ಯುವಜನಾಂಗವಾಗಲಿ, ಅವರ ಪಾಲಕರಾಗಲಿ ತಮ್ಮ ಮಕ್ಕಳಿಗೆ ನೌಕರಿಯನ್ನೇ ಬಯಸುತ್ತಾರೆ. ಎಲ್ಲರಿಗೂ ನೌಕರಿ ಕೊಡಲು ಆಗುವುದಿಲ್ಲ

ಹಳಿಯಾಳ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜ್ವಲಂತವಾಗಿರುವುದು ನಿಜ, ಆದರೆ ಕೆಲಸಗಳೇ ಇಲ್ಲ ಎನ್ನುವುದು ಸಂಪೂರ್ಣ ಸತ್ಯವಲ್ಲ. ಒಂದೆಡೆ ಪದವೀಧರರು ಕೆಲಸವಿಲ್ಲದೆ ಅಲೆಯುತ್ತಿದ್ದರೆ, ಮತ್ತೊಂದೆಡೆ ಉದ್ಯೋಗದಾತರು ಅರ್ಹ ಅಭ್ಯರ್ಥಿಗಳಿಲ್ಲದೆ ಹುದ್ದೆಗಳನ್ನು ಖಾಲಿ ಇಡುವಂತಹ ವಿಪರ್ಯಾಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಗುರುವಾರ ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿಯವರು ಆಯೋಜಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ 3 ದಿನಗಳ ಉಚಿತ ಸಿದ್ಧತಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೌಕರಿ ಸಿಗುವುದು ಅಸಾಧ್ಯ:

ಯುವಜನಾಂಗವಾಗಲಿ, ಅವರ ಪಾಲಕರಾಗಲಿ ತಮ್ಮ ಮಕ್ಕಳಿಗೆ ನೌಕರಿಯನ್ನೇ ಬಯಸುತ್ತಾರೆ. ಎಲ್ಲರಿಗೂ ನೌಕರಿ ಕೊಡಲು ಆಗುವುದಿಲ್ಲ. ಅದಕ್ಕಾಗಿ ನೌಕರಿಯ ಬದಲು ಸ್ವಯಂ ಉದ್ಯೋಗ ಆರಂಭಿಸಿ ಸ್ವಾವಲಂಬಿ ಬದುಕು ಸಾಗಿಸಲು ಸಾಕಷ್ಟು ಅವಕಾಶಗಳಿವೆ ಎಂದರು.

ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಪದವಿಯನ್ನು ನೀಡುತ್ತಿದೆಯೇ ಹೊರತು ಉದ್ಯೋಗಕ್ಕೆ ಬೇಕಾದ ಕೌಶಲ್ಯವನ್ನು ನೀಡುತ್ತಿಲ್ಲ ಎಂಬ ಅಪವಾದವಿದೆ. ಇದೇ ಉದ್ದೇಶದಿಂದ ಹಳಿಯಾಳದಲ್ಲಿ ಪ್ರಾರಂಭಿಸಿದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯು ವಿವಿಧ ಕೌಶಲ್ಯಾಧಾರಿತ ತರಬೇತಿಯನ್ನು ಉಚಿತವಾಗಿ ನೀಡುವ ಮೂಲಕ ಸಾವಿರಾರು ಯುವಕರ ಬದುಕನ್ನು ಕಟ್ಟಿದೆ ಎಂದರು.

ಈ ಸಂಸ್ಥೆಯಲ್ಲಿ ಈವರೆಗೆ 29 ಸಾವಿರಕ್ಕಿಂತ ಹೆಚ್ಚು ಯುವಜನರು ತರಬೇತಿ ಪಡೆದಿದ್ದು, ಅದರಲ್ಲಿ ಶೇ.78ರಷ್ಟು ಯುವಕರು ಸ್ವಯಂ ಉದ್ಯೋಗ ಆರಂಭಿಸುವ ಮೂಲಕ ಬೇರೆಯವರಿಗೂ ಉದ್ಯೋಗ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

ಸಮಗ್ರ ಓದಿಗೆ ಒತ್ತು ನೀಡಿ: ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ವಿ.ಆರ್.ಡಿ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಠಿಣ ಸವಾಲು. ಇಲ್ಲಿ ಒಂದೇ ವಿಷಯದತ್ತ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಬೇಕಾಗುತ್ತದೆ ಎಂದರು. ಮೊದಲ ಬಾರಿಗೆ ಸರ್ಕಾರವು ಸಾಕಷ್ಟು ಉದ್ಯೋಗಗಳಿಗೆ ಕರೆ ನೀಡುವ ಮೂಲಕ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗಿಸಲು ಮೂರು ದಿನಗಳ ಉಚಿತ ತರಬೇತಿ ಆಯೋಜಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಈಗ ತರಬೇತಿಯನ್ನು ನೀಡಲಾಗುತ್ತಿದೆ. ಮೂರು ದಿನಗಳ ಶಿಬಿರದಲ್ಲಿ ಒಂದು ದಿನ ಅಣುಕು ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದರು. ತರಬೇತಿ ನೀಡಿದರೆ ಮಾತ್ರ ಸಾಲದು ಎಂಬ ಉದ್ದೇಶದಿಂದ ನಾವು ಫಾಲೋಅಪ್ ಯೋಜನೆಯನ್ನು ಹೊಂದಿದ್ದೆವೆ, ತರಬೇತಿ ಪಡೆದವರ ವ್ಯಾಟ್ಸ್ ಅ್ಯಪ್ ನಂಬರ್ ಸಂಗ್ರಹಿಸಿ ಅವರ ಗ್ರೂಫ್‌ ಮಾಡಿ ಅವರಿಗೆ ನಮ್ಮ ಶಿಬಿರ ಸಂಪನ್ಮೂಲ ವ್ಯಕ್ತಿಗಳು ನಿರಂತರವಾಗಿ ಮಾಹಿತಿ ಮಾರ್ಗದರ್ಶನ ಮಾಡಲಿದ್ದಾರೆ ಎಂದರು.

ಕಿಚ್ಚು, ಹುಚ್ಚು ಇದ್ದರೆ ಯಶಸ್ಸು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಂಕಣಕಾರ ಆರ್.ಕೆ. ಬಾಲಕೃಷ್ಣ ಮಾತನಾಡಿ, "ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲ ಮಾಹಿತಿಯು ಸುಲಭವಾಗಿ ಸಿಗುತ್ತಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ತಾಳ್ಮೆ, ನಿರಂತರ ಪ್ರಯತ್ನ ಅಗತ್ಯವಾಗಿದೆ ಎಂದರು.

ಪ್ರಸ್ತುತ ಸ್ಪರ್ಧೆ ತೀವ್ರವಾಗಿದ್ದು, ಒಂದು ಹುದ್ದೆಗೆ ಅನೇಕರು ಅರ್ಜಿ ಹಾಕುತ್ತಾರೆ. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡುವೆನು ಎಂಬ ಕಿಚ್ಚು ನಿಮ್ಮಲ್ಲಿ ಮೊದಲು ಮನೆ ಮಾಡಬೇಕು. ಇದರಲ್ಲಿ ಜಯಶಾಲಿಯಾಗುವೆನೆಂಬ ಹುಚ್ಚು ನಿಮ್ಮ ತಲೆಯಲ್ಲಿದ್ದರೆ ಯಶಸ್ಸು ಸಾಧ್ಯ ಎಂದರು.

ಸಂಸ್ಥೆಯ ಯೋಜನಾಧಿಕಾರಿ ವಿನಾಯಕ ಚವ್ಹಾಣ ಹಾಗೂ ವಿರೇಶ ತಾಳಿಕೋಟಿ ಮತ್ತು ತರಬೇತಿ ಅಧಿಕಾರಿ ಸಂಜೀವ ವರ್ಮಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.