ಸಾರಾಂಶ
ಲಿಂಗರಾಜು ಕೋರಾ
ಬೆಂಗಳೂರು : ‘ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರತೀ ವರ್ಷ ಸಾವಿರಾರು ಸೀಟು ಉಳಿಯುತ್ತಿರುವುದನ್ನು ತಪ್ಪಿಸಿ ಬೇಡಿಕೆ ಹೆಚ್ಚಿಸಲು ಆ ಕಾಲೇಜುಗಳನ್ನು ಸರ್ವ ರೀತಿಯಲ್ಲೂ ಪ್ರತಿಷ್ಠಿತ ಖಾಸಗಿ ಕಾಲೇಜುಗಳ ಮಾದರಿಯಲ್ಲಿ ಉನ್ನತೀಕರಿಸಬೇಕು. ಜೊತೆಗೆ ಕೈಗಾರಿಕೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವ್ಯಾಸಂಗ ಮುಗಿದ ಕೂಡಲೇ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುವಂತೆ ನೋಡಿಕೊಳ್ಳಬೇಕು.’ಇದು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಖಾಸಗಿ ಕಾಲೇಜುಗಳ ಮಟ್ಟಕ್ಕೆ ಬಲವರ್ಧನೆಗೊಳಿಸುವ ಸಂಬಂಧ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ನಾಲ್ವರು ತಜ್ಞರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಮುಖ ಅಂಶಗಳು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಕಡಿಮೆ ಇದ್ದರು ಪ್ರತೀ ವರ್ಷ ಒಂದಷ್ಟು ಸೀಟುಗಳು ಭರ್ತಿಯಾಗದೆ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಾರಣ ಏನು, ಬೇಡಿಕೆ ಹೆಚ್ಚಲು ಕೈಗೊಳ್ಳಬೇಕಾದ ಕ್ರಮಗಳೇನು? ಎಂಬ ಬಗ್ಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ವ್ಯಾಪಕ ಬೇಡಿಕೆ ಇರುವ ರಾಜ್ಯದ ಕೆಲ ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ಸೌಲಭ್ಯಗಳನ್ನು ಅವಲೋಕಿಸಿ ತೌಲನಿಕ ಅಧ್ಯಯನ ವರದಿ ನೀಡುವಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ರಾಜ್ಯದ ಉನ್ನತ ಶಿಕ್ಷಣ ಪರಿಷತ್‌ಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಜಿ. ಚಂದ್ರಶೇಖರ್ ನೇತೃತ್ವದಲ್ಲಿ ನಾಲ್ವರು ತಜ್ಞರ ಸಮಿತಿ ರಚಿಸಲಾಗಿತ್ತು.ಈ ಸಮಿತಿಯು ಬೆಂಗಳೂರಿನ ರಾಮಯ್ಯ, ಪಿಇಎಸ್, ಬಿಎಂಎಸ್ ಮತ್ತು ದಯಾನಂದ ಸಾಗರ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿರುವ ಶಿಕ್ಷಣ ವ್ಯವಸ್ಥೆ, ಅನುಸರಿಸುತ್ತಿರುವ ಬೋಧನಾ ಕ್ರಮ, ಮೂಲಸೌಕರ್ಯ, ಸಂಶೋಧನಾ ಚಟುವಟಿಕೆಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ, ವಿದ್ಯಾರ್ಥಿಗಳಿಗೆ ಉತ್ತಮ ಕ್ಯಾಂಪಸ್ ಸೆಲೆಕ್ಷನ್, ಓದು ಮುಗಿಯುತ್ತಲೇ ಉದ್ಯೋಗಾವಕಾಶ ಕಲ್ಪಿಸುವುದು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಆ ಕಾಲೇಜುಗಳು ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಅವಲೋಕನ ಮಾಡಿ ವರದಿ ಸಲ್ಲಿಸಿದೆ.
ವರದಿಯಲ್ಲೇನಿದೆ?: ವರದಿಯಲ್ಲಿ ಸರ್ಕಾರಿ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ, ಮೂಲಸೌಕರ್ಯ, ಸಂಶೋಧನಾ ಚಟುವಟಿಕೆಗಳಿಗಾಗಿ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವ, ಉದ್ಯಮ ಕ್ಷೇತ್ರದವರೊಂದಿಗೆ ಸಂಪರ್ಕ, ಸಹಭಾಗಿತ್ವ ಕಾಯ್ದುಕೊಂಡು, ಕಾಲಕಾಲಕ್ಕೆ ಪಠ್ಯದಲ್ಲಿ ಬದಲಾವಣೆ ತರುವುದು, ಆಧುನಿಕ ಕೌಶಲ್ಯ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳ ಕೆಲಸ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬೋಧಕರಲ್ಲಾಗಲಿ, ವಿದ್ಯಾರ್ಥಿಗಳಲ್ಲಾಗಲಿ ಸರ್ಕಾರಿ ಕಾಲೇಜುಗಳ ಬಗ್ಗೆ ಇರುವ ಋಣಾತ್ಮಕ ಧೋರಣೆಯನ್ನು ದೂರವಾಗಿಸಿ ವಿಶೇಷ ಅಭಿಮಾನ, ಉತ್ತಮ ಸೇವಾ ಮನೋಭಾವ ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಖಾಸಗಿ ಕಾಲೇಜುಗಳ ಸೀಟುಗಳ ಬೇಡಿಕೆಗೆ ಪ್ರಮುಖ ಕಾರಣ ಅಲ್ಲಿ ವ್ಯಾಸಂಗ ಮುಗಿಯುತ್ತಿದ್ದಂತೆ ಕ್ಯಾಂಪಸ್ ಸೆಲೆಕ್ಷನ್ ಅಥವಾ ಉತ್ತಮ ಉದ್ಯೋಗಾವಕಾಶಗಳು ಹುಡಿಕಿ ಬರುತ್ತಿರುವುದು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜುಗಳೊಂದಿಗೆ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಅವರಿಗೆ ಬೇಕಾದ ಮಾವನ ಸಂಪನ್ಮೂಲ ಒದಗಿಸಲು ಯೋಜನೆ ರೂಪಿಸಬೇಕು. ಒಟ್ಟಾರೆಯಾಗಿ ಸರ್ಕಾರಿ ಕಾಲೇಜುಗಳನ್ನು ಖಾಸಗಿ ಕಾಲೇಜುಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸಿ ಸೀಟುಗಳಿಗೆ ಭೇಡಿಕೆ ಹೆಚ್ಚಿಸಲು ಅವುಗಳು ಅನುಸರಿಸುತ್ತಿರುವ ಎಲ್ಲ ಕ್ರಮ, ತಂತ್ರಗಾರಿಕೆಗಳನ್ನೂ ಹಂತ ಹಂತವಾಗಿ ಜಾರಿಗೆ ತರಬೇಕೆಂದು ತಿಳಿಸಿದೆ.
ಪಂಚವಾರ್ಷಿಕ ಯೋಜನೆಗೆ ಶಿಫಾರಸು: ತಜ್ಞರ ಸಮಿತಿಯು ತಮ್ಮ ವರದಿಯ ಅಂಶಗಳನ್ನು ಜಾರಿಗೊಳಿಸಲು ಸರ್ಕಾರ 5 ವರ್ಷಗಳ ಕ್ರಿಯಾ ಯೋಜನೆ ರೂಪಿಸಬೇಕು. ವರದಿಯಲ್ಲಿನ ಶಿಫಾರಸುಗಳನ್ನು ಕಡಿಮೆ ಅವಧಿಯ ಅನುಷ್ಠಾನ ಕಾರ್ಯಕ್ರಮಗಳು ಮತ್ತು ದೀರ್ಘ ಕಾಲದ ಅನುಷ್ಠಾನ ಕಾರ್ಯಕ್ರಮಗಳು ಎಂದು ವಿಂಗಡಿಸಿ ಎರಡೂ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಲು ಕ್ರಮ ವಹಿಸಬೇಕು. ಇದಕ್ಕೆ ಅಗತ್ಯ ಅನುದಾನವನ್ನು ಮುಂಬರುವ ರಾಜ್ಯ ಬಜೆಟ್‌ನಲ್ಲಿ ಒದಗಿಸಬೇಕು. ಸರ್ಕಾರದ ಅನುದಾನದ ಜೊತೆಗೆ ಸರ್ಕಾರಿ ಕಾಲೇಜುಗಳಲ್ಲಿ ಓದಿ ಉನ್ನತ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ, ಸ್ಥಾನಮಾದನಲ್ಲಿರುವ ಹಳೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಹಳೆ ವಿದ್ಯಾರ್ಥಿಗಳ ಸಂಘಗಳ ಸ್ಥಾಪನೆ ಮೂಲಕ ಹಾಗೂ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಅನುದಾನವನ್ನು ಹೆಚ್ಚಾಗಿ ಸೆಳೆಯಲು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.