ಬುದ್ದ ಗಯಾದ ಆಡಳಿತ ಬೌದ್ಧರಿಗೆ ನೀಡಲು ಆಗ್ರಹ

| Published : Nov 27 2024, 01:03 AM IST

ಸಾರಾಂಶ

A demand to give to the ruling Buddhists of Buddha Gaya

-ಚಿತ್ರದುರ್ಗ ಜಿಲ್ಲೆಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಭಾರತೀಯ ಬೌದ್ದ ಮಹಾಸಭಾ ಜಿಲ್ಲಾ ಘಟಕ ನೇತೃತ್ವದಲ್ಲಿ ಪ್ರತಿಭಟನೆ

-----

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಸಂವಿಧಾನ ದಿನಾಚರಣೆ ಪ್ರಯುಕ್ತ ಬೌದ್ದರ ಧಾರ್ಮಿಕ ಹಕ್ಕಿಗಾಗಿ ಬಿ.ಟಿ.ಆಕ್ಟ್ -1949 ರದ್ದುಗೊಳಿಸಿ ಬುದ್ದ ಗಯಾದ ಮಹಾಭೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ದರಿಗೆ ನೀಡುವಂತೆ ಒತ್ತಾಯಿಸಿ ಭಾರತೀಯ ಬೌದ್ದ ಮಹಾಸಭಾ ಜಿಲ್ಲಾ ಘಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಸಭೆಯಲ್ಲಿ ಮಾತನಾಡಿದ ಭಾರತೀಯ ಬೌದ್ದ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಮಹಾ ಬೋಧಿ ದೇವಾಲಯ ಕಾಯ್ದೆ-1949 ಜಾರಿಗೊಳಿಸುವ ಮೂಲಕ ಮನುವಾದಿ ಜನರು ಮಹಾವಿಹಾರವನ್ನು ಅಕ್ರಮವಾಗಿ ಸ್ವಾಧೀನಪಡಿಸಿ ಕೊಂಡಿದ್ದಾರೆ. ಮಹಂತ್ ಬ್ರಾಹ್ಮಣರ ಕೊಠಡಿಯೊಳಗೆ ಅಡಗಿರುವ ಬೌದ್ದ ರಾಜರ ಶಾಸನಗಳ ಜತೆಗೆ ನೂರಾರು ಬುದ್ದನ ವಿಗ್ರಹಗಳನ್ನು ಮುಕ್ತಗೊಳಿಸಬೇಕು. ಜಗನ್ನಾಥ ಮಂದಿರ ನಿರ್ಮಿಸಿರುವ ಮಹಾಬೋಧಿ ಮಹಾವಿಹಾರ ಆವರಣದಲ್ಲಿರುವ ಭೂಮಿಯನ್ನು ಮುಕ್ತಗೊಳಿಸಬೇಕು. ಶಂಕರಚಾರ್ಯರ ಮಠದ ಹೆಸರಿನಲ್ಲಿ ಮಹಾಬೋಧಿ ವಿಹಾರದ ಮುಂಭಾಗ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ವಿಮೋಚನೆ ಗೊಳಿಸಬೇಕೆಂದರು.

ಭಾರತದ ಸಂವಿಧಾನದ ಪ್ರಕಾರ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ. ಹಿಂದೂ ಧಾರ್ಮಿಕ ಕ್ಷೇತ್ರಗಳ ಕಾನೂನು ಪ್ರಕಾರ ಕೇವಲ ಹಿಂದೂಗಳು ಮಾತ್ರ ಆಡಳಿತ ಮಂಡಳಿ ಸದಸ್ಯರಾಗಿರುತ್ತಾರೆ. ಆದರೆ, ಭೋದಗಯಾ ಟೆಂಪಲ್ ಆಕ್ಟ್-1949ರ ಪ್ರಕಾರ ಬೌದ್ದರಿಗೆ ತಮ್ಮ ದೇವಾಲಯದ ನಿರ್ವಹಣೆ ಮಾಡಲು ಅಧಿಕಾರವಿಲ್ಲ. ಬುದ್ದವಿಹಾರ ಹಿಂದೂಗಳ ನಿಯಂತ್ರಣದಲ್ಲಿದೆ. ಇದು ಬೌದ್ದಧರ್ಮಿಯರ ಹಾಗೂ ಅಂಬೇಡ್ಕರ್ ಅನುಯಾಯಿಗಳ ಹಾಗೂ ಭಾರತದ ಸಂವಿಧಾನವಾದಿ ಪ್ರಗತಿಪರ ಚಿಂತಕರ ಸ್ವಾಭಿಮಾನದ ಪ್ರಶ್ನೆಯಾಗಿದೆ. ದೇಶವನ್ನಾಳುವ ಸರ್ಕಾರಗಳು ನ. 26ರಂದು ಸಂವಿಧಾನ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ದೇಶದ ಬೌದ್ದ ಸಮುದಾಯ ಮತ್ತು ಅಂಬೇಡ್ಕರ್ ಅನುಯಾಯಿಗಳು ಸಂವಿಧಾನ ದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.

ಬೌದ್ದರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ, ಸಂವಿಧಾನದ ಕಲಂ:3, 25, 26 ಮತ್ತು 29ನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ.ಆಕ್ಟ್ 1949ನ್ನು ರದ್ದುಪಡಿಸಿ ಬುದ್ದಗಯಾದ ಮಹಾಭೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ದರಿಗೆ ನೀಡಬೇಕೆಂದು ಒತ್ತಾಯಿಸಿದರು.

ವಕೀಲ ಬೆನಕನಹಳ್ಳಿ ಚಂದ್ರಪ್ಪ ಮಾತನಾಡಿ ಹಿಂದೂಗಳ ಆರಾಧನಾ ಸ್ಥಳದ ಅಧಿಕಾರ ಹಿಂದೂಗಳಿಗೆ, ಮುಸ್ಲಿಂರ ಆರಾಧಾನ ಸ್ಥಳ ಅಧಿಕಾರ ಮುಸ್ಲಿಂರಿಗೆ, ಕ್ರೈಸ್ತರ ಆರಾಧನಾ ಸ್ಥಳ ಅಧಿಕಾರ ಕೈಸ್ತರಿಗೆ. ಆದರೆ, ಬೌದ್ದರ ಆರಾಧನಾ ಸ್ಥಳ ಅಧಿಕಾರವೇಕೆ ಹಿಂದೂಗಳ ಕೈಗೆ? ಎಂದು ಪ್ರಶ್ನಿಸಿದರು. ಬುದ್ದ ಗಯಾದ ಬೌದ್ದವಿಹಾರ ಬೌದ್ದರದು ಎಂದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಪಾಳ್ಯ ಸಿ.ಕುಮಾರ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಮಂಜುನಾಥ್, ಭೀಮಕೆರೆ ಶಿವಮೂರ್ತಿ, ದಲಿತ ಮುಖಂಡ ತುರುವನೂರು ಜಗನ್ನಾಥ್, ಬಿಎಸ್‍ಐ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್.ಎಸ್ ನನ್ನಿವಾಳ, ಈ.ನಾಗೇಂದ್ರಪ್ಪ, ಜೆ.ಎನ್.ಬಸವರಾಜ್ ಜಾಲಿಕಟ್ಟೆ, ಮಂಜುನಾಥ.ಆರ್, ಪಾತಲಿಂಗಪ್ಪ ಇದ್ದರು.

-----------

ಪೋಟೋ: ಬುದ್ದ ಗಯಾದ ಮಹಾಭೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ದರಿಗೆ ನೀಡುವಂತೆ ಒತ್ತಾಯಿಸಿ ಭಾರತೀಯ ಬೌದ್ದ ಮಹಾಸಭಾ ಜಿಲ್ಲಾ ಘಟಕ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.

----

ಫೋಟೋ: 26 ಸಿಟಿಡಿ7