ಪಾದಯಾತ್ರೆಗೆ ಹೋರಾಟ ಮುಗಿದಿಲ್ಲ,

| Published : Aug 11 2024, 01:39 AM IST

ಸಾರಾಂಶ

ಆಡಳಿತ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡು ಮಾಜಿ ಸಿಎಂಗಳು

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಅಧಿಕಾರದಲ್ಲಿದ್ದುಕೊಂಡೇ ತನ್ನ ಮೇಲಿನ ಹಗರಣದ ಆರೋಪಕ್ಕೆ ಜನಾಂದೋಲನ ಸಮಾವೇಶದ ಮೂಲಕ ಉತ್ತರ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಮೈಸೂರು ಚಲೋ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ ಬಿಜೆಪಿ- ಜೆಡಿಎಸ್‌ಮೈತ್ರಿ ಪಕ್ಷಗಳ ನಾಯಕರು ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂಬ ಸಂದೇಶ ನೀಡುವ ಮೂಲಕ ತೀಷ್ಣವಾಗಿ ಪ್ರತಿಕ್ರಿಯಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಮೈಸೂರು ಚಲೋ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ಮೊದಲಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ನಮ್ಮ ಹೋರಾಟ ಈ ಪಾದಯಾತ್ರೆಗೆ ಮುಕ್ತಯವಾಗಲ್ಲ, ತಾವು ರಾಜೀನಾಮೆ ನೀಡದಿದ್ದರೆ ಇದು ಮತ್ತಷ್ಟು ತೀವ್ರಗೊಳ್ಳಲಿದ್ದು, ಕಾನೂನಾತ್ಮಕವಾಗಿಯೂ ಹೆಜ್ಜೆ ಇಡುವುದಾಗಿ ಎಚ್ಚರಿಸಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರ ವಿರುದ್ಧವೂ ತೀಷ್ಣ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡ ಎಚ್‌.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್‌ ವಿರುದ್ಧದ ಅನೇಕ ವೀಡಿಯೋ ತುಣುಕನ್ನು ಪ್ರದರ್ಶಿಸಿದರು. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಡಿ.ಕೆ. ಶಿವಕುಮಾರ್‌ ಅವರ ತಾಯಿ ನೀಡಿರುವ ಹೇಳಿಕೆಯ ವೀಡಿಯೋವನ್ನೂ ಪ್ರಸಾರ ಮಾಡಿ ತರಾಟೆಗೆ ತೆಗೆದುಕೊಂಡರು.

ನನ್ನ ಮತ್ತು ಬಿ.ಎಸ್‌. ಯಡಿಯೂರಪ್ಪ ಅವರ ನಡುವಿನ ಬಾಂದವ್ಯ ಹಾಳು ಮಾಡುವ ಕೆಲಸ ಮಾಡಬೇಡಿ. ನಿಮ್ಮದೇನಿದೆ ನೋಡಿ ಎಂದು ವೀಡಿಯೋ ತುಣುಕುಗಳನ್ನು ಪ್ರಸಾರ ಮಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಿಮಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಬನ್ನಿ. ಈಗ ಚುನಾವಣೆ ಎದುರಾದರೆ ಯಾರು ಗೆಲ್ಲುತ್ತಾರೆ ನೋಡೋಣ. ನಾನು ಏಕೆ ರಾಜಕೀಯ ನಿವೃತ್ತಿ ಹೊಂದಲಿ. ನನ್ನ ಕಡೆಯ ಉಸಿರು ಇರುವವರೆಗೂ ಹೋರಾಡುತ್ತೇನೆ. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ತನಕ ನಾನು ವಿರಮಿಸುವುದಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, 82ನೇ ವಯಸ್ಸಿನಲ್ಲಿರುವ ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಕೇಳುತ್ತೀರಲ್ಲ ಸಿದ್ದರಾಮಯ್ಯ ಅವರೇ, ಅಷ್ಟು ಭಯವೇ ನಿಮಗೆ ಎಂದು ಮೊದಲಿಸಿದರು.

ದಲಿತ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಎನ್‌. ಮಹೇಶ್‌ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸಿದ್ದರಾಮಯ್ಯ ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ಛಾಟಿ ಬೀಸಿದರು.

ಇದಕ್ಕೂ ಮುನ್ನ ರಾತ್ರಿಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಉಭಯ ಪಕ್ಷಗಳ ನಾಯಕರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಕೆ.ಆರ್‌. ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ನಾರಾಯಣಶಾಸ್ತ್ರಿ ರಸ್ತೆಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಬಳಿಕ ರಾಮಸ್ವಾಮಿ ವೃತ್ತದಿಂದ ಮಹಾರಾಜ ಕಾಲೇಜು ಮೈದಾನದವರೆಗೆ ಪಾದಯಾತ್ರೆ ನಡೆಸಿದರು.

ರಸ್ತೆ ಉದ್ದಕ್ಕೂ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂ ಮಳೆಗರೆದು ಸ್ವಾಗತಿಸಿದರು. ಬಿ.ವೈ. ವಿಜಯೇಂದ್ರ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಶಾಸಕ ಪಿ. ವಿಶ್ವನಾಥ್‌ಸೇರಿದಂತೆ ಅನೇಕರು ತಮಟೆಯ ಸದ್ದಿಗೆ ಹೆಜ್ಜೆ ಹಾಕಿದರು.

ವೇದಿಕೆ ಕಾರ್ಯಕ್ರಮವನ್ನು ಮಾಜಿ ಶಾಸಕ ಪಿ. ರಾಜೀವ್‌ಅಚ್ಚುಕಟ್ಟಾಗಿ ನಿರ್ವಹಿಸಿದರು. ವೇದಿಕೆ ಕಾರ್ಯಕ್ರಮ ಉದ್ಘಾಟನೆ ಬಳಿಕ ಉಭಯ ಪಕ್ಷದ ನಾಯಕರು ಶಕ್ತಿ ಪ್ರದರ್ಶಿಸಿದರು. ವೇದಿಕೆ ಮೇಲಿನ ನಾಯಕರು ಮತ್ತು ಸಭೀಕರು ಬಿಜೆಪಿ ಮತ್ತು ಜೆಡಿಎಸ್‌ಟವಲ್‌ ಬೀಸಿ ಬೆಂಬಲ ಸೂಚಿಸಿದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಮುಗಿಲು ಮುಟ್ಟಿದ ಕರತಾಡನ ಮತ್ತು ಶಿಳ್ಳೆಯು ಕಿವಿಯನ್ನು ಗುಯ್ಯಗುಡಿಸಿತು. ಆಗಲೂ ಜೆಡಿಎಸ್‌ ಮತ್ತು ಬಿಜೆಪಿ ಶಾಲುಗಳನ್ನು ಬೀಸಿ ಅಭಿಮಾನ ಮೆರೆದರು.

ದೂರದ ಊರುಗಳಿಂದ ಬಂದ್‌ ಬಸ್‌ಗಳನ್ನು ಪೊಲೀಸರು ತಡೆದರು ಎಂಬ ಕಾರಣಕ್ಕೆ ಅನೇಕರು ಸಮಾವೇಶ ನಡೆದ ಸ್ಥಳಕ್ಕೆ ನಿಗದಿತ ವೇಳೆಗೆ ಬರಲಾಗಲಿಲ್ಲ. ಅದನ್ನು ಹೊರತುಪಡಿಸಿದರೆ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.