ಕನ್ನಡಪ್ರಭ ವಾರ್ತೆ ಮದ್ದೂರು

ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಬೇರ್ಪಡೆಯಾಗಿದ್ದ ದಂಪತಿ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಬುದ್ಧಿ ಮಾತಿಗೆ ತಲೆಬಾಗಿ ಮತ್ತೆ ಒಂದಾದ ಪ್ರಸಂಗ ಜರುಗಿತು.

ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಸೌಮ್ಯಶ್ರೀ ಹಾಗೂ ನಾಗಮಂಗಲ ಟೌನ್ ನ ಮೋಹನ್ ಅವರು ತಮ್ಮ ಮಗಳು ಪರಿಣಿತಾಳ ಭವಿಷ್ಯದ ದೃಷ್ಟಿಯಿಂದ ಒಂದಾಗಿ ಬಾಳ್ವೆ ನಡೆಸಲು ಸಮ್ಮತಿ ಸೂಚಿಸಿದರು.

ಸೌಮ್ಯಶ್ರೀ ಮತ್ತು ಮೋಹನ್ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ದಾಂಪತ್ಯ ಕಲಹದಿಂದ ಇಬ್ಬರೂ ಬೇರ್ಪಡೆಗೊಂಡಿದ್ದರು. ಆನಂತರ ಸೌಮ್ಯಶ್ರೀ ಪತಿ ಮೋಹನ್ ವಿರುದ್ಧ ಜೀವನಾಂಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿ ಜೆಎಂಎಫ್‌ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡಿದ್ದರು.

ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಪ್ರಕರಣದ ವಿಚಾರಣೆ ನಡೆದು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ. ಗೋಪಾಲಕೃಷ್ಣ ಅವರು ನಿಮ್ಮ ಮತ್ತು ಮಗಳ ಮುಂದಿನ ಭವಿಷ್ಯ ದೃಷ್ಟಿಯಿಂದ ಒಂದಾಗಿ ಬಾಳ್ವೆ ನಡೆಸುವಂತೆ ನೀಡಿದ ಸಲಹೆಗೆ ಸಹಮತ ವ್ಯಕ್ತಪಡಿಸಿದ ದಂಪತಿಗಳು ರಾಜಿ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದರು.


ನಂತರ ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರು, ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಮ್ ದೇವಿಡ್, ಕಪನಿ ನಂಜೇಶ್ವರ, ತಮ್ಮ ಪರ ವಕೀಲ ರಾಜೇಗೌಡ, ಎದುರುದಾರ ವಕೀಲ ಕೆ.ಸ್ವಾಮಿ, ಸಂಧಾನಕಾರ ವಕೀಲ ಎಂ.ಡಿ.ಯಶವಂತ್ ಹಾಗೂ ನ್ಯಾಯಾಲಯದ ಸಿಬ್ಬಂದಿ ಸಮ್ಮುಖದಲ್ಲಿ ದಂಪತಿಗಳು ಪರಸ್ಪರ ಮಾಲಾರ್ಪಣೆ ಮಾಡಿಕೊಂಡು ಪುತ್ರಿ ಪರಿಣಿತಾಳ ಕೈ ಹಿಡಿದುಕೊಂಡು ನಗುಮುಖದಿಂದ ನ್ಯಾಯಾಲಯದಿಂದ ನಿರ್ಗಮಿಸಿದರು.ಲೋಕ ಅದಾಲತ್ ನಲ್ಲಿ 409 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ

ಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದ ಜೆಎಂಎಫ್‌ಸಿ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 409 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿದ ನ್ಯಾಯಾಧೀಶರು 7.43 ಲಕ್ಷಕ್ಕೂ ಮೀರಿ ಪರಿಹಾರಕ್ಕೆ ಆದೇಶ ನೀಡಿದರು.

ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ನಡೆದ ಲೋಕ ಅದಾಲತ್ ನಲ್ಲಿ 216 ಐಪಿಸಿ, 84 ಚೆಕ್ ಬೌನ್ಸ್, 52 ಅಪಘಾತ ಪ್ರಕರಣ ಹಾಗೂ 57 ಸಿವಿಲ್ ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಿದ ನ್ಯಾಯಾಧೀಶರುಗಳು ಕಕ್ಷಿದಾರರಿಗೆ 7,43,80,32 ಲಕ್ಷ ರು ಪರಿಹಾರಕ್ಕೆ ಆದೇಶ ನೀಡಿದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 44, ಒಂದನೇ ಅಪರ ಹಿರಿಯಸಿವಿಲ್ ನ್ಯಾಯಾಲಯದಲ್ಲಿ 38, ಎರಡನೇಅಪರ ಸಿವಿಲ್ ನ್ಯಾಯಾಲಯದಲ್ಲಿ 51, ಮೂರನೇ ಅಪರ ಸಿವಿಲನ್ಯಾಯಾಲಯದಲ್ಲಿ 57 ಹಾಗೂ ನಾಲ್ಕನೇ ಸಿವಿಲ್ ನ್ಯಾಯಾಲಯ 24 ಸೇರಿದಂತೆ ಒಟ್ಟು 409 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಎನ್.ಬಿ.ಮೋಹನ್ ಕುಮಾರಿ, ಎಸ್.ಸಿ.ನಳಿನ, ಸಿ.ಎಂ.ಪಾರ್ವತಿ, ಕೆ.ಗೋಪಾಲಕೃಷ್ಣ ಅವರುಗಳು ತಮ್ಮ ವ್ಯಾಪ್ತಿಯ ನ್ಯಾಯಾಲಯಗಳ ಪ್ರಕರಣಗಳನ್ನು ರಾಜಿ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಉಭಯ ಕಕ್ಷಿದಾರರುಗಳಿಗೆ ಮನವರಿಕೆ ಮಾಡುವ ಮೂಲಕ ವಿವಾದಗಳನ್ನು ಬಗೆಹರಿಸಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಸುಮಂತ್, ಸಹಾಯಕಸರ್ಕಾರಿ ಅಭಿಯೋಜಕರಾದ ಪ್ರೀತಮ್ ದೇವಿಡ್, ಕಪನಿ ನಂಜೇಶ್ವರ ಮತ್ತು ವಕೀಲರುಗಳು ಲೋಕ ಅದಾಲತ್ ನಲ್ಲಿ ಪಾಲ್ಗೊಂಡಿದ್ದರು.