ಬಿತ್ತನೆ ಕಾರ್ಯದಲ್ಲಿ ತೊಡಗಿದ ಅನ್ನದಾತ

| Published : May 29 2024, 12:54 AM IST / Updated: May 29 2024, 12:55 AM IST

ಸಾರಾಂಶ

ಕಳೆದ ವಾರದಿಂದ ಉತ್ತಮ ಮಳೆಯಾದ ಹಿನ್ನೆಲೆ ಭೂಮಿ ಸಂಪೂರ್ಣವಾಗಿ ತಂಪಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಉತ್ತಮ ಮಳೆ, ಬಿತ್ತನೆ ಬೀಜದ ದರ ಹೆಚ್ಚಳ

ಕನ್ನಡಪ್ರಭ ವಾರ್ತೆ ಕನಕಗಿರಿ

ಕಳೆದ ವಾರದಿಂದ ಉತ್ತಮ ಮಳೆಯಾದ ಹಿನ್ನೆಲೆ ಭೂಮಿ ಸಂಪೂರ್ಣವಾಗಿ ತಂಪಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ತಾಲೂಕಿನ ಹುಲಿಹೈದರ, ನವಲಿ ಹಾಗೂ ಕನಕಗಿರಿ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ, ಸೂರ್ಯಕಾಂತಿ, ಸಜ್ಜಿ, ನವಣಿ, ಹೆಸರು ಹಾಗೂ ಮೆಕ್ಕೆಜೋಳ ಬೀಜಗಳು ಬಂದಿದ್ದು, ಸರ್ಕಾರ ನಿಗದಿಪಡಿಸಿದ ದರಕ್ಕೆ ರೈತರಿಗೆ ನೀಡಲಾಗುತ್ತಿದೆ. ಮಳೆ ಆರಂಭದ ದಿನಗಳಿಂದಲೂ ರೈತರು ಬೀಜ ಖರೀದಿಸಲು ಮುಂದಾಗಿದ್ದು, ಈಗಾಗಲೇ ಶೇ.70ರಷ್ಟು ರೈತರು ಬೀಜ ಖರೀದಿಸಿ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕನಕಗಿರಿ, ನವಲಿ, ಮುಸಲಾಪೂರ, ಹುಲಿಹೈದರ ಭಾಗದ ಒಣಭೂಮಿ ರೈತರು ತೊಗರಿ, ಸಜ್ಜಿ, ನವಣಿ, ಹೆಸರು ಬಿತ್ತನೆ ಮಾಡಿದರೆ, ಪಂಪ್‌ಸೆಟ್ ರೈತರು ಸೂರ್ಯಕಾಂತಿ, ಹತ್ತಿ ಬಿತ್ತನೆ ಮಾಡುತ್ತಿದ್ದಾರೆ.

ದುಬಾರಿಯಾದ ಬೀಜ:

ರೈತ ಸಂಕರ್ಪ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ಸಿಗುವ ಬೀಜದ ಪಾಕೆಟ್‌ಗಳ ದರ ಹೆಚ್ಚಳವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ತಲಾ ಐದು ಕೆಜಿ ಪಾಕೆಟ್‌ಗೆ ನೂರು ರೂ. ಏರಿಕೆಯಾಗಿದೆ. ಎಂಎಸ್ಪಿ ದರ ಹೆಚ್ಚಳವಾಗಿದ್ದರಿಂದ ಬೀಜದ ದರವೂ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದರೆ, ಸರ್ಕಾರ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಬೀಜದ ಪಾಕೆಟ್‌ಗಳ ದರ ಹೆಚ್ಚಳ ಮಾಡಿದೆ ಎಂದು ರೈತರು ಆರೋಪಿಸಿದರು.

ಕೃಷಿ ಇಲಾಖೆ ನೀಡುವ ಬೀಜವನ್ನೂ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ನ್ಯಾಯವಲ್ಲ. ತೀವ್ರ ಬರಗಾಲದಿಂದ ಒಣಭೂಮಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೀಜ ದುಬಾರಿಯಾದರೆ ಹೇಗೆ? ಈ ಬಗ್ಗೆ ಸರ್ಕಾರ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಬೀಜದ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಭೀಮನಗೌಡ ಆಗ್ರಹಿಸಿದ್ದಾರೆ.