ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ನೆಹರು ಅವರಿಂದ ಹಿಡಿದು ರಾಜೀವ್ ಗಾಂಧಿವರೆಗೂ ಅಧಿಕಾರ ನಡೆಸಿದ ವಂಶಸ್ಥರು ಇವತ್ತು ಗೆಲುವು ಕಾಣಲು ಕೇರಳದ ವಯನಾಡುಗೆ ಏಕೆ ಹೋಗಿದ್ದಾರೆ ಎಂಬುದನ್ನು ಕಾಂಗ್ರೆಸ್ ಪಕ್ಷದವರು ಅರಿಯಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಕುರಿತು ಮಾಜಿ ಪ್ರಧಾನಿಗಳಾದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎರಡು ರಾಜಕೀಯ ಪಕ್ಷಗಳ ನಡುವೆ ಧರ್ಮಯುದ್ಧ ನಡೆಯುತ್ತಿದೆ. ಒಂದು ಕಡೆ ಎನ್‌ಡಿಎ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಇದ್ದರೆ, ಪ್ರತಿಸ್ಪರ್ಧಿ ಐಎನ್‌ಡಿಎ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದು ಅವರಿಗೇ ತಿಳಿಯದಾಗಿದೆ. ಡಿ.ಕೆ. ಶಿವಕುಮಾರ್ ರವರು ಖರ್ಗೆಯವರು ಪ್ರಧಾನಿ ಆಗಲಿದ್ದಾರೆ ಎಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಎಂದು ಟೀಕಿಸಿದರು.
ಐಎನ್‌ಡಿಎ ಒಕ್ಕೂಟಕ್ಕೆ ಸೇರಿದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರವರು ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಹೇಳಿದ್ದಾರೆ. ಅವರ ಉದ್ಧಟತನದ ಹೇಳಿಕೆಯನ್ನು ಖಂಡಿಸುವ ಧೈರ್ಯವನ್ನು ಕಾಂಗ್ರೆಸ್ ಪಕ್ಷದ ಮಹಾನ್ ನಾಯಕರು ಮೊದಲು ತೋರಿಸಲಿ. ರಾಜ್ಯದ ನೀರಾವರಿಗೆ ಯಾವುದೇ ಶಾಶ್ವತ ಪರಿಹಾರ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಐದು ಗ್ಯಾರಂಟಿಗಳಲ್ಲಿ ಒಂದೇ ಒಂದು ರೈತರಿಗೆ ಗ್ಯಾರಂಟಿ ಯೋಜನೆ ತಂದಿಲ್ಲ. ಆದರೆ, ಕುಮಾರಸ್ವಾಮಿ ಪಂಚರತ್ನ ಯೋಜನೆ ಮೂಲಕ ರಾಜ್ಯದ ಶಾಶ್ವತ ನೀರಾವರಿಗೆ ಯೋಜನೆ ರೂಪಿಸಿದ್ದರು. ಇವರು ಶಾಶ್ವತ ನೀರಾವರಿಗೆ ಯಾವ ಯೋಜನೆ ತಂದಿದ್ದಾರೆ ತಿಳಿಸಲಿ ಎಂದು ಸವಾಲು ಹಾಕಿದರು.ಈ ರಾಜ್ಯದ ಸಂಪತ್ತು ಆರೂವರೆ ಕೋಟಿ ಜನರಿಗೆ ಸೇರಿದ್ದು, ಆದರೆ ಇವರು ರಾಜ್ಯವನ್ನು ಲೂಟಿ ಮಾಡಿ ಒಬ್ಬ ನಗರಸಭಾ ಸದಸ್ಯನಿಗೆ 1 ರಿಂದ 50 ಲಕ್ಷ ರು. ಕಾಮಗಾರಿ ನೀಡುವ ಆಸೆ ತೋರಿಸಿ ಖರೀದಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಹಾನ್ ನಾಯಕರು ಮುಖಂಡರನ್ನು ಖರೀದಿ ಮಾಡಬಹುದೇ ಹೊರತು ಕ್ಷೇತ್ರದ ಎಲ್ಲಾ ಮತದಾರರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಇಲ್ಲಿಂದ ಬಾಚಿಕೊಂಡ ಹಣವನ್ನು ಮೂರು ರಾಜ್ಯಗಳ ಉಸ್ತುವಾರಿ ವಹಿಸಿಕೊಂಡು ಹಂಚಿದರೂ ಅಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ದೇವೇಗೌಡರು ಪರೋಕ್ಷವಾಗಿ ಟಾಂಗ್ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಈ ಚುನಾವಣೆ ಸ್ವಾಭಿಮಾನ ಹಾಗೂ ಧರ್ಮ- ಅಧರ್ಮದ ನಡುವೆ ನಡೆಯುತ್ತಿದೆ. ಕ್ಷೇತ್ರದ ಮತದಾರರು ನಿರ್ಭೀತಿಯಿಂದ ಮತ ಚಲಾವಣೆ ಮಾಡುವ ಮೂಲಕ ಕನಕಪುರ ಕ್ಷೇತ್ರಕ್ಕೆ ಅಂಟಿರುವ ಕಳಂಕವನ್ನು ತೊಡೆದು ಹಾಕುವಂತೆ ಕರೆ ನೀಡಿದರು.ಡಿಕೆ ಸಹೋದರರಿಗೆ ಹಣದ ಮದವೇರಿದ್ದು ಅಹಂಕಾರ ಅವರ ತಲೆ ತುಂಬಿ ಎಲ್ಲರನ್ನು ದುಡ್ಡಿನಿಂದಲೇ ಖರೀದಿ ಮಾಡುತ್ತೇವೆಂಬ ಅಹಂ ಇಳಿಸುವ ಜವಾಬ್ದಾರಿ ಈ ಕ್ಷೇತ್ರದ ಜನರ ಕೈಯಲ್ಲಿದೆ. ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಸಹಸ್ರಾರು ಜನರಿಗೆ ಹೃದಯ ಚಿಕಿತ್ಸೆ ಮಾಡಿ ಅವರ ಜೀವ ,ಜೀವನವನ್ನು ಉಳಿಸಿರುವ ಮಂಜುನಾಥ್ ರವರು ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿಯಾಗಿದ್ದಾರೆ. ರಾಜಕೀಯ ಅವರಿಗೆ ಹೊಸದಿರಬಹುದು ಆದರೆ ಜನ ಸಾಮಾನ್ಯರ ಒಡನಾಟ ಅವರಿಗೆ ಬಹಳ ಹತ್ತಿರವಾಗಿದೆ. ಕ್ಷೇತ್ರದ ಮತದಾರರು ಅವಕಾಶ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ನಿಮ್ಮೆಲ್ಲರ ಆಶೀರ್ವಾದ ಅವರಿಗೆ ಬೇಕಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಎಂಎಲ್ಸಿ ಅ.ದೇವೇಗೌಡ, ಮಾಜಿ ಶಾಸಕ ಎ. ಮಂಜು, ನಿಖಿಲ್ ಕುಮಾರ್ ಸ್ವಾಮಿ, ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಪಕ್ಷದ ಮುಖಂಡರಾದ ಸುಧಾಕರ್, ಬಾಲನರಸಿಂಹಯ್ಯ, ಕಬ್ಬಾಳೇಗೌಡ, ಪಂಚಲಿಂಗೇಗೌಡ, ಸಿದ್ದ ಮರೀಗೌಡ, ಜ್ಯೋತಿ ಪ್ರಕಾಶ್ ಮಿರ್ಜಿ, ಡಾ.ಪುಣ್ಯವತಿ, ಯುವ ಮುಖಂಡ ಪುಟ್ಟರಾಜು, ಚಿನ್ನಸ್ವಾಮಿ,ಭರತ್ ಬಾಲನರಸಿಂಹಯ್ಯ, ಸಮಾಜ ಸೇವಕ ಅನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜಿಲ್ಲಾ ಮುಖಂಡ ಶಿವಮಾದು, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಬೊಮ್ಮನಹಳ್ಳಿ ಕುಮಾರ್, ನಗರ ಮಂಡಲ ಅಧ್ಯಕ್ಷ ಮಂಜುನಾಥ್,ಬಿಜೆಪಿ ಜಿಲ್ಲಾ ರೈತಾ ಮೋರ್ಚಾ ಪ್ರ. ಕಾರ್ಯದರ್ಶಿ ನಾಗನಂದ್, ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳೀಧರ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್, ತಾಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಮುತ್ತು, ಯುವ ಮೋರ್ಚಾ ಅಧ್ಯಕ್ಷ ಸುನೀಲ್, ಶೇಖರ್, ರಾಮಕೃಷ್ಣ,ಗೋಪಾಲ್, ಭರತ್, ಮಹಿಳಾ ಘಟಕದ ಪವಿತ್ರ, ಶ್ರೀವಳ್ಳಿ, ವರಲಕ್ಷ್ಮಿ, ತಹಸೀನಾ ಖಾನ್ ಉಪಸ್ಥಿತರಿದ್ದರು.ತೋಳ್ಬಲ, ಹಣಬಲದ ಆಮಿಷವೊಡ್ಡಿ ಗೆಲ್ಲಲು ಸಾಧ್ಯವಿಲ್ಲ:
ಕನಕಪುರ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಡಿ.ಕೆ.ಸುರೇಶ್ ಸಂಸದರಾದ ಅವಧಿಯಲ್ಲಿ ಅವರು ಹಾಗೂ ಅವರ ಹಿಂಬಾಲಕರು ನಡೆದುಕೊಂಡ ರೀತಿಯಿಂದ ಬಹಳಷ್ಟು ಜನರು ಬೇಸತ್ತಿದ್ದಾರೆ. ಚುನಾವಣೆ ಅವರು ಅಂದುಕೊಂಡ ರೀತಿಯಲ್ಲಿ ತೋಳ್ಬಲ, ಹಣಬಲದ ಮೂಲಕ ಮತದಾರರಿಗೆ ಆಮಿಷವೊಡ್ಡಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂದುಕೊಂಡಿದ್ದಾರೆ. ಅದು ಅವರ ಭ್ರಮೆಯಾಗಿದ್ದು ಅವೆಲ್ಲವೂ ಮೀರಿದಂತೆ ಚುನಾವಣೆ ನಡೆಯಲಿದೆ. ಜನರೇ ಸ್ವಯಂಪ್ರೇರಿತರಾಗಿ ಬೀದಿಗೆ ಬಂದು ಪಕ್ಷಾತೀತವಾಗಿ ಮತ ಕೇಳುತ್ತಿರುವುದನ್ನು ನೋಡಿದರೆ ನಾವು ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಡಿ.ಕೆ ಸಹೋದರರು ಸರ್ಕಾರದ ಮುಖಾಂತರ ಅವರ ಆಸ್ತಿಯನ್ನು ಎಷ್ಟು ವೃದ್ಧಿ ಮಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಂಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಯವರನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತಹ ಕೆಲಸ ಮಾಡುತ್ತಿರುವುದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಯೋಗೇಶ್ವರ್ ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಒಂದೇ ಒಂದು ಅಸತ್ಯ ನುಡಿದಿಲ್ಲ. ನನ್ನ ಅಳಿಯನನ್ನು ರಾಜಕೀಯಕ್ಕೆ ತರಲು ನನಗೆ ಇಷ್ಟವಿರಲಿಲ್ಲ. ಆದರೆ, ನರೇಂದ್ರ ಮೋದಿ ಹಾಗೂ ಅಮಿತ್ ಶಾರವರು ಡಾ. ಮಂಜುನಾಥ ಸೇವೆ ದೇಶಕ್ಕೆ ಬೇಕಾಗಿದೆ ಎಂಬ ಒತ್ತಾಯದ ಮೇರೆಗೆ ಈ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಇದೇ ಡಿ.ಕೆ.ಶಿವಕುಮಾರ್ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾದ ಸಮಯದಲ್ಲಿ ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆಯ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಮಾಡದಂತೆ ತಡೆಯೊಡ್ಡಿದ್ದನ್ನು ಜನತೆ ಮರೆಯಬಾರದು.-ದೇವೇಗೌಡ, ಮಾಜಿ ಪ್ರಧಾನಿ