ಡ್ರ್ಯಾಗನ್ ಫ್ರೂಟ್ ಬೆಳೆದು ಸೈ ಎನ್ನಿಸಿಕೊಂಡ ಪದವೀಧರ

| Published : Jul 08 2024, 12:38 AM IST

ಡ್ರ್ಯಾಗನ್ ಫ್ರೂಟ್ ಬೆಳೆದು ಸೈ ಎನ್ನಿಸಿಕೊಂಡ ಪದವೀಧರ
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದಲ್ಲಿ ರೈತರು ತೋಟಗಾರಿಕೆ ಬೆಳೆಗಳಾದ ವೀಳ್ಯೆದೆಲೆ, ದಾಳಿಂಬೆ, ಹತ್ತಿ ಬೆಳೆಯುತ್ತಿದ್ದ ರೈತರು ಒಂದು ಹೆಜ್ಜೆ ಮುಂದಾಗಿ ಕೃಷಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್‌ಗೆ ಬಹುಬೇಡಿಕೆ

ಒಂದು ಎಕರೆಯಲ್ಲಿ ಹೊಸ ಪ್ರಯೋಗ ಮಾಡಿದ ಯಲಬುಣಚಿ ಗ್ರಾಮದ ಯುವಕ

ಏಕನಾಥ ಮೇದಿಕೇರಿ

ಕನ್ನಡಪ್ರಭ ವಾರ್ತೆ ಹನುಮಸಾಗರ

ಈ ಭಾಗದಲ್ಲಿ ರೈತರು ತೋಟಗಾರಿಕೆ ಬೆಳೆಗಳಾದ ವೀಳ್ಯೆದೆಲೆ, ದಾಳಿಂಬೆ, ಹತ್ತಿ ಬೆಳೆಯುತ್ತಿದ್ದ ರೈತರು ಒಂದು ಹೆಜ್ಜೆ ಮುಂದಾಗಿ ಕೃಷಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ಸಮೀಪದ ಯಲಬುಣಚಿ ಗ್ರಾಮದ ಪದವೀಧರ ಯುವಕ ನಿಂಬಣ್ಣ ಕಾಟಾಪುರ ಈ ಭಾಗದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ. ತನ್ನ ಒಂದು ಎಕರೆ ಜಾಗದಲ್ಲಿ ಹೊಸ ಪ್ರಯೋಗ ಕೈಗೊಂಡಿದ್ದಾರೆ. ಮೊದಲ ಬಾರಿಗೆ ಸಸಿನೆಟ್ಟು ಪ್ರಯೋಗಶೀಲ ಕೃಷಿಗೆ ಕೈ ಹಾಕಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್‌ಗೆ ಬಹುಬೇಡಿಕೆ ಇರುವ ಹಿನ್ನೆಲೆ ಈ ಬೆಳೆ ಬೆಳೆಯಲು ರೈತರು ಮುಂದಾಗಿದ್ದಾರೆ.

ಬೆಳೆ ನಾಟಿ ಮಾಡುವ ವಿಧಾನ:

ಡ್ರ್ಯಾಗನ್ ಫ್ರೂಟ್ ಬೆಳೆಯಲು ಜಮೀನು ಹದ ಮಾಡಬೇಕು. ಆನಂತರ ಬದುಗಳಾಗಿ ನಿರ್ಮಿಸಿ, ಆ ಬದುಗಳ ಮೇಲೆ ಕಲ್ಲುಕಂಬ ಅಳವಡಿಸಬೇಕು. ೧ ಕಲ್ಲುಕಂಬದ ಮೇಲೆ ದ್ವಿಚಕ್ರ ವಾಹನದ ಹಳೆ ಟೈಯರ್‌ಗಳನ್ನು ಕಬ್ಬಿಣದ ಸರಳುಗಳ ಜತೆ ಜೋಡಿಸಬೇಕು. ೧ ಕಂಬದಿಂದ ೮ ಅಡಿ ಅಂತರದಲ್ಲಿ ಮತ್ತೊಂದು ಕಂಬ ಮತ್ತು ಬದುವಿಂದ ಬದುವಿಗೆ ೧೨ ಅಡಿ ಅಂತರ ಇರಬೇಕು. ೧ ಎಕರೆಗೆ ಅಳತೆಗೆ ತಕ್ಕಂತೆ ಅಂದಾಜು ೩೫೦ ಕಂಬ ಹಾಕಬೇಕು. ಒಂದು ಕಂಬಕ್ಕೆ ೪ ಸಸಿಗಳಂತೆ ಒಟ್ಟು ೧೪೦೦ ಹೆಚ್ಚು ಕೆಂಪು, ಗುಲಾಬಿ ಬಣ್ಣದ ಉತ್ತಮ ಗಿಡಗಳನ್ನು ನಾಟಿ ಮಾಡಬೇಕು. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಬೇಕು.

ನಾಟಿ ಮಾಡಿದ ಆನಂತರ ೧೫ರಿಂದ ೧೮ ತಿಂಗಳ ಒಳಗೆ ಡ್ರ್ಯಾಗನ್ ಹಣ್ಣು ಕೈಗೆ ಸೇರುತ್ತದೆ. ನಿಂಬಣ್ಣ ಅವರು ಒಂದು ಸಸಿಗೆ ₹೭೦ ನೀಡಿದ್ದಾರೆ. ಕಡಿಮೆ ನೀರಿನಲ್ಲಿ ಡ್ರ್ಯಾಗನ್ ಬೆಳೆಯಬಹುದಾಗಿದೆ. ಇದಕ್ಕೆ ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಸೇರಿದಂತೆ ಅಗತ್ಯ ಇರುವಂತಹ ಪೋಷಕಾಂಶಗಳ ಗೊಬ್ಬರ ಹಾಕಬೇಕು.

ಬೇಡಿಕೆ ಹೆಚ್ಚು:

ನಾನಾ ದೇಶಗಳಲ್ಲಿ ಡ್ರ್ಯಾಗನ್ ಫ್ರೂಟ್‌ಗೆ ಬೇಡಿಕೆ ಹೆಚ್ಚಿದೆ. ಈಗ ಮಾರುಕಟ್ಟೆಯಲ್ಲಿ ೧ ಕೆಜಿ ಡ್ರ್ಯಾಗನ್ ಫ್ರೂಟ್‌ಗೆ ₹೧೩೦ ರಿಂದ ₹೨೦೦ ವರೆಗೆ ಇದೆ.

ನಿಂಬಣ್ಣ ಕಾಟಾಪುರ ಅವರ ಒಂದು ಎಕರೆಗೆ ₹೩ರಿಂದ ೪ ಲಕ್ಷ ಖರ್ಚು ಮಾಡಿದ್ದಾರೆ. ಈಗಾಗಲೇ ಒಂದನೇ ಬಾರಿ ೧ ಲಕ್ಷಕ್ಕೂ ಅಧಿಕ ಹಣ್ಣು ಮಾರಾಟ ಮಾಡಿದ್ದಾರೆ. ಸದ್ಯ ಎರಡನೇ ಹಂತದ ಫಸಲು ಆರಂಭವಾಗಿದೆ. ಇದನ್ನು ಸುತ್ತಲಿನ ಗಜೇಂದ್ರಗಡ, ಕುಷ್ಟಗಿ, ಇಳಕಲ್, ಕೊಪ್ಪಳ, ಬಾಗಲಕೋಟೆ ಭಾಗದ ಮಧ್ಯವರ್ತಿಗಳು ಆಗಮಿಸಿ ಕೊಂಡೊಯ್ಯುತ್ತಾರೆ.

ಈ ಹಣ್ಣಿನಿಂದ ಏನು ಉಪಯೋಗ?

ಡ್ರ್ಯಾಗನ್ ಫ್ರೂಟ್ಸ್ ತಿನ್ನಲು ರುಚಿಕರವಾಗಿರುತ್ತದೆ. ಔಷಧೀಯ ಗುಣ ಹೊಂದಿದೆ. ಇದು ಹೆಚ್ಚು ನೀರಿನಾಂಶ, ಪ್ರೊಟೀನ್‌ನಿಂದ ಕೂಡಿದೆ. ಮಧುಮೇಹ, ಹೃದಯ ಸಂಬಂಧಿ, ಕೊಲೆಸ್ಟ್ರಾಲ್ ಇದ್ದವರಿಗೆ ಇದು ಬಹಳ ಉಪಯುಕ್ತವಾಗಿದೆ. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜತೆಗೆ ಇದರ ಸಿಪ್ಪೆ ತೆಗೆದು ಚರ್ಮ ಕಾಯಿಲೆ ಇರುವವರು ೨ರಿಂದ ೩ ಬಾರಿ ಸ್ನಾನ ಮಾಡಿದರೆ ಚರ್ಮ ಕಾಯಿಲೆ ಮಾಯವಾಗುತ್ತದೆ ಎಂದು ಕೆಲವರು ಹೇಳುತ್ತಾರೆ.

ಕೋಟ್...

ನಮ್ಮ ಕುಟುಂಬ ಕೃಷಿ ಹಿನ್ನೆಲೆ ಹೊಂದಿದ್ದು, ಕೃಷಿಯಲ್ಲಿ ಸಾಧನೆ ಮಾಡುವ ಉದ್ದೇಶದಿಂದ ಈ ಪ್ರಯೋಗ ಮಾಡಿದ್ದೇವೆ. ಇದಕ್ಕೆ ಅಣ್ಣ, ಅಕ್ಕ ಹಾಗೂ ಕುಟುಂಬಸ್ಥರ ಪರಿಶ್ರಮ ಸಾಕಷ್ಟಿದೆ. ಅವರ ನೆರವಿನಿಂದ ಇದನ್ನು ಬೆಳೆಯಲು ಸಾಧ್ಯವಾಗಿದೆ.

ನಿಂಬಣ್ಣ ಕಾಟಾಪುರ, ಪದವೀಧರ ರೈತ

06 ಎಚ್,ಎನ್,ಎಮ್, 01: ಹನುಮಸಾಗರ ಸಮೀಪದ ಯಲಬುಣಚಿ ಗ್ರಾಮದಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬೆಳೆದ ನಿಂಬಣ್ಣ ಕಾಟಾಪುರ ತೋಟ.

06 ಎಚ್,ಎನ್,ಎಮ್, 01ಬಿ: ಹನುಮಸಾಗರ ಸಮೀಪದ ಯಲಬುಣಚಿ ಗ್ರಾಮದಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬೆಳೆದು ಮಾರಾಟ ಮಾಡಲು ಸಿದ್ಧತೆಯಲ್ಲಿರುವ ಹಣ್ಣುಗಳು.