ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತುಂಗಭದ್ರಾ ಬಡಾವಣೆಯಲ್ಲಿ 3 ವರ್ಷದ ಮಗು ನೀರಿನ ತೊಟ್ಟಿಗೆ ಬಿದ್ದಿದ್ದರಿಂದ ಸಂಬಂಧಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ಕರ್ತವ್ಯದಲ್ಲಿದ್ದ ಡಾ.ಮನೋಜ್ ಮತ್ತು ಡಾ.ಯೋಗಿತಾ ಹಾಗೂ ಸಿಬ್ಬಂದಿಗೆ ಹಲ್ಲೆಗೆ ಯತ್ನ, ಆಸ್ಪತ್ರೆ ವಾಹನ, ಕಟ್ಟಡಕ್ಕೆ ಕಲ್ಲು ತೂರಿದ ಘಟನೆ ಖಂಡಿಸಿ ವೈದ್ಯರ ತಂಡ ಧರಣಿ ನಡೆಸಿ ಪೊಲೀಸರಿಗೆ ದೂರು ಸಲ್ಲಿಸಿದೆ.ಕರ್ತವ್ಯ ನಿರತ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಸೋಮವಾರ ಆಸ್ಪತ್ರೆ ಎದುರು ವೈದ್ಯರ ತಂಡ, ಆರೋಗ್ಯ ಸಿಬ್ಬಂದಿ ಧರಣಿ ನಡೆಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಜೊತೆಗೆ ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಔಟ್ ಪೋಸ್ಟ್ ವ್ಯವಸ್ಥೆ ಮಾಡಲು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿದರು.
ಆಸ್ಪತ್ರೆ ಎದುರು ವೈದ್ಯರು, ಸಿಬ್ಬಂದಿಯಿಂದ ಧರಣಿ:ಕರ್ತವ್ಯ ನಿರತ ವೈದ್ಯರ ಮೇಲೆ ಜನರ ಗುಂಪಿನಿಂದ ಹಲ್ಲೆ ಯತ್ನ ಹಾಗೂ ವಾಹನ, ಕಟ್ಟಡಕ್ಕೆ ಕಲ್ಲು ತೂರಾಟ ನಡೆಸಿದ್ದು ಖಂಡಿಸಿ ಸೋಮವಾರ ತುರ್ತು ಚಿಕಿತ್ಸೆ ಹೊರತುಪಡಿ ಸಿಒಪಿಡಿ ಬಂದ್ ಮಾಡಿ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಆಧ್ಯಕ್ಷ ಡಾ.ಮಹೇಶ್ ಮಾತನಾಡಿ ವೈದ್ಯರು ತಮ್ಮ ಬಳಿ ಬರುವ ಎಲ್ಲಾ ರೋಗಿಗಳ ಚಿಕಿತ್ಸೆ ಮೂಲಕ ಬದುಕುಳಿಸುವ ಏಕೈಕ ಗುರಿ, ಉದ್ದೇಶ ಹೊಂದಿರುತ್ತಾರೆ ಆದರೆ ಜನರ ತಪ್ಪು ತಿಳಿವಳಿಕೆ ಹಾಗೂ ಕೋಪಗಳ ಪರಿಣಾಮ ವೈದ್ಯರ ಮೇಲೆಯೇ ಹಲ್ಲೆ ನಡೆಸುವ ಕೃತ್ಯಗಳು ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಈ ಹಿಂದೆ ಹಲವು ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಈ ಬಗ್ಗೆ ಮನವಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ವೈದ್ಯರ ರಕ್ಷಣೆಗೆ ಸೂಕ್ತ ಕ್ರಮಗಳ ಕೈಗೊಳ್ಳಬೇಕು ಎಂದು ಹೇಳಿದರು.ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚಂದ್ರಪ್ಪ ಮಾತನಾಡಿ, ಆಸ್ಪತ್ರೆಯಲ್ಲಿ ಶನಿವಾರ ನಡೆದ ಘಟನೆ ಬಗ್ಗೆ ಸೋಮವಾರ ಸ್ಥಳೀಯ ಪೊಲೀಸ್ ಠಾಣೆಗೆ, ತಹಸೀಲ್ದಾರ್, ಉಪವಿಬಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುತ್ತಿದ್ದೇವೆ ಹಾಗೂ ಈ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಒತ್ತಾಯಪಡಿಸಿದ್ದು, ಇನ್ನು ಮುಂದೆ ವೈದ್ಯರ ರಕ್ಷಣೆ ದೃಷ್ಟಿಯಿಂದ ಆಸ್ಪತ್ರೆ ಆವರಣದಲ್ಲಿಯೇ ಒಂದು ಪೊಲೀಸ್ ಔಟ್ ಪೋಸ್ಟ್ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯರ ಸಂಘದ ಡಾ.ರಾಘವೇಂದ್ರ, ಸರ್ಕಾರಿ ನೌಕರರ ಸಂಘದ ಪಾಟೀಲ್, ಡಾ.ಯೋಗಿತಾ, ಡಾ. ಮನೋಜ್, ಡಾ. ಹನುಮಂತಪ್ಪ, ಡಾ.ಸುದೀಪ್, ಡಾ.ಗಿರೀಶ್, ಡಾ.ಮೀನಾ, ಡಾ.ಮಲ್ಲಿಕಾರ್ಜುನ, ಡಾ.ಸಂತೋಷ್, ಸಿಬ್ಬಂದಿ ಶಿವಪದ್ಮ ಸೇರಿ ತಾಲೂಕಿನ ಎಲ್ಲಾ ಪಿ.ಎಸ್.ಸಿ.ಗಳ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ---------