ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದ್ದು ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಕಳೆಕಟ್ಟಿದೆ. ತರಹೇವಾರಿ ಆಕಾಶ ಬುಟ್ಟಿ, ಬಣ್ಣಬಣ್ಣದ ಲೈಟಿನ ಸರಗಳು ಕಣ್ಣು ಕುಕ್ಕುತ್ತಿವೆ. ಇವುಗಳ ನಡುವೆ ತಮಿಳುನಾಡಿನಿಂದ ಬಂದಿರುವ ವಿವಿಧ ಬಗೆಯ ಮಣ್ಣಿನ ಹಣತೆಗಳು ಗ್ರಾಹಕರ ಚಿತ್ತ ಸೆಳೆಯುತ್ತಿವೆ.
ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು ತಮಿಳುನಾಡಿನ ಕೋಯಿಮತ್ತೂರು, ಮಧುರೈ, ಚೆನ್ನೈನಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ 60 ಲಕ್ಷಕ್ಕೂ ಅಧಿಕ ಬಗೆಬಗೆಯ ಹಣತೆಗಳು ಲಗ್ಗೆ ಇಟ್ಟಿವೆ.ಈ ಭಾಗದಲ್ಲಿ ಮಣ್ಣಿನ ಹಣತೆ ತಯಾರಿಸುವವರ ಸಂಖ್ಯೆ ಸಂಪೂರ್ಣವಾಗಿ ಕ್ಷೀಣಿಸಿದೆ. ಜತೆಗೆ ಸ್ಥಳೀಯವಾಗಿ ತಯಾರಿಸುವ ಮಣ್ಣಿನ ಹಣತೆಗಳಿಗೂ ತಮಿಳುನಾಡಿನಿಂದ ಆಗಮಿಸುವ ಹಣತೆಗಳಿಗೂ ವ್ಯತ್ಯಾಸವಿದೆ. ಸ್ಥಳೀಯವಾಗಿ ಸಾಮಾನ್ಯ ಮಣ್ಣಿನಲ್ಲಿ ತಯಾರಿಸಿದ ಹಣತೆ ದೊರೆತರೆ, ತಮಿಳುನಾಡಿನಿಂದ ಬಂದಿರುವ ಹಣತೆಯನ್ನು ಹೆಂಚು ತಯಾರಿಕೆಗೆ ಬಳಸುವ ಮಣ್ಣಿನಿಂದ ಸಿದ್ಧಪಡಿಸಲಾಗಿದೆ. ಇವು ಸಾಮಾನ್ಯ ಮಣ್ಣಿಗಿಂತ ಹೆಚ್ಚು ಬಾಳಿಕೆ ಬರುವುದರಿಂದ ಇವುಗಳಿಗೆ ಬೇಡಿಕೆಯೂ ಸಹ ಹೆಚ್ಚಿದೆ. ಹೀಗಾಗಿ ಅಷ್ಟೊಂದು ಪ್ರಮಾಣದಲ್ಲಿ ಬಣ್ಣಿನ ಹಣತೆಗಳು ಮಾರುಕಟ್ಟೆ ಪ್ರವೇಶಿಸಿವೆ.
6 ತಿಂಗಳು ಮೊದಲೇ ಸಿದ್ಧತೆ:ಯುಗಾದಿ ಸಂಭ್ರಮ ಮುಗಿಯುತ್ತಿದ್ದಂತೆ ದೀಪಾವಳಿಗೆ ಬೇಕಾಗುವ ಹಣತೆ ತಯಾರಿಕೆ ನಡೆಯುತ್ತದೆ. ನೂರಾರು ಕಾರ್ಮಿಕರು ವಿವಿಧ ಶೈಲಿಯಲ್ಲಿ ಹಣತೆ ತಯಾರಿಸಿ ಒಣಗಿಸುತ್ತಾರೆ. ಬಳಿಕ ಅವುಗಳನ್ನು ಕಟ್ಟಿಗೆಯ ಬಟ್ಟಿಗೆ ಹಾಕಿ ಸುಡಲಾಗುತ್ತದೆ. ನಂತರ ಇವುಗಳಿಗೆ ಬಣ್ಣದ ಲೇಪನ ಮಾಡಿ ಅವುಗಳ ಅಂದ ಹೆಚ್ಚಿಸಲಾಗುತ್ತದೆ. ಹೀಗೆ ಸಿದ್ಧಪಡಿಸಿದ ಹಣತೆಗಳನ್ನು ರೈಲು, ಟ್ರಕ್ ಮೂಲಕ ವಿದೇಶ ವಿವಿಧ ಭಾಗಗಳಿಗೆ ಕಳಿಸಲಾಗುತ್ತದೆ. ಹೀಗೇ ಉತ್ತರ ಕರ್ನಾಟಕ ಭಾಗಕ್ಕೂ ತೆಗೆದುಕೊಂಡು ಬರಲಾಗುತ್ತಿದೆ.
ಬೇಡಿಕೆ ಹೆಚ್ಚಳ:ಕಳೆದ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿಯೇ 35 ಲಕ್ಷಕ್ಕೂ ಅಧಿಕ ಹಣತೆಗಳು ಮಾರಾಟವಾಗಿವೆ. ಇಲ್ಲಿ ಸ್ಥಳೀಯವಾಗಿ ಮಾರಾಟ ಮಾಡುವ ರಿಟೇಲರ್‌ಗಳ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಈ ಬಾರಿ 60 ಲಕ್ಷಕ್ಕೂ ಅಧಿಕ ಹಣತೆಗಳು ಮಾರಾಟಕ್ಕೆ ಬಂದಿವೆ.
ಹೇಗೆ ಮಾರಾಟ:
ಹುಬ್ಬಳ್ಳಿಯಲ್ಲಿ 10ಕ್ಕೂ ಅಧಿಕ ವಿತರಕರಿದ್ದು, ಇವರು ತಮಿಳುನಾಡಿನಿಂದ ಟ್ರಕ್ ಹಾಗೂ ರೈಲಿನಲ್ಲಿ ಹಣತೆ ತರಿಸುತ್ತಾರೆ. ಇಲ್ಲಿಂದ ವಿವಿಧ ಜಿಲ್ಲೆಗಳಲ್ಲಿನ ಮಾರಾಟಗಾರರಿಗೆ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡುತ್ತಾರೆ. ಅವರು ಅಲ್ಲಿ ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ.ಬೆಲೆ ಕಡಿಮೆ:ಸಾಮಾನ್ಯವಾಗಿ ಸ್ಥಳೀಯವಾಗಿ ಸಿಗುವ ಚಿಕ್ಕದಾಗಿರುವ ಡಜನ್ ಹಣತೆಗೆ ₹40 ರಿಂದ ₹50 ಇದ್ದರೆ, ತಮಿಳುನಾಡಿನ ಹಣತೆಗಳು ಡಜನ್‌ಗೆ ₹25 ರಿಂದ ₹30 ಸಿಗುತ್ತವೆ. ಹಾಗೆಯೇ ₹5ರಿಂದ ಹಿಡಿದು ₹200ರ ವರೆಗೂ ಬಗೆಬಗೆಯ ಹಣತೆ ಮಾರಾಟಕ್ಕೆ ಸಿಗುತ್ತವೆ.ಎಂಟತ್ತು ವರ್ಷಗಳಿಂದ ನಾವು ಉತ್ತರ ಕರ್ನಾಟಕ ಭಾಗದಲ್ಲಿ ಹಣತೆ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ಹೆಚ್ಚಿನ ಬೇಡಿಕೆ ಇರುವುದರಿಂದ 60 ಲಕ್ಷಕ್ಕೂ ಅಧಿಕ ಮಣ್ಣಿನ ಹಣತೆ ತಂದು ರಿಟೇಲರ್‌ಗೆ ನೀಡಿದ್ದೇವೆ ಎಂದು ತಮಿಳುನಾಡಿನಿಂದ ಹಣತೆ ತಂದ ವ್ಯಾಪಾರಿ ಸುಭಮನ್ ಮೋನಿಯಾ ಹೇಳಿದರು.ಸ್ಥಳೀಯವಾಗಿ ದೊರೆಯುವ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಿದೆ. ಹೆಂಚಿನ ಮಣ್ಣಿನಿಂದ ತಯಾರಿಸುವ ತಮಿಳುನಾಡಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಕಳೆದ ಎರಡು ವರ್ಷಗಳಿಂದ ಇದೇ ಹಣತೆ ತರಿಸಿ ಮಾರಾಟ ಮಾಡುತ್ತಿದ್ದೇವೆ ಎಂದು ಹಣತೆ ವ್ಯಾಪಾರಿಗಳಾದ ಶ್ರೀನಿವಾಸ ಗಂಡಿಕೋಟ, ಅಮೃತ ಮೂಸಾಳೆ ತಿಳಿಸಿದರು.