ದುಬಾರಿ ಬೆಲೆಯಲ್ಲೂ ಗ್ರಾಹಕರು ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿ : ಅತ್ತಿಬೆಲೆ ಗಡಿಬಳಿ ಖರೀದಿ ಭರಾಟೆ

| Published : Oct 28 2024, 01:45 AM IST / Updated: Oct 28 2024, 07:43 AM IST

ದುಬಾರಿ ಬೆಲೆಯಲ್ಲೂ ಗ್ರಾಹಕರು ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿ : ಅತ್ತಿಬೆಲೆ ಗಡಿಬಳಿ ಖರೀದಿ ಭರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ದುಬಾರಿ ಬೆಲೆಯಲ್ಲೂ ಗ್ರಾಹಕರು ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ.

ಆನೇಕಲ್‌ ರವಿ

  ಬೆಂಗಳೂರು : ದೀಪಾವಳಿ ಹಬ್ಬ ಬಂದರೇ ಸಾಲು ಸಾಲು ರಜೆಗಳು ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಲು ಒಂದೆಡೆ ಸಿಹಿ, ಹೊಸ ಬಟ್ಟೆ ಖರೀದಿಸುವುದು ಇನ್ನೊಂದೆಡೆ ಸ್ವಂತ ಊರಿಗೆ ಹೋಗುವ ಮುನ್ನ ಒಂದಷ್ಟು ಪಟಾಕಿಗಳನ್ನು ಖರೀದಿಸಿ ಸ್ವಂತ ಊರು ತಲುಪುವ ತವಕ. ಹಿಂದಿನ ವರ್ಷದ ಅವಘಡಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಬೆರಳೆಣಿಕೆಯಷ್ಟೇ ಅಂಗಡಿಗಳಿಗೆ ಪರವಾನಗಿ ನೀಡಿದೆ. 

ಜೊತೆಗೆ ಕಂದಾಯ, ಆರಕ್ಷಕ ಅಗ್ನಿ ಶಾಮಕ, ಪರಿಸರ ಮಾಲಿನ್ಯ ತಡೆ, ಪುರಸಭೆ ಅಧಿಕಾರಿಗಳ ತಂಡವನ್ನು ರಚಿಸಿ, ನಿರಂತರ ಸಭೆಗಳನ್ನು ನಡೆಸುವ ಜೊತೆಗೆ ಎಲ್ಲವೂ ಸನ್ನದ್ಧ ಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ ಪ್ರತಿ ದಿನ ಉನ್ನತ ಅಧಿಕಾರಿಗಳಿಗೆ ವರದಿ ನೀಡಬೇಕಿದೆ.ಪ್ರತಿ ಅಂಗಡಿಯಲ್ಲೂ ಅಗ್ನಿ ಶಾಮಕ ಉಪಕರಣಗಳು, ಮರಳು, ನೀರು ದಾಸ್ತಾನು ಮಾಡಿದ್ದು ಅಂಗಡಿ ಮಾಳಿಗೆಯಲ್ಲೂ ಬೆಂಕಿ ಆರಿಸುವ ಸಾಮಗ್ರಿಗಳು ಫಿಟ್ಟಿಂಗ್ಸ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಿ ಮುಂಜಾಗ್ರತಾ ಕ್ರಮ ವಹಿಸಿದೆ. ಪ್ರಮುಖ ದ್ವಾರದ ಜೊತೆಗೆ ಮತ್ತೊಂದು ಬಾಗಿಲನ್ನೂ ಇಡುವ ಮೂಲಕ ತುರ್ತು ನಿರ್ಗಮನಕ್ಕೂ ಅನುವು ಮಾಡಿಕೊಡಲಾಗಿದೆ.

ಜನ ಜಂಗುಳಿ ಜಾತ್ರೆ :

ಪಟಾಕಿಯನ್ನು ಖರೀದಿಸಲು ಬೆಂಗಳೂರು ನಗರ, ಕನಕಪುರ, ಮಾಗಡಿ, ಹೊಸಕೋಟೆ ಕಡೆಗಳಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದು, ಪ್ರತಿ ಅಂಗಡಿಯ ಮುಂದೆ ಪಟಾಕಿ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಸ್ಟ್ಯಾಂಡರ್ಡ್ ಪಟಾಕಿ ಸೇರಿ ಬಹುತೇಕ ಕಂಪನಿಗಳ ಪಟಾಕಿಗಳಿಗೆ ಶೇ 90% ರಿಯಾಯಿತಿ ನೀಡುತ್ತಿದ್ದು ಹೊಸ ನಮೋನೆಯ ಪಟಾಕಿಗಳು ಸೇರ್ಪಡೆಯಾಗಿವೆ. ಪಾರಾಚೋಟ್ ಪಟಾಕಿ ಈ ಬಾರಿಯ ಆಕರ್ಷಣೆ ಯಾಗಿದೆ. ಫ್ಯಾನ್ಸಿ ಪಟಾಕಿಗಳಿಗೆ ರಿಯಾಯಿತಿ ಕಡಿಮೆ ಇದೆ.

ಟೆಕ್ಕಿಗಳೇ ಪ್ರಮುಖ ಗ್ರಾಹಕರು: ಟೆಕ್ಕಿಗಳೇ ಪ್ರಮುಖ ಗ್ರಾಹಕರಾಗಿದ್ದು ಕೇಳಿದಷ್ಟು ಹಣ ತೆರುತ್ತಾರೆ. ಚೌಕಸಿ ಮಾಡುವುದಿಲ್ಲ. ನಾವೂ ಕಂಪ್ಯೂಟರೈಸೆಡ್ ಬಿಲ್ ನೀಡುತ್ತೇವೆ. ಗ್ರಾಹಕರಿಂದ ಪಾವತಿಸಿಕೊಂಡ ಜಿಎಸ್‌ಟಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ನೀಡುತ್ತೇವೆ ಎಂದು ಸತ್ಯ ಕ್ರಾಕರ್ಸ್‌ನ ಸೇಲ್ಸ್ ಮ್ಯಾನೇಜರ್ ತಿಳಿಸಿದರು.

ಪ್ರತಿ ಪಟಾಕಿ ಪ್ಯಾಕೆಟ್‌ ಮೇಲೂ ಹಸಿರು ಟ್ರೇಡ್‌ ಮಾರ್ಕ್‌:

ಈ ಬಾರಿ ಮಾರುಕಟ್ಟೆಯಲ್ಲಿ ಹಸಿರು ಪಟಾಕಿ ದಾಸ್ತಾನು ಎಲ್ಲೆಡೆ ಕಂಡುಬಂದಿದೆ. ಪ್ರತಿ ಪಟಾಕಿ ಪ್ಯಾಕೆಟ್‌ ಮೇಲೂ ಹಸಿರು ಟ್ರೇಡ್ ಮಾರ್ಕ್ ಇದೆ. ವಿಶಾಲವಾದ ಅಂಗಡಿಗಳಲ್ಲಿ ಗ್ರಾಹಕರ ಆಯ್ಕೆಗೆ ಸಿಗುವಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ. ಕೆಲ ಅಂಗಡಿಗಳಲ್ಲಿ ಕನಿಷ್ಠ ₹. 30/- ರಿಂದ ಗರಿಷ್ಠ ₹. 3000/- ವರೆಗೆ ದೊರೆತರೆ ಶೋರೂಮ್ ನಂತೆ ಅಲಂಕಾರ ಮಾಡಿದ ಅಂಗಡಿಯಲ್ಲಿ ಪಟಾಕಿ ಬೆಲೆ 50ರು.ನಿಂದ 10,000 ರು. ವರೆಗಿನ ಸಿಂಗಲ್ ಐಟಂ ಸಿಗಲಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ಈ ಬಾರಿ ಪಟಾಕಿ ದುಬಾರಿ: ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಪಟಾಕಿ ಬೆಲೆ ದುಬಾರಿಯಾಗಿದೆ ಎಂದು ಕೆಲ ಗ್ರಾಹಕರು ಹೇಳಿತ್ತಿದ್ದಾರೆ. ಕಳೆದ ಬಾರಿ ₹. 10,000/- ಮೌಲ್ಯದ ಪಟಾಕಿಗೆ ಈ ಬಾರಿ 13,000 ರು. ನೀಡಬೇಕಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅತ್ತಿಬೆಲೆ ಇನ್ ನ್ಸ್ಪೆಕ್ಟರ್ ಮಾಹಿತಿ ನೀಡಿ ವರ್ಷ ಪೂರ್ತಿ ಪಟಾಕಿ ಅಂಗಡಿಯನ್ನು ನಡೆಸುವವರಿಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಚಿಲ್ಲರೆ ಮಾರಾಟಕ್ಕೆ ಅವಕಾಶವಿಲ್ಲವಾಗಿದ್ದು ಒಂದು ವೇಳೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದಿದ್ದಾರೆ.