬೋರ್‌ವೆಲ್‌ಗಳನ್ನು ದುರಸ್ತಿಗಳಿಸಲು ಕ್ರಮ ವಹಿಸುತ್ತಿಲ್ಲ. ನೀರಿನ ಸಮಸ್ಯೆ ಪರಿಹರಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ತಿಳಿಸಿ ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಾಸೀಲ್ ಅಲಿಖಾನ್, ಬೆಂಗಳೂರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ರಾಮನಗರ-ಚನ್ನಪಟ್ಟಣದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಬರೀ ತಾತ್ಕಾಲಿಕ ಪರಿಹಾರ ಕಂಡುಕೊಂಡರೆ ಸಾಲದು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಯೋಜನೆ ರೂಪಿಸಿ ಎಂದು ಆಗ್ರಹಿಸಿದರು.

ನಗರಸಭೆ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ನೀರಿನ ಸಮಸ್ಯ ಪರಿಹರಿಸಲು ಆದ್ಯತೆ ನೀಡಿ. ಬೋರೆವೆಲ್ ದುರಸ್ತಿಪಡಿಸಿ, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಿ. ನಗರಸಭೆಯಿಂದ ಪ್ರತ್ಯೇಕ ಹಣ ಬೇಕಾದರೆ ಪ್ರಸ್ತಾಪನೆ ಸಲ್ಲಿಸಿ, ನಗರಸಭೆಯಲ್ಲಿ ಅನುಮೋದನೆ ಪಡೆದು ಹಣ ಮೀಸಲಿರಿಸಲಾಗುವುದು ಎಂದು ತಿಳಿಸಿದರು.

ಇದಕ್ಕೆ ಜಲಮಂಡಳಿ ಎಇಇ ಉತ್ತರಿಸಿ, ಶಿಂಷಾ ನದಿಯಲ್ಲಿ ನೀರಿಲ್ಲದ ಕಾರಣ ಸಮಸ್ಯೆಯಾಗಿದೆ. ರಾಮನಗರ-ಚನ್ನಪಟ್ಟಣಕ್ಕೆ ಶಿಂಷಾ ಹಾಗೂ ಬ್ಯಾಕ್ ವಾಟರ್‌ನಿಂದ ನೀರು ಸರಬರಾಜು ಆಗುತ್ತದೆ. ೨೦೦೨ರಲ್ಲಿ ರಾಮನಗರ-ಚನ್ನಪಟ್ಟಣಕ್ಕೆ ಸೇರಿಸಿ ೨೭ ಎಂಎಲ್‌ಡಿ ನೀರು ನಿಗದಿಪಡಿಸಲಾಗಿದೆ. ಆದರೆ, ಬೆಂಗಳೂರಿಗೆ ನೀರು ಪೂರೈಕೆ ಮಾಡುವ ಪಾಯಿಂಟ್ ಬೇರೆ ಇದೆ. ಈಗಾಗಲೇ ರಾಮನಗರಕ್ಕೆ ನೀರು ಸರಬರಾಜು ಮಾಡಲು ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಇದು ಅನುಷ್ಠಾನಗೊಂಡರೆ ಸಮಸ್ಯೆ ಬಗೆಹರಿಯಲಿದೆ ಎಂದರು.

ಖಾತೆ ಅವ್ಯವಹಾರಕ್ಕೆ ಕಿಡಿ೨೯ನೇ ವಾರ್ಡ್ ವ್ಯಾಪ್ತಿಯಲ್ಲಿ ಲಾಳಾಘಟ್ಟ ಸರ್ವೇ ನಂಬರ್‌ಗೆ ಸೇರಿದ ೩೨ ಸಾವಿರ ಚದರ ಅಡಿಯ ಏಕನಿವೇಶನಕ್ಕೆ ಅಕ್ರಮವಾಗಿ ಇ-ಖಾತೆ ಮಾಡಿಕೊಡಲಾಗಿದೆ. ಯಾವ ಮಾನದಂಡದ ಮೇಲೆ ಇದಕ್ಕೆ ಇ-ಖಾತೆ ಮಾಡಲಾಗಿದೆ ಎಂದು ಸದಸ್ಯ ಮಂಜುನಾಥ್ ಪ್ರಶ್ನಿಸಿದರು. ಇದಕ್ಕೆ ನಗರಸಭೆ ಸದಸ್ಯರಾದ ಕಂಠಿ, ಸತೀಶ್ ಬಾಬು ಹಾಗೂ ಶ್ರೀನಿವಾಸ್ ಮೂರ್ತಿ ಧ್ವನಿಗೂಡಿಸಿದರು.

ಎಲ್ಲ ದಾಖಲೆಗಳು ಸರಿ ಇದ್ದು, ಜನ ಇ-ಖಾತೆಗಾಗಿ ಅಲೆದಾಡುವಂತಾಗಿದೆ. ಆದರೆ, ಕಾಸು ಕೊಟ್ಟರೆ ಖಾತೆ ಮಾಡಿಕೊಡಲಾಗುತ್ತಿದೆ ಎಂದು ಕಿಡಿಕಾರಿದರು.

ಮನೆಕಟ್ಟಿಕೊಂಡ ಬಡವರು ಖಾತೆಗೆ ಅರ್ಜಿ ಹಾಕಿದರೆ ಅದು ಆಗುವುದಿಲ್ಲ. ಆದರೆ, ಲೇಔಟ್‌ಗಳ ನೂರಾರು ನಿವೇಶಗಳಿಗೆ ಇ-ಖಾತೆ ಮಾಡಿಕೊಡಲಾಗುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಹತ್ತಾರು ನಿವೇಶಗಳು ಇರುವ ಲೇಔಟ್‌ಗಳಿಗೆ ಒಮ್ಮೆಗೆ ಇ-ಖಾತೆ ಮಾಡಿಕೊಡಬೇಡಿ ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಅಧ್ಯಕ್ಷ ಪ್ರಶಾಂತ್, ನಗರಸಭೆಯಲ್ಲಿ ನಡೆದಿರುವ ಖಾತೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಕುರಿತು ಅಧಿಕಾರಿಗಳ ಸಮಿತಿ ನಗರಸಭೆಯಲ್ಲಿ ಪರಿಶೀಲನೆ ನಡೆಸಿದೆ. ಅವರು ಯಾವ ಕ್ರಮ ಕೈಗೊಳ್ಳುತ್ತಾರೋ ನೋಡೋಣ ಎಂದರು.

ಅಧಿಕಾರಿಗಳ ಸಮಿತಿ ಬಂದು ಹೋದ ನಂತರವೂ ಇ-ಖಾತೆಯಲ್ಲಿ ಅವ್ಯವಹಾರ ನಡೆದಿದೆ. ೨೯ವಾರ್ಡ್ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರಿಸಿ ಆ ನಂತರ ಬಜೆಟ್ ಮಂಡಿಸಿ ಎಂದು ಮಂಜನಾಥ್ ಪಟ್ಟುಹಿಡಿದರು. ಮಂಜುನಾಥ್ ಪಟ್ಟು ಸಡಲಿಸದ ಹಿನ್ನೆಲೆಯಲ್ಲಿ ಕಡತ ತರಲು ಅಧಿಕಾರಿಗಳನ್ನು ಕಳುಹಿಸಿ ಭೋಜನ ವಿರಾಮದ ನಂತರ ಸಭೆ ಮುಂದುವರಿಸಲು ನಿರ್ಧರಿಸಲಾಯಿತು. ಭೋಜನ ವಿರಾಮದ ನಂತರ ಆರಂಭಗೊಂಡ ಸಭೆಯಲ್ಲಿ ಅಧಿಕಾರಿಗಳು ಕಡತಗಳನ್ನು ಅಧಿಕಾರಿಗಳ ಸಮಿತಿ ತೆಗೆದುಕೊಂಡು ಹೋಗಿದೆ ಎಂದು ಉತ್ತರಿಸಿದರು. ಇದಕ್ಕೆ ಆಕ್ರೋಶಗೊಂಡ ಮಂಜುನಾಥ್ ಇದನ್ನೇ ರೆಸೆಲ್ಯೂಷನ್ ಮಾಡಿ ಎಂದರು.