ಸಾರಾಂಶ
ಧಾರವಾಡ: ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಹೆಸರಲ್ಲಿ ಚಿನ್ನದ ಪದಕ ಸ್ಥಾಪಿಸಲು ವಿದ್ಯಾವರ್ಧಕ ಸಂಘದ ಸದಸ್ಯ ಸಂಜೀವ ಕುಮಾರ್ ಸಲಹೆ ನೀಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಭವನದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ರೀತಿ ಆನೇಕ ಚರ್ಚೆಗಳು ನಡೆದವು.ಸದಸ್ಯರ ಸಲಹೆ ಸ್ವಾಗತಿಸಿದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಚಿನ್ನದ ಪದಕ ಸ್ಥಾಪಿಸಲು ಬೇಕಾದ ಹಣ ಭರಿಸಲು ಸಂಘ ಶಕ್ತಿಯುತವಾಗಿಲ್ಲ. ಆದರೂ, ಈ ವಿಷಯ ಕಾರ್ಯಕಾರಣಿ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಉದ್ಯಮ ಮಂಟಪ, ಸಲಹಾ ಸಮಿತಿಗೆ ಹೊಸಬರ ನೇಮಕ, ಕುಟುಂಬಸ್ಥರಿಗೆ ಮಣೆ ಹಾಕುವುದು ನಿಲ್ಲಿಸುವುದು, ದತ್ತಿ ಪುನರ್ ಸ್ಥಾಪನೆ ಹಾಗೂ ಸಭಾಭವನದಲ್ಲಿ ಧ್ವನಿ- ಬೆಳಕು ಪ್ರಜ್ವಲನೆ ಪ್ರಶ್ನೆಗಳು ಕೇಳಿ ಬಂದಿವು.ಪ್ರಧಾನಿ ನರೇಂದ್ರ ಮೋದಿ ಉದ್ಯಮಕ್ಕೆ ಒತ್ತು ನೀಡಿದ್ದು, ಸಂಘದಲ್ಲಿ ಶಿಕ್ಷಣ ಮಂಟಪ ಸ್ಥಾಪಿಸುವ ಕುರಿತು ಸದಸ್ಯರಾದ ಶಾರದಾ ಅವರ ಸಲಹೆ ಸ್ವೀಕರಿಸಿದ ಆಡಳಿತ ಮಂಡಳಿ, ಸದ್ಯದ ವಾಣಿಜ್ಯ-ಆಡಳಿತ ಮಂಟಪದಲ್ಲಿಯೇ ಉದ್ಯಮ ಸೇರ್ಪಡಿಸುವುದಾಗಿ ಭರವಸೆ ನೀಡಿತು.
ಹೊಸಬರಿಗೆ ಅವಕಾಶ: ಸಲಹಾ ಸಮಿತಿಗೆ ಹಿಂದಿದ್ದ ಹಳಬರನ್ನೇ ಮರು ನೇಮಕ ಮಾಡಿದ್ದು, ಹೊಸಬರ ನೇಮಕದ ಸದಸ್ಯರ ಮನವಿಗೆ, ಸಲಹಾ ಸಮಿತಿ ಸದಸ್ಯರ ಅವಧಿ ಒಂದು ವರ್ಷ. ಹೊಸದಾಗಿ ನೇಮಿಸುವಾಗ ಹೊಸಬರಿಗೆ ಅವಕಾಶ ನೀಡುವುದಾಗಿ ಹೊಸಕೇರಿ ಪ್ರತಿಕ್ರಿಯಿಸಿದರು.ದತ್ತಿ ಮೊತ್ತ ಏರಿಕೆ: ಸಂಘದಲ್ಲಿ ದತ್ತಿ ಪುನಃ ಆರಂಭಿಸುವ ನಾಗೇಂದ್ರ ಕುಪ್ಪಣ್ಣವರ, ಹಲವು ಸದಸ್ಯರ ಆಗ್ರಹಕ್ಕೆ ಉತ್ತರಿಸಿದ ಹೊಸಕೇರಿ, ಸಂಘದಲ್ಲಿ 140ಕ್ಕೂ ಹೆಚ್ಚು ದತ್ತಿಗಳಿವೆ. ದತ್ತಿ ಸ್ಥಾಪನೆ ನಿಲ್ಲಿಸಿಲ್ಲ. ದತ್ತಿ ಕಡಿಮೆ ಮಾಡಲು ಮೊತ್ತ ₹ 2.50 ಲಕ್ಷಕ್ಕೆ ಏರಿಸಿದ್ದಾಗಿ ಸ್ಪಷ್ಟಡಿಸಿದರು.
ಸಭೆಯಲ್ಲಿ ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸೇರಿದಂತೆ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ವಿವಿಧ ಮಂಟಪದ ಸಂಚಾಲಕರು, ಸಲಹಾ ಸಮಿತಿ ಸದಸ್ಯರು ಮತ್ತು ಸಂಘದ ಸದಸ್ಯರು ಪಾಲ್ಗೊಂಡಿದ್ದರು.