ದುರುದ್ದೇಶದಿಂದ ಜಾತಿ ನಿಂದನೆ ಕೇಸ್‌

| Published : Jan 16 2025, 12:46 AM IST

ಸಾರಾಂಶ

ಡಿಡಿಪಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಬಿ. ಎಚ್. ಮಂಜುನಾಥ್ ಮೇಲೆ ದುರುದ್ದೇಶಪೂರಿತ ವೈಯಕ್ತಿಕ ಧ್ವೇಷದ ಹಿನ್ನೆಲೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದನ್ನು ಜಿಲ್ಲಾಧಿಕಾರಿಗಳು ಪರಾಮರ್ಶಿಸಿ ಸೂಕ್ತ ನ್ಯಾಯವನ್ನು ದೊರಕಿಸಿಕೊಡಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಆದ್ದರಿಂದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಡಿಡಿಪಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಬಿ. ಎಚ್. ಮಂಜುನಾಥ್ ಮೇಲೆ ದುರುದ್ದೇಶಪೂರಿತ ವೈಯಕ್ತಿಕ ಧ್ವೇಷದ ಹಿನ್ನೆಲೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದನ್ನು ಜಿಲ್ಲಾಧಿಕಾರಿಗಳು ಪರಾಮರ್ಶಿಸಿ ಸೂಕ್ತ ನ್ಯಾಯವನ್ನು ದೊರಕಿಸಿಕೊಡಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್‍ಯದರ್ಶಿ ಡಾ.ಲಕ್ಷ್ಮೀಕಾಂತ್ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ ಸಿಬ್ಬಂದಿಯ ಮೇಲೆ ವಿನಾಕಾರಣ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ನೌಕರರ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸಗಳು ನಡೆಯುತ್ತಲೇ ಇವೆ. ಆದ್ದರಿಂದ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಬಿ.ಎಚ್.ಮಂಜುನಾಥ್ ಅವರ ಮೇಲೆ ಅರಕಲಗೂಡಿನ ಎನ್.ಎಂ.ಆರ್. ವಿದ್ಯಾಸಂಸ್ಥೆಯ ಕಾರ್ಯಯದರ್ಶಿ ರಂಗಸ್ವಾಮಿ ಅವರು ಪೂರ್ವ ನಿಯೋಜಿತವಾಗಿ ಸುಖಾಸುಮ್ಮನೆ ಆರೋಪ ಮಾಡಿಕೊಂಡು ಅಧಿಕಾರಿಗಳ ಮೇಲೆ ಸುಳ್ಳು ದೂರುಗಳನ್ನು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

೨೦೧೯ರಿಂದ ೬ರಿಂದ ೮ನೇ ತರಗತಿವರೆಗೆ ಶಾಲೆಯ ಆದೇಶವನ್ನು ರದ್ದುಗೊಳಿಸಿರುವುದು ಇಲಾಖೆಯ ಮುಖ್ಯಸ್ಥರು ಮತ್ತು ಆರ್‌ಟಿಇ ಅನುದಾನವನ್ನು ಬಿಡುಗಡೆ ಮಾಡುವುದು ಕೂಡ ಮೇಲಧಿಕಾರಿಗಳೇ ಆಗಿರುತ್ತಾರೆ. ಆದರೆ ಜ.೯ರಂದು ಕಚೇರಿಗೆ ಆಗಮಿಸಿ ಮಂಜುನಾಥ್ ಅವರನ್ನು ಹೀನಾಮಾನವಾಗಿ ನಿಂದಿಸಿದ್ದಾರಲ್ಲದೆ, ಜಾತಿನಿಂದನೆ ಪ್ರಕರಣವನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ನೌಕರರ ವಲಯದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಅವರ ಆತ್ಮಸ್ಥೈರ್‍ಯವನ್ನು ಕುಗ್ಗಿಸದಂತೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರು ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ೨೦೧೯ರಲ್ಲಿ ಡಿಡಿಪಿಐ ಅವರು ೬ರಿಂದ ೮ನೇ ತರಗತಿಯವರೆಗೆ ಶಾಲೆ ನಡೆಸಲು ಕಟ್ಟಡ ಸೇರಿದಂತೆ ಯಾವುದೇ ಮೂಲಭೂತ ಸೌಕರ್‍ಯ ಒದಗಿಸದ ಹಿನ್ನೆಲೆಯಲ್ಲಿ ಆಯುಕ್ತರ ಆದೇಶದ ಮೇರೆಗೆ ಶಾಲೆಯ ಮಾನ್ಯತೆಯನ್ನು ರದ್ದು ಮಾಡಿದ್ದಾರೆ. ಆದರೆ ಇದಕ್ಕೂ ಮಂಜುನಾಥ್ ಅವರಿಗೂ ಸಂಬಂಧ ಇಲ್ಲದಿದ್ದರೂ ಕೂಡ ೫೦ ಸಾವಿರ ರು. ಚೆಕ್ ಮೂಲಕ ಲಂಚ ಪಡೆದಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ.ಇದಲ್ಲದೆ ಆರ್‌ಟಿಇ ಅನುದಾನವನ್ನು ನೀಡಲು ಅವಕಾಶವಿಲ್ಲ ಎಂದು ಅರಕಲಕಗೂಡು ಬಿಇಒ ಅವರು ಶಿಫಾರಸು ಮಾಡಿದ್ದಾರೆ. ಇದರ ಆದೇಶದಿಂದ ಡಿಡಿಪಿಐ ಅವರು ಹಣ ಬಿಡುಗಡೆ ಮಾಡಿಲ್ಲ. ಈ ಎಲ್ಲಾ ಘಟನಾವಳಿಗಳಿಂದ ಮಂಜುನಾಥ್ ಅವರ ಯಾವುದೇ ಪಾತ್ರವಿಲ್ಲದಿದ್ದರೂ ಕೂಡ ದುರುದ್ದೇಶಪೂರ್ವಕವಾಗಿ ಕಚೇರಿಯಲ್ಲಿ ಗಲಾಟೆ ನಡೆಸಿ ಮಾಧ್ಯಮಕ್ಕೂ ಕೂಡ ಸುಳ್ಳು ಹೇಳಿಕೆಗಳನ್ನು ನೀಡಿ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಪ್ರೇರೇಪಿಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಮಂಜುನಾಥ್ ಅವರ ಆತ್ಮಸ್ಥೈರ್ಯ ಕುಗ್ಗಿಸಲು ಹುನ್ನಾರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕೆಳವರ್ಗದ ಸಿಬ್ಬಂದಿ ವರ್ಗದವರು ನಿರ್ಭೀತಿಯಿಂದ ಹಾಗೂ ಒತ್ತಡ ರಹಿತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಭಯದ ವಾತಾವರಣ ರೂಪುಗೊಳ್ಳುತ್ತಿದೆ. ಜಿಲ್ಲಾಡಳಿತದ ಅಧಿಕಾರಿಗಳು ತಾವು ಮಧ್ಯಪ್ರವೇಶಿಸಿ ನೌಕರರ ವಿರುದ್ಧ ದೂರು ದಾಖಲಾದಾಗ ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಾರ್ಥೇಶ್, ಗೌರವಾಧ್ಯಕ್ಷ ಈ.ಕೃಷ್ಣೇಗೌಡ, ಖಜಾಂಚಿ ಹೇಮಂತ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಅಣ್ಣಪ್ಪ, ತಾಲೂಕು ಅಧ್ಯಕ್ಷ ಅಣ್ಣೇಗೌಡ, ಜಿಲ್ಲಾ ಸಂಘದ ನಿರ್ದೇಶಕರಾದ ಆಶಾ, ರವೀಂದ್ರ, ಲೋಹಿತ್, ಇತರರು ಉಪಸ್ಥಿತರಿದ್ದರು.