ಶಿರಾಡಿಯಲ್ಲಿ ಅನಿರ್ದಿಷ್ಟಾವಧಿ ರೈಲು ಸಂಚಾರ ಬಂದ್‌

| Published : Aug 11 2024, 01:39 AM IST

ಸಾರಾಂಶ

ಸಕಲೇಶಪುರ ಪಟ್ಟಣದ ಆಚಂಗಿ ಗ್ರಾಮ ಸಮೀಪ ರೈಲ್ವೆಹಳಿಯ ಮೇಲೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ ಆರು ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿಯವರಗೆ ತಡೆಹಿಡಿಯಲಾಗಿದೆ. ಮಧ್ಯರಾತ್ರಿ ಗುಡ್ಡ ಕುಸಿದಿದ್ದರಿಂದ ಮೂರು ರೈಲುಗಳ ಸಂಚಾರವನ್ನು ಮಾರ್ಗಮಧ್ಯೆ ತಡೆಹಿಡಿಯಲಾಗಿದ್ದು ಇನ್ನೂ ಮೂರು ರೈಲುಗಳ ಸಂಚಾರವನ್ನು ಆರಂಭದಲ್ಲೆ ತಡೆಹಿಡಿಯಲಾಗಿದೆ. ಮಂಗಳೂರಿನಿಂದ ಬೆಂಗಳೂರಿನೆಡೆಗೆ ಸಂಚರಿಸುತ್ತಿದ್ದ ರೈಲನ್ನು ಸಕಲೇಶಪುರ ರೈಲು ನಿಲ್ದಾಣದಲ್ಲಿ ತಡೆಹಿಡಿಯಲಾದರೆ, ಬೆಂಗಳೂರಿನಿಂದ ಮಂಗಳೂರಿನೆಡೆಗೆ ಚಲಿಸುತ್ತಿದ್ದ ರೈಲುಗಳನ್ನು ಆಲೂರು ಹಾಗೂ ಹಾಸನ ರೈಲ್ವೆ ನಿಲ್ದಾಣದಲ್ಲಿ ತಡೆಯಡಿಯಲಾಗಿತ್ತು. ಈ ಮೂರು ರೈಲುಗಳಲ್ಲಿದ್ದ ಸಾವಿರಾರು ಮಂದಿ ರೈಲಿನಲ್ಲೆ ರಾತ್ರಿ ಕಳೆದರು.

ಕನ್ನಡಪ್ರಭ ವಾರ್ತೆ ಸಕಲೇಶಪುರಪಟ್ಟಣದ ಆಚಂಗಿ ಗ್ರಾಮ ಸಮೀಪ ರೈಲ್ವೆಹಳಿಯ ಮೇಲೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ ಆರು ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿಯವರಗೆ ತಡೆಹಿಡಿಯಲಾಗಿದೆ.

ಶುಕ್ರವಾರ ಮಧ್ಯರಾತ್ರಿ ೧೨.೩೦ರ ಸಂದರ್ಭದಲ್ಲಿ ಅಲ್ಪ ಪ್ರಮಾಣದ ಭೂಕುಸಿತ ಸಂಭವಿಸಿದ್ದರಿಂದ ತಕ್ಷಣವೇ ಎಚ್ಚೆತ್ತ ರೈಲ್ವೆ ಇಲಾಖೆ, ಹಳಿಯ ಮೇಲೆ ಬಿದ್ದಿದ್ದ ಮಣ್ಣು ತೆರವಿಗೆ ಮುಂದಾಗಿತ್ತು. ಆದರೆ, ತೆರವು ಕಾರ್ಯಾಚರಣೆ ನಡೆದಂತೆ ಮತ್ತಷ್ಟು ಭೂಕುಸಿತ ಸಂಭವಿಸಿದ್ದರಿಂದ ಮಧ್ಯರಾತ್ರಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಶನಿವಾರ ಮುಂಜಾನೆಯಿಂದ ಎರಡು ಹಿಟಾಚಿಯಂತ್ರ ಹಾಗೂ ನೂರಾರು ರೈಲ್ವೆ ನೌಕರರು ತೆರವು ಕಾರ್ಯಾಚರಣೆಗೆ ಇಳಿದಿದ್ದು ಈ ವೇಳೆಯು ಮತ್ತೆ ಮತ್ತೆ ಭೂಕುಸಿತ ಸಂಭವಿಸಿದ್ದು ಇಟಾಚಿ ಚಾಲಕ ಅಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರೈಲ್ವೆ ಹಳಿಯ ಸುಮಾರು ೧೦೦ ಮೀಟರ್ ಉದ್ದಕ್ಕೆ ಸುಮಾರು ೨೦೦ ಅಡಿಯಷ್ಟು ಮಣ್ಣಿನ ರಾಶಿಯಿದ್ದು ಹಳಿಯ ಮೇಲೆ ಬಿದ್ದಿರುವ ಬೃಹತ್ ಬಂಡೆಗಳು ಸುಲಭ ಕಾರ್ಯಾಚರಣೆಯನ್ನು ಕಠಿಣಗೊಳಿಸಿವೆ.

ರೈಲಿನಲ್ಲೇ ಜಾಗರಣೆ: ಮಧ್ಯರಾತ್ರಿ ಗುಡ್ಡ ಕುಸಿದಿದ್ದರಿಂದ ಮೂರು ರೈಲುಗಳ ಸಂಚಾರವನ್ನು ಮಾರ್ಗಮಧ್ಯೆ ತಡೆಹಿಡಿಯಲಾಗಿದ್ದು ಇನ್ನೂ ಮೂರು ರೈಲುಗಳ ಸಂಚಾರವನ್ನು ಆರಂಭದಲ್ಲೆ ತಡೆಹಿಡಿಯಲಾಗಿದೆ. ಮಂಗಳೂರಿನಿಂದ ಬೆಂಗಳೂರಿನೆಡೆಗೆ ಸಂಚರಿಸುತ್ತಿದ್ದ ರೈಲನ್ನು ಸಕಲೇಶಪುರ ರೈಲು ನಿಲ್ದಾಣದಲ್ಲಿ ತಡೆಹಿಡಿಯಲಾದರೆ, ಬೆಂಗಳೂರಿನಿಂದ ಮಂಗಳೂರಿನೆಡೆಗೆ ಚಲಿಸುತ್ತಿದ್ದ ರೈಲುಗಳನ್ನು ಆಲೂರು ಹಾಗೂ ಹಾಸನ ರೈಲ್ವೆ ನಿಲ್ದಾಣದಲ್ಲಿ ತಡೆಯಡಿಯಲಾಗಿತ್ತು. ಈ ಮೂರು ರೈಲುಗಳಲ್ಲಿದ್ದ ಸಾವಿರಾರು ಮಂದಿ ರೈಲಿನಲ್ಲೆ ರಾತ್ರಿ ಕಳೆದರು. ಮುಂಜಾನೆ ಎಲ್ಲ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬಿಸ್ಕೆಟ್, ಕಾಫಿ ಹಾಗೂ ತಿಂಡಿ ನೀಡುವ ಮೂಲಕ ಉಪಚರಿಸಿ ಹಾಸನ ಹಾಗೂ ಸಕಲೇಶಪುರ ಡಿಪೋಗೆ ಸೇರಿದ ಸುಮಾರು ೩೦ ಬಸ್‌ಗಳಲ್ಲಿ ವಿವಿಧ ಊರುಗಳಿಗೆ ಕಳುಹಿಸಿ ಕೊಡಲಾಯಿತು. ಪಟ್ಟಣದ ಆಚಂಗಿ ಸಮೀಪ ರೈಲ್ವೆಹಳಿಯ ಮೇಲೆ ಕುಸಿದಿರುವ ಗುಡ್ಡ ಜುಲೈ ತಿಂಗಳ ಅಂತ್ಯದಲ್ಲಿ ಸುರಿದ ಭಾರಿ ಮಳೆಯ ವೇಳೆಯು ಕುಸಿದಿದ್ದು ತಕ್ಷಣವೇ ತೆರವುಗೊಳಿಸಲಾಗಿತ್ತು.

2 ದಿನದ ಹಿಂದೆ ಸಂಚಾರ ಆರಂಭ: ಜುಲೈ ತಿಂಗಳ ೨೭ರಂದು ಬಾರಿ ಮಳೆಯಿಂದಾಗಿ ಶಿರಾಡಿಘಾಟ್‌ನ ಕಡಗರವಳ್ಳಿ ಗ್ರಾಮ ಸಮೀಪ ರೈಲ್ವೆಹಳಿಯ ಅಡಿಪಾಯದಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದ್ದರಿಂದ ಅಗಸ್ಟ್ ೭ರವರೆ ೧೦ ದಿನಗಳ ಕಾಲ ರೈಲು ಸಂಚಾರವನ್ನು ಬಂದ್ ಮಾಡಲಾಗಿತ್ತು. ದುರಸ್ತಿಗೆ ೧೫ ದಿನ ಹಿಡಿಯಲಿದೆ ಎಂದು ಅಂದಾಜಿಸಲಾಗಿತ್ತಾದರೂ ಸಾವಿರಾರು ಕಾರ್ಮಿಕರು ಮೂರು ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ನಿಗದಿತ ಅವಧಿಗಿಂತ ಮುಂಚಿತವಾಗಿ ದುರಸ್ತಿ ಕಾರ್ಯಾಚರಣೆ ಮುಕ್ತಾಯಗೊಳಿಸಿದ ರೈಲ್ವೆ ಇಲಾಖೆ, ಬುಧವಾರ ಪರೀಕ್ಷಾರ್ಹವಾಗಿ ಗೂಡ್ಸ್ ರೈಲು ಓಡಿಸಿದ್ದು, ಗುರುವಾರದಿಂದ ಪ್ರಯಾಣಿಕರ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಎರಡು ದಿನಗಳು ಕಳೆಯುವ ವೇಳೆಗೆ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಮತ್ತೆ ಬಂದ್ ಆಗಿದೆ.

*ಬಾಕ್ಸ್‌: ಪರೀಕ್ಷೆ ಬರೆಯಲಾಗದೇ ಯುವಕ ಅಸಮಾಧಾನ

ರಾಜಸ್ಥಾನದ ರೋಹಿತ್ ಸಿಂಗ್ ರಾವತ್ ಎಂಬ ಯುವಕ ಏರ್‌ಫೋರ್ಸ್‌ ಪರೀಕ್ಷೆ ಬರೆಯಲು ರಾಜಸ್ಥಾನದಿಂದ ಮಂಗಳೂರಿಗೆ ಆಗಮಿಸುತ್ತಿದ್ದು, ಶನಿವಾರ ೯ ಗಂಟೆಗೆ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ, ಗುಡ್ಡಕುಸಿತದಿಂದ ಮಾರ್ಗಮಧ್ಯೆ ಬಾಕಿಯಾದ ಯುವಕ ತನ್ನ ಟ್ವಿಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದು ಕೇಂದ್ರ ರೈಲ್ವೆಸಚಿವರಿಗೂ ದೂರು ನೀಡಿದ್ದಾನೆ.