17 ವರ್ಷದ ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ 5 ಕೆಜಿಯ ಬೃಹತ್‌ ಗಡ್ಡೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಜನ್‌ ಡಾ. ಯಲ್ಲಪ್ಪ ಪಾಟೀಲ್ ಅವರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವೈದ್ಯರ ಕಾರ್ಯಕ್ಕೆ ನಗರ ಹಾಗೂ ತಾಲೂಕಿನ ಜನತೆ ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಹಾಪುರ

17 ವರ್ಷದ ಯುವತಿಯ ಹೊಟ್ಟೆಯಲ್ಲಿ ಬೆಳೆದಿದ್ದ 5 ಕೆಜಿಯ ಬೃಹತ್‌ ಗಡ್ಡೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಜನ್‌ ಡಾ. ಯಲ್ಲಪ್ಪ ಪಾಟೀಲ್ ಅವರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವೈದ್ಯರ ಕಾರ್ಯಕ್ಕೆ ನಗರ ಹಾಗೂ ತಾಲೂಕಿನ ಜನತೆ ಅಭಿನಂದಿಸಿದ್ದಾರೆ.

ತಾಲೂಕಿನ ಸಿಂಗನಹಳ್ಳಿ ಗ್ರಾಮದ 17 ವರ್ಷದ ಯುವತಿಯೊಬ್ಬಳು ಹೊಟ್ಟೆಯೂತದ ಸಮಸ್ಯೆಯೊಂದಿಗೆ ಬಳಲುತ್ತಿದ್ದಳು. ಕಡುಬಡತನದಲ್ಲಿ ಜೀವಿಸುತ್ತಿರುವ ಯುವತಿಯ ಪಾಲಕರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಸರ್ಜನ್ ಡಾ. ಯಲ್ಲಪ್ಪ ಪಾಟೀಲ್ ಅವರನ್ನು ಭೇಟಿಯಾಗಿದ್ದರು.

ತಮ್ಮ ಮಗಳು ಸುಮಾರು ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ. ಕಡು ಬಡತನದಲ್ಲಿರುವ ನಾವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನಮ್ಮಿಂದ ಸಾಧ್ಯವಿಲ್ಲ. ಮಗಳಿಗೆ ಚಿಕಿತ್ಸೆ ನೀಡಿ ಎಂದು ಯುವತಿಯ ಪಾಲಕರು ಮನವಿ ಮಾಡಿಕೊಂಡಿದ್ದರು.

ಅವರ ಕಷ್ಟಕ್ಕೆ ಸ್ಪಂದಿಸಿದ ವೈದ್ಯರು ಸ್ಕ್ಯಾನಿಂಗ್ ರಿಪೋರ್ಟ್ ತೆಗೆಸಿ ನೋಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು.

ಡಾ. ಯಲ್ಲಪ್ಪ ಹುಲ್ಕಲ್ ಅವರು ಶಸ್ತ್ರಚಿಕಿತ್ಸೆ ಮೂಲಕ 5 ಕೆಜಿ ಅಂಡಾಶಯ ಗಡ್ಡೆಯನ್ನು ಹೊರ ತೆಗೆದಿದ್ದಾರೆ. ಬಾಲಕಿಗೆ ರಕ್ತ ಕಡಿಮೆ ಇದ್ದುದನ್ನು ಅರಿತ ವೈದ್ಯರು ಎರಡು ಬಾಟಲ್ ರಕ್ತ ಕೊಟ್ಟು 1 ಗಂಟೆ ಕಾಲ ಶಸ್ತ್ರಚಿಕಿತ್ಸೆ ಬಳಿಕ ಗಡ್ಡೆಯನ್ನು ಹೊರತೆಗೆಯಲಾಯಿತು. ಯುವತಿ ಆರಾಮವಾಗಿದ್ದಾಳೆ. ಚಿಕಿತ್ಸೆ ಫಲಕಾರಿಯಾಗಿದೆ ಎಂದು ಪಾಲಕರು ವೈದ್ಯರಿಗೆ ಹಾಗೂ ಅವರ ತಂಡದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವೈದ್ಯರ ಕಾರ್ಯಕ್ಕೆ ಅಭಿನಂದನೆ:

ಬಡವರ ಪಾಲಿಗೆ ಸರ್ಕಾರಿ ದವಾಖಾನೆಗಳು ದೇವಸ್ಥಾನವಿದ್ದಂತೆ. ವೈದ್ಯರು ಮನಸ್ಸು ಮಾಡಿದರೆ ರೋಗಿಗಳ ಜೀವ ಉಳಿಸಬಹುದು ಎನ್ನುವುದಕ್ಕೆ ಇಂದಿನ ಶಸ್ತ್ರ ಚಿಕಿತ್ಸೆ ಉತ್ತಮ ಉದಾಹರಣೆಯಾಗಿದೆ. ಡಾ. ಯಲ್ಲಪ್ಪ ಹಾಗೂ ಅವರ ತಂಡಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಆಸ್ಪತ್ರೆಗೆ ಬರುವ ರೋಗಿಗಳಿಗೆ ತಾಳ್ಮೆ ಇರಲಿ. ಆಸ್ಪತ್ರೆಗೆ ಬರುವ ಕೆಲ ರೋಗಿಗಳ ಹಿಂದಿರುವರು ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಚಿಕಿತ್ಸೆಗೆ ಸಹಕಾರ ನೀಡುವುದಿಲ್ಲ. ವೈದ್ಯರು ರೋಗಿಯ ತಪಾಸಣೆ ಮಾಡುವಾಗ ತಾಳ್ಮೆ ವಹಿಸಬೇಕು. ತಾಳ್ಮೆ ಇದ್ದರೆ ಎಂಥ ರೋಗವನ್ನಾದರೂ ಗುಣಪಡಿಸಲು ವೈದ್ಯರಿಗೆ ಸಹಾಯವಾಗುತ್ತದೆ ಎನ್ನುತ್ತಾರೆ ಹಿರಿಯ ವೈದ್ಯಾಧಿಕಾರಿಯೊಬ್ಬರು.ನಮ್ಮ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳು ಕಡುಬಡವರೆ ಆಗಿರುತ್ತಾರೆ. ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

- ಡಾ. ಯಲ್ಲಪ್ಪ ಪಾಟೀಲ್ ಹುಲ್ಕಲ್, ಆಡಳಿತ ವೈದ್ಯಾಧಿಕಾರಿ ಹಾಗೂ ಸರ್ಜನ್ ಸಾರ್ವಜನಿಕ ಆಸ್ಪತ್ರೆ ಶಹಾಪುರ.

---

ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಅಂಡಾಶಯ ಗಡ್ಡೆಯ ಶಸ್ತ್ರ ಚಿಕಿತ್ಸೆ ಮಾಡಲು ಸುಮಾರು 2 ಲಕ್ಷ ರು.ಗಳು ಖರ್ಚಾಗುತ್ತದೆ. ಬಡವರಾದ ನಾವು ಅಷ್ಟೊಂದು ಹಣ ಒದಗಿಸುವುದು ಹೇಗೆ ಸಾಧ್ಯ. ಬಡವರ ಪಾಲಿಗೆ ಸರಕಾರಿ ಆಸ್ಪತ್ರೆಗಳು ಮತ್ತು ಅಲ್ಲಿನ ವೈದ್ಯರೆ ಜೀವಾಳವಾಗಿದ್ದು, ಡಾ. ಯಲ್ಲಪ್ಪ ಅವರು ನಮ್ಮಂತ ಬಡವರ ಪಾಲಿನ ದೇವರಾಗಿದ್ದಾರೆ. ಅವರಿಂದ ನನ್ನ ಮಗಳ ಜೀವ ಉಳಿದಿದೆ. ಅವರ ಉಪಕಾರ ನಾವು ಮರೆಯುವುದಿಲ್ಲ.

- ಹುಸೇನ್ ಪಾಟೀಲ್ ಸಿಂಗನಹಳ್ಳಿ, ಶಸ್ತ್ರ ಚಿಕಿತ್ಸೆಗೊಳಗಾದ ಯುವತಿಯ ತಂದೆ.