ರಾಮ-ಸೀತೆ ಆದರ್ಶ ಪ್ರತಿಯೊಬ್ಬರ ಬದುಕಿಗೂ ಮಾದರಿ: ಶಿಕ್ಷಕಿ ಲಕ್ಷ್ಮೀ

| Published : Mar 18 2024, 01:45 AM IST

ರಾಮ-ಸೀತೆ ಆದರ್ಶ ಪ್ರತಿಯೊಬ್ಬರ ಬದುಕಿಗೂ ಮಾದರಿ: ಶಿಕ್ಷಕಿ ಲಕ್ಷ್ಮೀ
Share this Article
  • FB
  • TW
  • Linkdin
  • Email

ಸಾರಾಂಶ

ಸೀತೆ ಶೋಷಿತೆಯಲ್ಲ, ಶಕ್ತಿಯ ಸ್ವರೂಪ. ಶ್ರೀರಾಮ, ಸೀತೆಯ ಆದರ್ಶ ಪ್ರತಿಯೊಬ್ಬರ ಬದುಕಿಗೂ ಮಾದರಿಯಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದು, ಪ್ರಾಬಲ್ಯ ಸಾಧಿಸಿದ್ದಾಳೆ. ಆದರೆ, ಮಹಿಳಾ ಪ್ರಧಾನ ನಾಟಕಗಳ ಸಂಖ್ಯೆ ಹೆಚ್ಚಾಗಬೇಕು. ಒಂದು ಪುಸ್ತಕದ ಅಂಶವನ್ನು ಒಂದು ನಾಟಕ ತಿಳಿಸಬಲ್ಲದು ಎಂದು ರಂಗ ಕಲಾವಿದೆ, ಶಿಕ್ಷಕಿ ಲಕ್ಷ್ಮೀ ಭದ್ರಾವತಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಭದ್ರಾವತಿ

ಸೀತೆ ಶೋಷಿತೆಯಲ್ಲ, ಶಕ್ತಿಯ ಸ್ವರೂಪ. ಶ್ರೀರಾಮ, ಸೀತೆಯ ಆದರ್ಶ ಪ್ರತಿಯೊಬ್ಬರ ಬದುಕಿಗೂ ಮಾದರಿಯಾಗಿದೆ ಎಂದು ರಂಗ ಕಲಾವಿದೆ, ಶಿಕ್ಷಕಿ ಲಕ್ಷ್ಮೀ ಹೇಳಿದರು.

ನಗರದ ಹಳೇ ನಗರ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶನಿವಾರ ವೀರಶೈವ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಅಯೋಜಿಸಲಾಗಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದು, ಪ್ರಾಬಲ್ಯ ಸಾಧಿಸಿದ್ದಾಳೆ. ಆದರೆ, ಮಹಿಳಾ ಪ್ರಧಾನ ನಾಟಕಗಳ ಸಂಖ್ಯೆ ಹೆಚ್ಚಾಗಬೇಕು. ಒಂದು ಪುಸ್ತಕದ ಅಂಶವನ್ನು ಒಂದು ನಾಟಕ ತಿಳಿಸಬಲ್ಲದು ಎಂದರು.

ಪ್ರಶಸ್ತಿ ಸ್ಥಾಪಕರಾದ ಎಮೆರಿಟಸ್ ಪ್ರಾಧ್ಯಾಪಕಿ ಡಾ.ವಿಜಯದೇವಿ ಪ್ರಾಸ್ತಾವಿಕವಾಗಿ ಮಾತನಾಡಿ, ರಂಗಭೂಮಿಗೆ ಮಹಿಳಾ ಕಲಾವಿದರ ಕೊಡುಗೆ ಅಪಾರವಾಗಿದೆ. ರಂಗಭೂಮಿಗೆ ಭದ್ರಾವತಿ ಕ್ಷೇತ್ರದ ಅನೇಕ ರಂಗತಂಡಗಳ ಕೊಡುಗೆ ಬಹಳಷ್ಟಿದೆ. ಹಿಂದಿನ ದಿನಗಳಲ್ಲಿ ಕುಟುಂಬ ಕಟ್ಟುವ ಶಕ್ತಿ ಅಗಾಧವಾಗಿತ್ತು. ಆದರೆ ಇಂದು ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾಜದ ಗೌರವಾಧ್ಯಕ್ಷೆ ಗೌರಮ್ಮ ಶಂಕರಯ್ಯ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರನ್ನು ಗೌರವಿಸುವ ಮನೋಭಾವ ಗುಣ ಬೆಳೆದಾಗ ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ. ಮಹಿಳಾ ದಿನಾಚರಣೆ ಸಮಾರಂಭಗಳು ಮಹಿಳಾ ದೌರ್ಜನ್ಯ ಖಂಡಿಸುವ ಮಹತ್ವದ ಆಚರಣೆಗಳಾಗಬೇಕು ಎಂದರು.

ವೀರಶೈವ ಲಿಂಗಾಯತ ಮಹಿಳಾ ಸಮಾಜ ಅಧ್ಯಕ್ಷ ಆರ್.ಎಸ್. ಶೋಭ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶಕುಮಾರ್, ಸಮಾಜದ ಉಪಾಧ್ಯಕ್ಷೆ ಸುಶೀಲ ಎಂ.ಬಿ. ಸದಾಶಿವ, ನಿರ್ದೇಶಕಿ ಶಶಿಕಲಾ ಉದಯಕುಮಾರ್ ಇನ್ನಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಾಗರತ್ನ ವಾಗೀಶ್ ಕೋಠಿ ಕಾರ್ಯಕ್ರಮ ನಿರೂಪಿಸಿದರು.

ಗಣೇಶ್ ಆರ್. ಕೆಂಚನಾಲ್ ರಚನೆಯ ‘ಉಡುತಡಿ’ ನಾಟಕ ಡಾ. ವಿಜಯದೇವಿ ಮಾರ್ಗದರ್ಶನದಲ್ಲಿ ಸಾಣೆಹಳ್ಳಿ ಮಂಜಳಾ ಬಾದಾಮಿ ಹಾಗೂ ವೈ.ಡಿ. ಬಾದಾಮಿ ನಿರ್ದೇಶನದಲ್ಲಿ ಶಿವಮೊಗ್ಗ ಮಲೆನಾಡು ಕಲಾತಂಡದ ಕಲಾವಿದರಿಂದ ನಾಟಕ ಪ್ರದರ್ಶನಗೊಂಡಿತು.

- - - -ಡಿ16-ಬಿಡಿವಿಟಿ:

ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗ ಕಲಾವಿದೆ, ಶಿಕ್ಷಕಿ ಲಕ್ಷ್ಮಿಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.