ಸಾರಾಂಶ
ಕನ್ನಡಪ್ರಭವಾರ್ತೆ ಜಗಳೂರು
ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅರಣ್ಯದಲ್ಲಿ ವನ್ಯಜೀವಿ ಭಕ್ಷಕರು ಹಾಗೂ ಕಾಡಂಚಿನ ಬೇಟೆಗಾರರು ಹಂದಿ ಮತ್ತಿತರ ಕಾಡುಪ್ರಾಣಿಗಳನ್ನು ಕೊಲ್ಲಲು ಇರಿಸಿದ್ದ ಕಚ್ಚಾಬಾಂಬ್ ಸಿಡಿದು ಹಸುವೊಂದು ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಗೋಡೆ ಗ್ರಾಮದ ರೈತ ರಂಗನಾಥ ಎಂಬವರು ಕೊಂಡುಕುರಿಯ ಕಾಡಂಚಿನಲ್ಲಿ ಹಸು ಮತ್ತು ದನಗಳನ್ನು ಮೇಯಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಹಸು ಇದ್ದಕಿದ್ದಂತೆ ಪಕ್ಕದಲ್ಲಿದ್ದ ಮಾಂಸದ ಮುದ್ದೆ ಮೂಸಿ ನೋಡಿ ತಿನ್ನಲು ಬಾಯಿ ಹಾಕಿದಾಗ ಇದ್ದಕ್ಕಿದ್ದಂತೆ ಕಚ್ಚಾಬಾಂಬ್ ಸಿಡಿದು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಮಾರಣಾಂತಿಕವಾಗಿ ಗಾಯಗೊಂಡ ಹಸು ರಕ್ತ ಸುರಿಯಲು ಶುರುವಾಗಿದ್ದು ಹೇಗೊ ಕಷ್ಟ ಪಟ್ಟು ರಂಗನಾಥ್ ಹಸುವನ್ನು ಮನೆಗೆ ತಲುಪಿಸಿದ್ದಾರೆ. ನಂತರ ದೇವಿಕೆರೆಯ ಪಶುವೈದ್ಯರಿಗೆ ಕರೆ ಮಾಡಿ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾರೆ. ಸಿಡಿಮದ್ದು ಸಿಡಿದು ಗಾಯಗೊಂಡ ವಿಚಾರವನ್ನು ತಿಳಿದ ವೈದ್ಯರು ಹಾರಿಕೆಯ ಉತ್ತರ ನೀಡಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಸಾವು ಬುದುಕಿನ ಮಧ್ಯೆ ಹೋರಾಟ ಮಾಡಿ ನೋವಿನಿಂದ ನರಳಿ ನರಳಿ ಮೂಕಪ್ರಾಣಿ ಹಸು ಮೃತಪಟ್ಟಿದೆ. ವಿಷಯ ತಿಳಿದು ಸೋಮವಾರ ರಂಗಯ್ಯನದುರ್ಗ ಕೊಂಡುಕುರಿ ವಲಯ ಅರಣ್ಯಾಧಿಕಾರಿ ಜ್ಯೋತಿ ಮೆಣಸಿನಕಾಯಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಪ್ರಕರಣ ದಾಖಲಿಸದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಾಂಬ್ ಪತ್ತೆದಳದ ತಜ್ಞರ ಪರಿಶೀಲನೆಕೊಂಡುಕುರಿ ಅಭಯಾರಣ್ಯ ಪ್ರದೇಶದಿಂದ ೫೦ ಮೀ. ದೂರದಲ್ಲಿ ಕಚ್ಚಾ ಬಾಂಬ್ ಸ್ಪೋಟವಾಗಿದೆ. ಈಗಾಗಲೇ ಹುಬ್ಬಳ್ಳಿಯಿಂದ ಬಾಂಬ್ ಪತ್ತೆದಳದ ತಜ್ಞರು ಬಂದು ಪರಿಶೀಲಿಸಿದ್ದಾರೆ. ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪ್ಪಿತಸ್ಥರ ಪತ್ತೆಗೆ ಬಲೆ ಬೀಸಿದ್ದೇವೆ. ಪ್ರಕರಣದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗುವುದು. ಕೊಂಡುಕುರಿ ನಿಷೇಧಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹೇಗೆ ಬಂತು ಎಂಬುದರ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ವನ್ಯಜೀವಿ ಅರಣ್ಯ ಸಂರಕ್ಷಣಾಧಿಕಾರಿ ಜ್ಯೋತಿ ಮೆಣಸಿನಕಾಯಿ ಮತ್ತು ಡಿಆರ್ಎಫ್ ಸತೀಶ್ ಪ್ರತಿಕ್ರಿಯೆ ನೀಡಿದರು. ಅರಣ್ಯ ಅಧಿಕಾರಿಗಳು ವಿಫಲ
ವನ್ಯಜೀವಿ ಭೇಟೆಗಾರರು ಕಚ್ಚಾಬಾಂಬ್ ಹುದುಗಿಸಿಟ್ಟು ಹಸುವಿನ ಸಾವಿಗೆ ಕಾರಣರಾಗಿದ್ದಾರೆ. ಕೂಡಲೇ ಪ್ರಕರಣ ದಾಖಲು ಮಾಡಿಕೊಂಡು ಸೂಕ್ತ ತನಿಖೆ ನಡೆಸಿ ಆರೋಪಿತರಿಗೆ ಶಿಕ್ಷೆ ಕೊಡಿಸಬೇಕು. ಇಲ್ಲವಾದರೆ ಕೊಂಡುಕುರಿ ಅಭಯಾರಣ್ಯ ಸಂರಕ್ಷಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನೆ ನಡೆಸಲಾಗುವುದು ಎಂದು ಅರಣ್ಯ ವ್ಯಾಪ್ತಿಯ ಗ್ರಾಮದ ಹೋರಾಟಗಾರ ಡಿಎಸ್ಎಸ್ ತಾಲೂಕು ಸಂಚಾಲಕ ಮಲೆಮಾಚಿಕೆರೆ ಸತೀಶ್ ಆಗ್ರಹಿಸಿದ್ದಾರೆ. ಕಚ್ಚಾಬಾಂಬ್‌ಗೆ ಬಲಿಯಾದರೆ ಯಾರು ಹೊಣೆಕಚ್ಚಾಬಾಂಬ್ ಸ್ಪೋಟದಿಂದ ಕೂದಲೆಳೆ ಅಂತರದಲ್ಲಿ ದುರ್ಘಟನೆಯಿಂದ ಪಾರಾದ ರೈತ ರಂಗನಾಥ್ ಪ್ರತಿಕ್ರಿಯೆ ನೀಡಿ, ಅದೃಷ್ಟವಶಾತ್ ನಾನು ಸಾಕಿದ ಹಸು ಕೂದಲೆಳೆ ಅಂತರದಲ್ಲಿ ನನ್ನನ್ನು ಪ್ರಾಣಾಪಯದಿಂದ ಪಾರು ಮಾಡಿದೆ. ಕುರಿ ದನ ಮೇಯಿಸುವವರು ಕಾಡಂಚಿನಲ್ಲಿ ಕಟ್ಟಿಗೆ ತರಲು ಜನರು ಹೋಗುತ್ತಾರೆ. ಅವರು ಕಚ್ಚಾಬಾಂಬ್ ಗೆ ಬಲಿಯಾದರೆ ಅವರ ಜೀವಗಳಿಗೆ ಹೊಣೆ ಯಾರು? ಎಂದು ಪ್ರಶ್ನಿಸಿದರು.