ಸಾರಾಂಶ
ಮನೆ ತಲುಪುತ್ತಿದ್ದಂತೆಯೇ ನಾರಾಯಣ ಅಚ್ಚರಿಯಾಗಿ ಉಸಿರಾಟ ಆರಂಭಿಸಿದರು. ತಕ್ಷಣ ಕುಟುಂಬಸ್ಥರು ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗದಗ: ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ ನಂತರ ಆಸ್ಪತ್ರೆಯಿಂದ ಮರಳಿ ಮನೆಗೆ ಬರುವ ವೇಳೆಯಲ್ಲಿ ಮೃತಪಟ್ಟ ವ್ಯಕ್ತಿ ಮತ್ತೆ ಜೀವಂತ ಇರುವ ಅಚ್ಚರಿ ಘಟನೆ ಶುಕ್ರವಾರ ಸಂಜೆ ಬೆಟಗೇರಿಯಲ್ಲಿ ನಡೆದಿದೆ.
ಪಿತ್ತಕೋಶದ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಟಗೇರಿ ನಿವಾಸಿ ಶಸ್ತ್ರ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಮನೆಗೆ ತರುವ ವೇಳೆ ಮತ್ತೆ ಉಸಿರಾಡುವ ಮೂಲಕ ಎಲ್ಲರಿಗೂ ಅಚ್ಚರಿಗೊಳಿಸಿದ್ದಾರೆ. ಬೆಟಗೇರಿ ನಿವಾಸಿ ನಾರಾಯಣ ವನ್ನಾಲ್(38) ಅವರು ಪಿತ್ತಕೋಶದ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು.ಆರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ನಾರಾಯಣ ವನ್ನಾಲ್ ಪ್ರಾಣ ಹೋಗಿದೆ ಎಂದು ಘೋಷಿಸಿದ್ದು, ಮೃತದೇಹವನ್ನು ಕುಟುಂಬಸ್ಥರು ಆ್ಯಂಬುಲೆನ್ಸ್‌ನಲ್ಲಿ ಗದುಗಿನ ಬೆಟಗೇರಿಗೆ ಕರೆದುಕೊಂಡು ಬಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು. ಮತ್ತೆ ಹುಟ್ಟಿ ಬಾ, ಆತ್ಮಕ್ಕೆ ಶಾಂತಿ ಸಿಗಲಿ, ಭಾವಪೂರ್ಣ ಶ್ರದ್ಧಾಂಜಲಿ ಎಂಬ ಬ್ಯಾನರ್‌ಗಳು ಊರಿನಲ್ಲಿ ಹಾಕಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ನಾರಾಯಣ ಅವರ ನಿಧನ ಸುದ್ದಿ ವೈರಲ್ ಆಗಿತ್ತು.
ಆದರೆ ಮನೆಗೆ ತಲುಪುತ್ತಿದ್ದಂತೆಯೇ ನಾರಾಯಣ ಅಚ್ಚರಿಯಾಗಿ ಉಸಿರಾಟ ಆರಂಭಿಸಿದರು. ತಕ್ಷಣ ಕುಟುಂಬಸ್ಥರು ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಚ್ಚರಿಯ ಘಟನೆಯಿಂದ ಗದಗ- ಬೆಟಗೇರಿಯಲ್ಲಿ ಸಂಚಲನ ಮೂಡಿದೆ. ಇದು ದೇವರ ಪವಾಡ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.