ಕಾರಿನ ಮೇಲೆ ಮಗುಚಿಬಿದ್ದ ಕಂಟೈನರ್‌ ಲಾರಿ

| Published : Aug 11 2024, 01:34 AM IST

ಸಾರಾಂಶ

ಕಂಟೈನರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಕಾರಿನ ಮೇಲೆ ಮಗುಚಿ ಬಿತ್ತು. ಪರಿಣಾಮವಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಂಟೈನರ್ ಕೂಡ ಜಖಂಗೊಂಡಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ದಾವಣಗೆರೆ ಮೂಲದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಮೇಲೆ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿದ್ದು, ಅದೃಷ್ಟವಶಾತ್‌ ಯಾವುದೇ ಸಾವು ನೋವು ಉಂಟಾಗದಿರುವ ಘಟನೆ ಶನಿವಾರ ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ರಾ.ಹೆ.೭೫ರಲ್ಲಿ ಸಂಭವಿಸಿದೆ.ದಾವಣಗೆರೆಯ ನಿವಾಸಿಗಳಾದ ಗಣೇಶ, ಶಿವು, ಕಾವ್ಯ, ದಂಡ್ಯಮ್ಮ ಎಂಬ ನಾಲ್ವರು, ಅಬ್ದುಲ್ ರಹಿಮಾನ್ ಮುಲ್ಲಾ ಎಂಬ ಚಾಲಕನನ್ನು ಕರೆದುಕೊಂಡು ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದಿದ್ದರು. ಶನಿವಾರ ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಊರಿಗೆ ವಾಪಸ್‌ ಹೋಗುತ್ತಿದ್ದರು. ಬೆಳಗ್ಗೆ ೧೧.೩೦ರ ವೇಳೆಗೆ ಬರ್ಚಿನಹಳ್ಳ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ಕಾರಿನಿಂದ ಎಲ್ಲರೂ ಇಳಿದಿದ್ದರು. ಈ ವೇಳೆ ಮಂಗಳೂರು ಕಡೆಯಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಕಂಟೈನರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ಕಾರಿನ ಮೇಲೆ ಮಗುಚಿ ಬಿತ್ತು. ಪರಿಣಾಮವಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಂಟೈನರ್ ಕೂಡ ಜಖಂಗೊಂಡಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಾಂತಿ ಬಂದಿದ್ದರಿಂದ ಜೀವ ಉಳಿಯಿತು ಪ್ರಯಾಣದ ವೇಳೆ ಕಾರಿನಲ್ಲಿದ್ದ ಕಾವ್ಯ ತನಗೆ ವಾಂತಿ ಬರುತ್ತಿದೆ ಎಂದು ತಿಳಿಸಿದ ಕಾರಣಕ್ಕೆ ಕಾರನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದರು. ಈ ವೇಳೆ ಚಾಲಕನ ಸಹಿತ ಕಾರಿನಲ್ಲಿದ್ದವರು ಎಲ್ಲರೂ ಇಳಿದಿದ್ದರು. ಅವರೆಲ್ಲರ ಕಣ್ಣೆದುರೇ ಕಂಟೈನರ್ ಲಾರಿ ಮಗುಚಿ ಬಿದ್ದು ಕಾರು ನಜ್ಜುಗುಜ್ಜಾಯಿತು. ಕಾರಿನಲ್ಲಿ ಯಾರೇ ಇದಿದ್ದದ್ದರೂ ಪ್ರಾಣಕ್ಕೆ ಕುತ್ತುಂಟಾಗುತ್ತಿತ್ತು. ನಂಬಿದ ದೇವರು ಈ ಕುಟುಂಬವನ್ನು ಸದಸ್ಯರೊಬ್ಬರಿಗೆ ವಾಂತಿಯ ನೆಪವನ್ನೊಡ್ಡಿ ರಕ್ಷಿಸಿದ್ದು ಪವಾಡ ಎಂಬಂತೆ ಭಾಸವಾಯಿತು.