ತಾಯಿ ಗೌರವಿಸುವ ದೇಶ ಎಂದಿಗೂ ಬಡವಾಗದು: ಬಸವರಾಜ ಬೊಮ್ಮಾಯಿ

| Published : Aug 15 2025, 01:00 AM IST

ಸಾರಾಂಶ

ಜನ್ಮ ಪೂರ್ವದ ಸಂಬಂಧವಿರುವುದು ಒಂದೇ, ಅದು ತಾಯಿ- ಮಗುವಿನ ಸಂಬಂಧ. ಮಿಕ್ಕೆಲ್ಲ ಸಂಬಂಧಗಳು ಜನ್ಮ ತಾಳಿದ ನಂತರದ್ದು. ಜನ್ಮ ಪೂರ್ವದಲ್ಲಿ ತಾಯಿಯ ಗರ್ಭದಲ್ಲಿ ಪ್ರಾರಂಭವಾಗಿರುವ ತಾಯಿಯ ಸಂಬಂಧ ಭೂಗರ್ಭಕ್ಕೆ ಹೋಗುವವರೆಗೂ ಇರುತ್ತದೆ.

ಹಾವೇರಿ: ಯಾವ ದೇಶದಲ್ಲಿ ತಾಯಿಯ ಬಗ್ಗೆ ಗೌರವ ಇದೆಯೋ, ಆ ದೇಶ ಎಂದೂ ಬಡವಾಗುವುದಿಲ್ಲ. ಯಾವ ದೇಶದಲ್ಲಿ ತಾಯಿ, ಹೆಣ್ಣಿಗೆ ಗೌರವ ಇಲ್ಲವೋ ಆ ದೇಶ ಬಹಳ ದಿನ ಉಳಿಯುವುದಿಲ್ಲ. ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ ಇದೆ. ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದಲ್ಲಿ ಗುರುವಾರ ಶ್ರೀಮತಿ ಗಂಗಮ್ಮ ಎಸ್. ಬೊಮ್ಮಾಯಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನ್ಮ ಪೂರ್ವದ ಸಂಬಂಧವಿರುವುದು ಒಂದೇ, ಅದು ತಾಯಿ- ಮಗುವಿನ ಸಂಬಂಧ. ಮಿಕ್ಕೆಲ್ಲ ಸಂಬಂಧಗಳು ಜನ್ಮ ತಾಳಿದ ನಂತರದ್ದು. ಜನ್ಮ ಪೂರ್ವದಲ್ಲಿ ತಾಯಿಯ ಗರ್ಭದಲ್ಲಿ ಪ್ರಾರಂಭವಾಗಿರುವ ತಾಯಿಯ ಸಂಬಂಧ ಭೂಗರ್ಭಕ್ಕೆ ಹೋಗುವವರೆಗೂ ಇರುತ್ತದೆ. ಸೃಷ್ಟಿಯ ಅದ್ಭುತವಾದ ಪ್ರಕ್ರಿಯೆ. ಪ್ರತಿಯೊಂದು ಆಯಾಮದಲ್ಲಿ ಬಹಳ ವಿಶೇಷತೆ ಕಾಣಿಸುತ್ತದೆ. ಅದನ್ನು ಆಧ್ಯಾತ್ಮಿಕವಾಗಿ ನೋಡಿದರೆ ತಾಯಿಯ ವಿಶೇಷತೆ ಕಾಣಿಸುತ್ತದೆ. ವೈಜ್ಞಾನಿಕವಾಗಿ ನೋಡಿದರೆ ವೈಜ್ಞಾನಿಕತೆ ಕಾಣಿಸುತ್ತದೆ. ಸಾಂಸ್ಕೃತಿಕವಾಗಿ ನೋಡಿದರೆ ಸಂಸ್ಕೃತಿ ಕಾಣಿಸುತ್ತದೆ. ಅದ್ಭುತವಾದ ಸಂಬಂಧ ಆ ಸೃಷ್ಟಿಕರ್ತ ಮಾಡಿದ್ದಾನೆ ಎಂದರು.

ತಾಯಿಗೆ ಮರಣ ಇಲ್ಲ: ಪ್ರತಿಯೊಬ್ಬ ತಾಯಿಗೆ ಮರಣ ಇಲ್ಲ. ಯಾವಾಗ ಮನಸಿನಲ್ಲಿ ನೆನಪಿಸಿಕೊಳ್ಳುತ್ತೀರೋ ಆಗ ತಾಯಿ ನಿಮ್ಮ ಜೊತೆ ಇರುತ್ತಾಳೆ. ನೋವಾದಾಗ ನಾವು ದೇವರನ್ನು ನೆನೆಯುವುದಿಲ್ಲ. ಅವ್ವ ಎನ್ನುತ್ತೇವೆ. ಅಂದರೆ ತಾಯ್ತನ ಎಷ್ಟು ದೊಡ್ಡದಿದೆ. ಈ ಜಗತ್ತಿನಲ್ಲಿ ಅತ್ಯಂತ ದೊಡ್ಡದು ತಾಯ್ತನ. ಹೃದಯದಿಂದ ಬರುವ ಮಾತುಗಳು ಭಗವಂತನಿಗೆ ಮೆಚ್ಚುಗೆಯಾಗುತ್ತವೆ. ಭೂಮಂಡಲವನ್ನು ನಿಯಂತ್ರಣ ಮಾಡುವವಳು ತಾಯಿ. ಅದಕ್ಕೆ ನಾವು ಭಾರತ ಮಾತಾಕಿ ಜೈ ಅಂತ ಕರೆಯುತ್ತೇವೆ ಎಂದರು.

ಮೊದಲು ನಾವು ಕೆಟ್ಟ ತಾಯಿ ಇರುವುದಿಲ್ಲ ಅಂತ ಹೇಳುತ್ತಿದ್ದೆವು. ಈಗ ಮಕ್ಕಳು ತಾಯಿಯನ್ನು ಕೊಲ್ಲುತ್ತಾರೆ. ತಾಯಿ ಮಕ್ಕಳನ್ನು ಕೊಲ್ಲುತ್ತಾರೆ. ಎಲ್ಲಿಗೆ ಹೋಗುತ್ತಿದೆ ನಮ್ಮ ಸಮಾಜ ಎಂಬ ಬೇಸರದಿಂದ ಹೇಳುತ್ತೇನೆ. ಅದಕ್ಕಾಗಿ ನಾವು ಅವ್ವ ಪಶಸ್ತಿ ನೀಡಲು ಪಾರಂಭಿಸಿದೇವು. ಜಗತ್ತಿನಲ್ಲಿ ಬೇರೆ ಬೇರೆ ಭಾಷೆಯ ಅತ್ಯಂತ ಶೇಷ್ಠ ತಾಯಿಯ ಬಗ್ಗೆ ಇರುವ ಕವನಗಳನ್ನು ಸಂಕಲನ ಮಾಡಿದ್ದೇವೆ. ಶ್ರೇಷ್ಠ ತಾಯಿಯ ಬಗ್ಗೆ ಇರುವ ಕಥೆಗಳ ಸಂಕಲನ ಮಾಡಿದ್ದೇವೆ. ಆತ್ಮಕಥೆಗಳಲ್ಲಿ ಅವ್ವ ಪುಸ್ತಕ ಮಾಡಿದ್ದೇವೆ. ಹಿಟ್ಲರನ ಆತ್ಮಕಥೆಯಲ್ಲಿ ಅವ್ವ, ಗಾಂಧೀಜಿಯ ಆತ್ಮಕತೆಯಲ್ಲಿ ತಾಯಿ ಬರುತ್ತಾರೆ. ಜಾನಪದದಲ್ಲಿ ಅವ್ವ. ನಾಟಕದಲ್ಲಿ ಅವ್ವ, ಸಾಮಾನ್ಯರ ಅಸಾಮಾನ್ಯ ಅವ್ವ, ರಿಕ್ಷಾ ಹೊಡೆಯುವವನು, ಎತ್ತಿನ ಬಂಡಿ ಹೊಡೆಯುವವನು ದೇವದಾಸಿ ತಮ್ಮ ತಾಯಿಯ ಬಗ್ಗೆ ತನ್ನ ಅನುಭವ ಹೇಳಿಕೊಂಡಿದ್ದಾರೆ. ಅಂತ ಕ್ಲಿಷ್ಟವಾಗಿರುವ ಬದುಕು ಅಂತವರ ಅವ್ವನ ಬಗ್ಗೆ ಪುಸ್ತಕ ಹೊರ ತಂದದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಅನೇಕ ಗಣ್ಯರು ಇದ್ದರು.ಈ ಸಂದರ್ಭದಲ್ಲಿ ಶರೀಫ್ ಮಾಕಪ್ಪನವರ ಅವರಿಗೆ ಜಾನಪದ ಸಿರಿ ಹಾಗೂ ನವ್ಯಾ ಕತ್ತಿ ಅವರಿಗೆ ಅರಳು ಮೊಗ್ಗು ಪ್ರಶಸ್ತಿ ನೀಡಿ ಗೌರವಿಸಲಾಯಿತು.