ಜಗದೀಶ ಶೆಟ್ಟರ್‌ಗೆ ಮತ್ತೆ ಟಿಕೆಟ್‌ ತಪ್ಪಿಸುವ ಹುನ್ನಾರ

| Published : Mar 19 2024, 12:51 AM IST

ಸಾರಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಖಂಡ ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಇದರ ಹಿಂದೆ ಬಿ.ಎಲ್‌. ಸಂತೋಷ್ ಅವರ ಕುತಂತ್ರ ಇದೆ.

ಹುಬ್ಬಳ್ಳಿ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಖಂಡ ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಇದರ ಹಿಂದೆ ಬಿ.ಎಲ್‌. ಸಂತೋಷ್ ಅವರ ಕುತಂತ್ರ ಇದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರೊ. ವಿ.ಸಿ. ಸವಡಿ ಆರೋಪಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲೂ ಸಂತೋಷ್‌ ಅವರು ಶೆಟ್ಟರ್‌ಗೆ ಟಿಕೆಟ್ ತ‍ಪ್ಪಿಸಿದ್ದರು. ಈಗಲೂ ಅದೇ ರೀತಿ ಮಾಡುತ್ತಿದ್ದಾರೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಅದರ ಪರಿಣಾಮವನ್ನು ಈ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ. ಧಾರವಾಡ ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲೂ ಇದರ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು.

ಧಾರವಾಡ, ಹಾವೇರಿ ಕ್ಷೇತ್ರದಿಂದ ಶೆಟ್ಟರ್‌ ಅವರು ಟಿಕೆಟ್ ಕೇಳಿದ್ದರು. ಅಲ್ಲಿ ನೀಡಲಿಲ್ಲ, ಈಗ ಬೆಳಗಾವಿಯಲ್ಲೂ ತಪ್ಪಿಸುವ ಷಡ್ಯಂತ್ರ ನಡೆಯುತ್ತಿದೆ. ಈ ಹಿಂದೆ ಅವರನ್ನು ಕಡೆಗಣಿಸಿದ್ದರಿಂದ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರ ಬೆಂಬಲದಿಂದಾಗಿ ಪ್ರಹ್ಲಾದ ಜೋಶಿ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈಗ ಅವರೇ ಮುಂದೆ ನಿಂತು ಶೆಟ್ಟರ್‌ಗೆ ಟಿಕೆಟ್ ಕೊಡಿಸಬೇಕು ಎಂದು ಒತ್ತಾಯಿಸಿದರು.

ಲಿಂಗಾಯತರು ಬೆನ್ನೆಲುಬಾಗಿ ನಿಂತಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಈಗ ಸಮಾಜದವರನ್ನು ಕಡೆಗಣಿಸಬಾರದು. ಶೆಟ್ಟರ್‌ಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಟಿಕೆಟ್ ನೀಡದಿದ್ದರೆ ಸಮಾಜದವರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.