ಅರಮನೆಯಲ್ಲಿ 2 ದಸರಾ ಆನೆಗಳ ನಡುವೆ ಕಾದಾಟ- ಓಡಾಟ

| Published : Sep 22 2024, 01:49 AM IST

ಸಾರಾಂಶ

ಶುಕ್ರವಾರ ಸಂಜೆ ಧನಂಜಯ ಆನೆಯ ಮೇಲೆ ಮರದ ಅಂಬಾರಿ ಹೊರಿಸಲಾಯಿತು. ಈ ವೇಳೆ ಮಳೆ ಬಂದಿದ್ದರಿಂದ ಅರಮನೆ ಆವರಣದಲ್ಲಿ ತಾಲೀಮು ನಡೆಸಿ, ಮರದ ಅಂಬಾರಿಯನ್ನು ಇಳಿಸಲಾಗಿತ್ತು. ಬಳಿಕ ಆನೆ ಬಿಡಾರದಲ್ಲಿ ವಿಶ್ರಾಂತಿಯಲ್ಲಿದ್ದ ಆನೆಗಳಿಗೆ ರಾತ್ರಿ 8ರ ವೇಳೆಗೆ ಆಹಾರ ನೀಡಲಾಗಿದೆ. ಈ ವೇಳೆ ಧನಂಜಯ, ಕಂಜನ್ ನಡುವೆ ಗಲಾಟೆ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕಾಡಿನಿಂದ ನಾಡಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ 14 ಆನೆಗಳ ಪೈಕಿ 2 ಗಂಡಾನೆಗಳ ನಡುವೆ ಕಾದಾಟದಿಂದ ಮೈಸೂರು ಅರಮನೆ ಆವರಣದಲ್ಲಿ ಆತಂಕ ಸೃಷ್ಟಿಯಾಗಿತ್ತು.

ದಸರಾ ಆನೆಗಳಾದ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಶುಕ್ರವಾರ ರಾತ್ರಿ ನಡೆದ ಗಲಾಟೆಯು ಕಾದಾಟವಾಗಿ ಮಾರ್ಪಟಿತ್ತು. ಈ ವೇಳೆ ಕಂಜನ್ ನನ್ನು ಧನಂಜಯ ಅಟ್ಟಿಸಿಕೊಂಡು ಅರಮನೆ ಒಳಾವರಣದಿಂದ ಹೊರಾವರಣಕ್ಕೆ ಬಂದಿದ್ದು, ಧನಂಜಯ ಆನೆಯ ಕಾವಾಡಿಯ ಚಾಣಾಕ್ಷತನದಿಂದ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಎರಡು ಆನೆಗಳನ್ನು ಅರಮನೆ ಒಳಾವರಣಕ್ಕೆ ತರಲಾಗಿದೆ.

ಏನಾಯಿತು?

ಶುಕ್ರವಾರ ಸಂಜೆ ಧನಂಜಯ ಆನೆಯ ಮೇಲೆ ಮರದ ಅಂಬಾರಿ ಹೊರಿಸಲಾಯಿತು. ಈ ವೇಳೆ ಮಳೆ ಬಂದಿದ್ದರಿಂದ ಅರಮನೆ ಆವರಣದಲ್ಲಿ ತಾಲೀಮು ನಡೆಸಿ, ಮರದ ಅಂಬಾರಿಯನ್ನು ಇಳಿಸಲಾಗಿತ್ತು. ಬಳಿಕ ಆನೆ ಬಿಡಾರದಲ್ಲಿ ವಿಶ್ರಾಂತಿಯಲ್ಲಿದ್ದ ಆನೆಗಳಿಗೆ ರಾತ್ರಿ 8ರ ವೇಳೆಗೆ ಆಹಾರ ನೀಡಲಾಗಿದೆ. ಈ ವೇಳೆ ಧನಂಜಯ, ಕಂಜನ್ ನಡುವೆ ಗಲಾಟೆ ಆರಂಭವಾಗಿದೆ.

ಒಂದು ಹಂತದಲ್ಲಿ ಕಂಜನ್ ಮೇಲೆ ಧನಂಜಯ ದಾಳಿ ಮಾಡಲು ಆರಂಭಿಸುತ್ತಿದ್ದಂತೆ, ಕಂಜನ್ ಮೇಲಿದ್ದ ಕಾವಾಡಿ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ. ಧನಂಜನಯ ದಾಳಿಯಿಂದ ತಪ್ಪಿಸಿಕೊಳ್ಳಲು ಕಂಜನ್ ಆನೆಯು ಆನೆ ಬಿಡಾರದಲ್ಲಿ ಓಡಾಡಿ, ಜಯಮಾರ್ತಾಂಡ ದ್ವಾರದ ಬಳಿಯ ಬಾಗಿಲಿನಿಂದ ಬ್ಯಾರಿಕೇಟ್ ಅನ್ನು ತಳ್ಳಿಕೊಂಡು ಅರಮನೆ ಹೊರಕ್ಕೆ ಓಡಿ ಬಂದಿದೆ. ಈ ವೇಳೆ ಹಿಂದಿನಿಂದ ಧನಂಜಯ ಆನೆಯನ್ನು ಅಟ್ಟಿಸಿಕೊಂಡು ಬಂದಿದೆ.

ಬ್ಯಾರಿಕೇಡ್ ತಳ್ಳಿಕೊಂಡು ಹೋಗುತ್ತಿದ್ದ ಕಂಜನ್ ಹಿಂಭಾಗಕ್ಕೆ ಧನಂಜಯ ತನ್ನ ಕೊಂಬಿನಿಂದ ತಿವಿದು ತನ್ನ ಆಕ್ರೋಶ ಹೊರ ಹಾಕಿತು. ಈ ವೇಳೆಗಾಗಲಿ ಧನಂಜಯ ಮೇಲಿದ್ದ ಕಾವಾಡಿ, ಚಾಣಾಕ್ಷತನದಿಂದ ಧನಂಜಯನನ್ನು ಸಮಾಧಾನಪಡಿಸಿ ಅರಮನೆ ಒಳಾವರಣಕ್ಕೆ ಕರೆ ತಂದಿದ್ದಾರೆ. ಬಳಿಕ ಕಂಜನ್ ಆನೆಯನ್ನು ಅದರ ಮಾವುತ, ಕಾವಾಡಿ ಸಮಾಧಾನಪಡಿಸಿ ಆನೆ ಬಿಡಾರಕ್ಕೆ ಕರೆ ತಂದಿದ್ದಾರೆ. ದಸರಾ ಆನೆಗಳ ರೋಷಾವೇಷದ ಓಡಾಟವನ್ನು ಕಂಡು ಅರಮನೆ ಹೊರಾವರಣದಲ್ಲಿದ್ದ ಜನ ಬೆಚ್ಚಿ ಬಿದ್ದಿದ್ದಾರೆ.

ಶನಿವಾರ ನಡಿಗೆ ತಾಲೀಮು:

ದಸರಾ ಆನೆಗಳು ಶನಿವಾರ ಬೆಳಗ್ಗೆ ಎಂದಿನಂತೆ ನಡಿಗೆ ತಾಲೀಮು ಪಾಲ್ಗೊಡಿದ್ದವು. ಶುಕ್ರವಾರ ರಾತ್ರಿ ಗಲಾಟೆ ಮಾಡಿಕೊಂಡಿದ್ದ ಕಂಜನ್ ಮತ್ತು ಧನಂಜಯ ಆನೆಗಳು ಸಹ ನಡಿಗೆಯಲ್ಲಿ ಶಾಂತ ರೀತಿಯಲ್ಲಿ ತಾಲೀಮಿನಲ್ಲಿ ಪಾಲ್ಗೊಂಡು, ಅರಮನೆ ಆವರಣದ ಆನೆ ಬಿಡಾರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.

ಆನೆಗಳು ಜಗಳ ಮಾಡಿಕೊಂಡಿವೆ

ಆನೆಗಳ ಗಲಾಟೆ ವಿಚಾರವು ನನ್ನ ಗಮನಕ್ಕೆ ಬಂದಿದೆ. ಹಳ್ಳಿಗಳಲ್ಲಿ ಎರಡು ಹೊರಿಗಳು ಪರಸ್ಪರ ಅಕ್ಕಪಕ್ಕ ಇದ್ದಾಗ ಹೇಗೆ ಜಗಳ ಮಾಡಿಕೊಳ್ಳುತ್ತೊ ಹಾಗೇ ಆನೆಗಳು ಜಗಳ ಮಾಡಿಕೊಂಡಿದೆ. ಹೊರಿ ಜಗಳದ ತೀವ್ರತೆ ಬೇರೆ, ಆನೆಗಳ ತೀವ್ರತೆಯೇ ಬೇರೆ. ಹೀಗಾಗಿ, ಈ ವಿಚಾರವನ್ನ ನಾವು ಗಂಭೀರವಾಗಿ ಪರಿಗಣಿಸಿ ಎಲ್ಲಾ ವಿವರ ಪಡೆದಿದ್ದೇನೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಇಲ್ಲಿ ಯಾರದ್ದು ತಪ್ಪು ಯಾರದ್ದೋ ನಿರ್ಲಕ್ಷ್ಯ ಎಂದು ಈಗ ಹೇಳಲು ಬರುವುದಿಲ್ಲ. ಆನೆಗಳು ಸಡನ್ ಆಗಿ ಈ ವರ್ತಿಸಿರುವ ಕಾರಣ ಯಾರ ಅಂದಾಜಿಗೂ ಇದು ಸಿಕ್ಕಿಲ್ಲ. ಸದ್ಯ ಯಾವುದೇ ಹಾನಿ ಉಂಟಾಗಿಲ್ಲ. ಮುಂದೆ ಇನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಗಂಡಾನೆಗಳ ಸ್ವಭಾವ ಹಾಗೆಯೇ ಇರುತ್ತದೆ, ಆತಂಕ ಬೇಡ

ರಾತ್ರಿ ಆನೆಗಳಿಗೆ ಆಹಾರ ಕೊಡುವಾಗ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಜಗಳ ಆಗಿದೆ. ಗಂಡಾನೆಗಳ ಸ್ವಭಾವ ಹಾಗೆಯೇ ಇರುತ್ತದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಸ್ಪಷ್ಟಪಡಿಸಿದರು.

ಪ್ರತಿ ಬಾರಿಯೂ ಆನೆಗಳಿಗೆ ಆಹಾರ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿರುತ್ತಿತ್ತು. ಶುಕ್ರವಾರ ರಾತ್ರಿ ಆಹಾರ ಕೊಡುವಾಗ ಹೆಣ್ಣಾನೆ ಜೊತೆಯಲ್ಲಿ ಇಲ್ಲದ ಕಾರಣ ಧನಂಜಯ ಆನೆ ಕಂಜನ್ ಆನೆ ವಿರುದ್ಧ ಕಾದಾಟಕ್ಕೆ ಮುಂದಾಗಿದೆ. ಧನಂಜಯ ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಹೋಗಿದೆ. ಈ ವೇಳೆ ಕಂಜನ್ ಆನೆಯ ಮೇಲಿದ್ದ ಮಾವುತ ಕೆಳಕ್ಕೆ ಜಿಗಿದಿದ್ದಾನೆ. ಅರಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಧನಂಜಯ ನಿಯಂತ್ರಣಕ್ಕೆ ಬಂದಿದೆ ಎಂದರು.

ಈ ಘಟನೆ ಹಠಾತ್ ನಡೆದಿದೆ. ಕಂಜನ್ ಮತ್ತು ಧನಂಜಯ ಆನೆಗೆ ಮದ ಬಂದಿಲ್ಲ, ಇದನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದೆ. ಕಂಜನ್ ಆನೆ ರಸ್ತೆಗೆ ಹೋಗುತ್ತಿದಂತೆ ಜನರನ್ನು ನೋಡಿ ಗಾಬರಿಯಾಗಿ ಸುಮ್ಮನಾಗಿದೆ. ಜನರು ಆನೆಗಳನ್ನು ದೂರದಿಂದಲೇ ನೋಡಬೇಕು. ಯಾರು ಹತ್ತಿರಕ್ಕೆ ಬರಬಾರದು ಎಂದು ಅವರು ಮನವಿ ಮಾಡಿದರು.