ಬೆಳಗಾವಿಯಲ್ಲಿ ವಿನಾಯಕನಿಗೆ ಸಂಭ್ರಮದ ಸ್ವಾಗತ

| Published : Sep 09 2024, 01:37 AM IST

ಸಾರಾಂಶ

ಗಣೇಶ ಚತುರ್ಥಿ ಹಿನ್ನೆಲೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನತೆ ಸಡಗರ ಸಂಭ್ರಮದಿಂದ ಮಂಗಲಮೂರ್ತಿ ಗಣನಾಯಕನನ್ನು ಶನಿವಾರ ಬರಮಾಡಿಕೊಂಡು ಮನೆ, ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ಮಂಟಪಗಳಲ್ಲಿ ಪ್ರತಿಷ್ಠಾಪಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಣೇಶ ಚತುರ್ಥಿ ಹಿನ್ನೆಲೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನತೆ ಸಡಗರ ಸಂಭ್ರಮದಿಂದ ಮಂಗಲಮೂರ್ತಿ ಗಣನಾಯಕನ್ನು ಶನಿವಾರ ಬರಮಾಡಿಕೊಂಡು ಮನೆ, ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ಮಂಟಪಗಳಲ್ಲಿ ಪ್ರತಿಷ್ಠಾಪಿಸಿದರು.

ಬೆಳಗ್ಗೆಯಿಂದ ಶುರುವಾದ ಗಣೇಶೋತ್ಸವ ಸಂಭ್ರಮ ಸಂಜೆಯವರೆಗೂ ಮನೆ ಮಾಡಿತ್ತು. ಅದ್ಧೂರಿ ಮೆರವಣಿಗೆ ಮಧ್ಯೆ ಗಣನಾಯಕನನ್ನು ಸ್ವಾಗತಿಸಿದ ಜನತೆ ಗಣಪತಿ ಬಪ್ಪಾ ಮೊರಯಾ.. ಮಂಗಲ ಮೂರ್ತಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಡಿಜೆ, ಸೌಂಡ್‌ ಸಿಸ್ಚ್ಂ ಅಬ್ಬರದ ಮಧ್ಯೆ ಯುವ ಸಮುದಾಯ ಕುಣಿದು ಕುಪ್ಪಳಿಸುತ್ತ ಸಂಭ್ರಮದಿಂದ ಗಣಪನ ಮೆರವಣಿಗೆ ಮೂಲಕ ಕೊಂಡೊಯ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬೆಳ್ಳಂಬೆಳಗ್ಗೆ ಕುಟುಂಬ ಸಮೇತರಾಗಿ ಬಂದ ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ಪೂಜಿಸಿ ಮನೆಗೆ ಒಯ್ದರು. ಅದರಲ್ಲೂ ಗಣೇಶೋತ್ಸವ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು ಅಕ್ಷರಶಃ ಜಾತ್ರೆಯಂತೆ ಗೋಚರಿಸಿದವು. ಎಲ್ಲಿ ನೋಡಿದ್ದಲ್ಲಿ ಗಣೇಶನ ನಾಮಜಪ ಕಂಡುಬಂತು.

ರವಿವಾರ ಪೇಟೆಯಲ್ಲಿ ಬಾಳೆ ಸಸಿ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಮಾರಾಟ ಜೋರಾಗಿತ್ತು. ಹೂವು ಹಣ್ಣು, ಅಲಂಕಾರಿಕ ವಸ್ತುಗಳು, ಗಣೇಶನ ಮೂರ್ತಿಗಳು, ತರಕಾರಿ, ಸಿಹಿತಿನಿಸುಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಾಕತಿವೇಸ್‌, ಗಣಪತಿ ಗಲ್ಲಿ, ಖಡೇಬಜಾರ್‌ ಸೇರಿ ಹಲವೆಡೆಯಿಂದ ಜನರು ಮನೆಗೆ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋದರು. ಡಿಜೆ ಸೌಂಡ್‌ ಸಿಸ್ಟ್ಂ ಹಾಡಿಗೆ ಹೆಜ್ಜೆ ಹಾಕುತ್ತ ಕುಣಿದುಕುಪ್ಪಳಿಸಿದರು. ನೂರಾರು ಯುವಕ, ಯುವತಿಯರು ಸೌಂಡ್‌ಗೆ ಹೆಜ್ಜೆ ಹಾಕಿದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಬೆಳಗಾವಿ ನಗರದಲ್ಲಿ ಗಣೇಶೋತ್ಸವವನ್ನು ಅತೀ ಅದ್ಧೂರಿಯಿಂದ ಆಚರಿಸಲಾಗುತ್ತದೆ. ನಗರದಲ್ಲಿ 270ಕ್ಕೂ ಅಧಿಕ ಸಾರ್ವಜನಿಕ ಮಂಟಪಗಳಲ್ಲಿ ಬೃಹತ್‌ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಣೇಶ ನಾನಾ ರೂಪದಲ್ಲಿ ವಿರಾಜಮಾನನಾಗಿದ್ದಾನೆ. ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನಕ್ಕೆ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಸಾರ್ವಜನಿಕ ಗಣೇಶ ಮಂಟಪಗಳು, ಗಣಪತಿಗಳ ಪ್ರತಿಷ್ಠಾಪನೆಯೂ ಆಕರ್ಷಣೀಯವಾಗಿವೆ.