ಫುಟ್‌ಪಾತಲ್ಲಿ ನಿಂತ ಆಟೋದಲ್ಲಿ ನಿದ್ರೆ ಮಾಡಿದ ಕಾನ್‌ಸ್ಟೇಬಲ್‌!

| Published : Mar 18 2024, 01:45 AM IST

ಫುಟ್‌ಪಾತಲ್ಲಿ ನಿಂತ ಆಟೋದಲ್ಲಿ ನಿದ್ರೆ ಮಾಡಿದ ಕಾನ್‌ಸ್ಟೇಬಲ್‌!
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಂದಾಗಿ ಸ್ವಾತಿ ಹೊಟೇಲ್‌ ಮುಂಭಾಗದಲ್ಲಿ ಸದಾ ಜನಜಂಗುಳಿ ಇರುತ್ತದೆ. ಪರಿಸ್ಥಿತಿ ಹೀಗಿದ್ದಾಗ್ಯೂ ಕೆ.ಎ-25 ಡಿ.9337 ನಂಬರಿನ ಆಟೋ ಫುಟ್‌ಪಾತ್‌ಗೆ ಅಡ್ಡಲಾಗಿ ನಿಂತಿತ್ತು. ಚಾಲಕ ಗಿರಾಕಿಗಾಗಿ ಕಾಯುತ್ತಿದ್ದರೆ, ಒಳಗೆ ಟ್ರಾಫಿಕ್‌ ಪೇದೆಯೊಬ್ಬ ಗಡದ್ ನಿದ್ರೆಗೆ ಜಾರಿದ್ದ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕರ್ತವ್ಯ ನಿರತ ಸಂಚಾರಿ ಪೊಲೀಸ್‌ (ಟ್ರಾಫಿಕ್‌) ಪೇದೆಯೊಬ್ಬ ಭಾನುವಾರ ಮಧ್ಯಾಹ್ನ ಮಹಾನಗರ ಪಾಲಿಕೆ ಎದುರಿನ ಸ್ವಾತಿ ಹೊಟೇಲ್‌ ಮುಂಭಾಗದ ಫುಟ್‌ಪಾತ್‌ ನಡುವೆ ಅಕ್ರಮವಾಗಿ ನಿಲ್ಲಿಸಿದ್ದ ಆಟೋರಿಕ್ಷಾದಲ್ಲೇ ನಿದ್ರೆಗೆ ಜಾರಿ ಸಾರ್ವಜನಿಕರಿಂದ ತರಾಟೆಗೆ ಒಳಗಾದ ಘಟನೆ ನಡೆಯಿತು.

ವಾಹನಗಳ ದಟ್ಟನೆಯಿಂದ ತತ್ತರಿಸಿರುವ ಹುಬ್ಬಳ್ಳಿ ನಗರದಲ್ಲಿ ಫುಟ್‌ಪಾತ್‌ಗಳೇ ಮಾಯವಾಗಿವೆ. ಬಹುತೇಕ ಫುಟ್‌ಪಾತಗಳಲ್ಲಿ ಸಣ್ಣಪುಟ್ಟ ವ್ಯಾಪಾರಸ್ತರು, ಎಳನೀರು, ಪಾನಿಪುರಿ ಮಾರುವವರು, ಬೈಕ್‌, ಕಾರುಗಳು ಆಕ್ರಮಿಸಿಕೊಂಡಿರುತ್ತವೆ. ಹಾಗಾಗಿ ಪಾದಚಾರಿಗಳು ವಾಹನಗಳ ಜತೆ ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲೇ ಸಾಗುವುದು ಸಾಮಾನ್ಯವಾಗಿದೆ.

ಫುಟ್‌ಪಾತ್‌ ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಬೇಕಿರುವ ಟ್ರಾಫಿಕ್‌ ಪೋಲಿಸರು ಆಗೊಮ್ಮೆ ಈಗೊಮ್ಮೆ ದಂಡ ಪ್ರಯೋಗಿಸುವ ಶಾಸ್ತ್ರ ಮಾಡುತ್ತಿದ್ದರೂ ಯಾವುದೇ ಫುಟ್‌ಪಾತ್‌ ತೆರವುಗೊಂಡ ನಿದರ್ಶನಗಳಿಲ್ಲ ಎನ್ನುವುದಕ್ಕೆ ಈ ಆಟೋ ಜೀವಂತ ನಿದರ್ಶನವಾಗಿತ್ತು.

ಪಾಲಿಕೆಯಿಂದ ರಸ್ತೆ ದಾಟಿ ಹೊರಕ್ಕೆ ಬರುವ ವಾಹನಗಳು, ಬಿಆರ್‌ಟಿಎಸ್‌ ನಿಲ್ದಾಣಕ್ಕೆ ಹೋಗುವ ಜನರಿಂದಾಗಿ ಸ್ವಾತಿ ಹೊಟೇಲ್‌ ಮುಂಭಾಗದಲ್ಲಿ ಸದಾ ಜನಜಂಗುಳಿ ಇರುತ್ತದೆ. ಪರಿಸ್ಥಿತಿ ಹೀಗಿದ್ದಾಗ್ಯೂ ಕೆ.ಎ-25 ಡಿ.9337 ನಂಬರಿನ ಆಟೋ ಫುಟ್‌ಪಾತ್‌ಗೆ ಅಡ್ಡಲಾಗಿ ನಿಂತಿತ್ತು. ಚಾಲಕ ಗಿರಾಕಿಗಾಗಿ ಕಾಯುತ್ತಿದ್ದರೆ, ಒಳಗೆ ಟ್ರಾಫಿಕ್‌ ಪೇದೆಯೊಬ್ಬ ಗಡದ್ ನಿದ್ರೆಗೆ ಜಾರಿದ್ದ.

ಪಾದಚಾರಿಯೊಬ್ಬರು ಪ್ರಶ್ನಿಸಿದ್ದಕ್ಕೆ ಆಟೋ ಚಾಲಕ ಅವರಿಗೇ ಆವಾಜ್‌ ಹಾಕಿದ್ದರಿಂದ ಮಾತಿಗೆ ಮಾತು ಬೆಳೆದಾಗ ಒಳಗಿದ್ದ ಕಾನ್‌ಸ್ಟೇಬಲ್‌ ಎಚ್ಚರಗೊಂಡು ಕ್ಷಮಿಸಿ ಕ್ಷಮಿಸಿ ಎನ್ನುತ್ತ ಆಟೋವನ್ನು ಮುಂದಕ್ಕೆ ಕಳಿಸಿದ. ಆಗ ಅಲ್ಲಿದ್ದವರು ಪೇದೆಯನ್ನು ತರಾಟೆಗೆ ತೆಗೆದುಕೊಂಡು ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರ ಕರ್ತವ್ಯ ನಿರ್ವಹಣೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.