ಸಾರಾಂಶ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡಇಷ್ಟು ದಿನಗಳ ಕಾಲ ಜನನ-ಮರಣ ಪ್ರಮಾಣ ಪತ್ರಕ್ಕಾಗಿ ತಹಸೀಲ್ದಾರ್ ಕಚೇರಿ ಅಥವಾ ಸ್ಥಳೀಯ ಸಂಸ್ಥೆಗಳ ಮೊರೆ ಹೋಗಬೇಕಾದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗ್ರಾಮೀಣ ಭಾರತದ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ಗ್ರಾಮ ಪಂಚಾಯಿತಿಯಲ್ಲಿ ಅನೇಕ ಸೌಲಭ್ಯಗಳು ದೊರಕುತ್ತಿದ್ದು, ಮುಂದುವರಿದ ಭಾಗವಾಗಿ ಗ್ರಾಪಂನಲ್ಲಿಯೇ ಜನನ-ಮರಣ ಪ್ರಮಾಣ ಪತ್ರ ಸಹ ದೊರೆಯುವಂತಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಿದೆ.
ಧಾರವಾಡ ಜಿಲ್ಲೆಯ 124 ಗ್ರಾಪಂಗಳು ಸೇರಿದಂತೆ ರಾಜ್ಯಾದ್ಯಂತ ಜು. 1ರಿಂದ ಜನನ-ಮರಣ ನೋಂದಣಿಯನ್ನು ಗ್ರಾಪಂಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಪಂಗಳು ಈಗಾಗಲೇ ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಅರ್ಜಿಗಳನ್ನು ಸ್ವೀಕರಿಸುತ್ತಿವೆ. ಜನನ, ಮರಣ ಘಟನೆಗಳು ಘಟಿಸಿದ ಮೂವತ್ತು ದಿನಗಳ ವರೆಗೆ ನೋಂದಾಯಿಸಲು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.ಘಟನೆ ಸಂಭವಿಸಿದ 21 ದಿನಗಳ ಒಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 30 ದಿನಗಳ ಒಳಗೆ ವರದಿಯಾಗುವ ಘಟನೆಗಳನ್ನು ₹2 ಶುಲ್ಕ ಪಡೆದು ನೋಂದಾಯಿಸಬೇಕು. ಘಟನೆ ಸಂಭವಿಸಿದ 30 ದಿನಗಳ ತರುವಾಯ ವರದಿಯಾಗುವ ಘಟನೆಗಳ ನೋಂದಣಿಯನ್ನು ಗ್ರಾಪಂಗೆ ಮಾಡಲು ಅಧಿಕಾರ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಈ ಘಟನೆಗಳ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಬೇಕಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ, ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ಸೂಚಿಸಿದೆ.
30 ದಿನಗಳ ತರುವಾಯ ಒಂದು ವರ್ಷದ ಒಳಗೆ ವರದಿಯಾಗುವ ಜನನ, ಮರಣಗಳನ್ನು ತಹಸೀಲ್ದಾರ್ ಲಿಖಿತ ಅನುಮತಿಯೊಂದಿಗೆ ₹5 ಶುಲ್ಕ ಪಡೆದು ನೋಂದಾಯಿಸಬೇಕು. ಒಂದು ವರ್ಷದ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ದಂಡಾಧಿಕಾರಿ ಆದೇಶದೊಂದಿಗೆ ತಡೆ ಶುಲ್ಕ ₹10 ಪಡೆದು ನೋಂದಾಯಿಸಬೇಕು ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಸೂಚಿಸಿದೆ.ಗ್ರಾಮ ಪಂಚಾಯಿತಿ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈ ಕುರಿತು ಜನನ, ಮರಣ ನೋಂದಣಿ ಸೂಚನಾ ಫಲಕ ಅಳವಡಿಸಲು ಸೂಚಿಸಲಾಗಿದೆ. ಗ್ರಾಮೀಣ ಮಟ್ಟದ ಜನನ-ಮರಣ ಘಟನೆ ಶೇ. 100ರಷ್ಟು ನೋಂದಣಿ ಮಾಡಲು ಪ್ರಮುಖ ಸಾರ್ವಜನಿಕ ಪ್ರದೇಶದಲ್ಲಿ ಮಾಹಿತಿ ಫಲಕ ಹಾಗೂ ಘನ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಎಲ್ಲ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಟಿ.ಕೆ. ಕನ್ನಡಪ್ರಭಕ್ಕೆ ತಿಳಿಸಿದರು.
ಈ ಮೊದಲು ಪ್ರತಿಯೊಂದು ಸೌಲಭ್ಯ ಹಾಗೂ ಪ್ರಮಾಣ ಪತ್ರಗಳಿಗೆ ಗ್ರಾಮೀಣ ಜನರು ತಹಸೀಲ್ದಾರ್ ಕಚೇರಿಗೆ ಬರುವ ಸ್ಥಿತಿ ಇತ್ತು. ಅದರಲ್ಲೂ ಪಹಣಿ ಪತ್ರಿಕೆ, ಜನನ-ಮರಣ ಸೇರಿದಂತೆ ಇತರ ಕಂದಾಯ ಇಲಾಖೆಗೆ ಸಂಬಂಧಿಸಿದ ಕಾಗದ ಪತ್ರಗಳಿಗೆ ದೂರದ ತಹಸೀಲ್ದಾರ್ ಕಚೇರಿಗೆ ಅಲೆದಾಡುವಂತಾಗಿತ್ತು. ಇದೀಗ ಗ್ರಾಪಂ ವ್ಯಾಪ್ತಿಯಲ್ಲಿಯೇ ಪಹಣಿ ಪತ್ರಿಕೆಗಳು ದೊರಕುತ್ತಿವೆ. ಪ್ರತಿಯೊಂದು ಗ್ರಾಪಂನಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆದಿದ್ದು 100ಕ್ಕೂ ಹೆಚ್ಚು ಸೌಲಭ್ಯಗಳು, ಅರ್ಜಿ ಹಾಕುವ ಪ್ರಕ್ರಿಯೆಗಳನ್ನು ಇಲ್ಲಿಂದಲೇ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗ್ರಾಮೀಣ ಜನರ ಅಲೆದಾಟ ನಿಧಾನವಾಗಿ ಕಡಿಮೆಯಾಗುತ್ತಿದ್ದು ಸಮಯವಕಾಶವೂ ಉಳಿತಾಯವಾಗುತ್ತಿದೆ. ಇದೀಗ ಜನನ-ಮರಣ ಪ್ರಮಾಣ ಪತ್ರ ಸಹ ಗ್ರಾಪಂನಲ್ಲಿ ದೊರೆಯುವುದರಿಂದ ಸಮಯಾವಕಾಶ, ಹಣ ಹಾಗೂ ಅಲೆದಾಟ ಮತ್ತಷ್ಟು ಕಡಿಮೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಗ್ರಾಪಂ ಅಧಿಕಾರಿರಗಳು ಈ ಕಾರ್ಯವನ್ನು ಸರಿಯಾಗಿ ನಿಭಾಯಿಸಬೇಕು ಎಂದು ಯಾದವಾಡ ಗ್ರಾಪಂ ಮಾಜಿ ಅಧ್ಯಕ್ಷರೊಬ್ಬರು ಪ್ರತಿಕ್ರಿಯೆ ನೀಡಿದರು. ಗ್ರಾಪಂ ಮೇಲೆ ಒತ್ತಡ ಆಗದುಸಾಮಾನ್ಯವಾಗಿ ಪ್ರತಿಯೊಂದು ಮಗುವಿನ ಜನನ ಕಡ್ಡಾಯವಾಗಿ ಆಸ್ಪತ್ರೆಯಲ್ಲಿಯೇ ಆಗಬೇಕೆಂಬ ನಿಯಮ ರೂಪಿಸಲಾಗಿದೆ. ಮಗು ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿ ಹೆರಿಗೆ ಆಗದಂತೆ ನೋಡಿಕೊಳ್ಳಲು ಆಶಾ, ಆರೋಗ್ಯ ಕಾರ್ಯಕರ್ತರು ಕಾರ್ಯ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತು ಪಡಿಸಿ ನಗರಗಳ ಆಸ್ಪತ್ರೆಗಳಲ್ಲಿಯೇ ಹೆರಿಗೆ ಆಗುತ್ತಿದ್ದು, ಈ ಆಸ್ಪತ್ರೆಗಳ ಮೂಲಕ ಮಹಾನಗರ ಪಾಲಿಕೆಯೇ ಜನನ ಪ್ರಮಾಣ ಪತ್ರಗಳನ್ನು ಒದಗಿಸಲಿದೆ. ಹೀಗಾಗಿ, ಗ್ರಾಪಂಗಳಿಗೆ ಜನನ ಪ್ರಮಾಣ ಪತ್ರದ ಒತ್ತಡ ಅಷ್ಟಾಗಿ ಆಗಲಿಕ್ಕಿಲ್ಲ ಎಂಬ ಅಭಿಪ್ರಾಯಗಳು ಇವೆ. ಇನ್ನು, ಮರಣ ಆಸ್ಪತ್ರೆಯಲ್ಲಿಯೇ ಆಗಬೇಕೆಂದಿಲ್ಲ. ಮನೆ ಅಥವಾ ಇನ್ನಾವುದೇ ಸ್ಥಳಗಳಲ್ಲಿ ಆಗುವ ಸಾಧ್ಯತೆಗಳಿದ್ದು, ಗ್ರಾಪಂ ಮಟ್ಟದಲ್ಲಿಯೇ ಈ ಮರಣ ಪ್ರಮಾಣ ದೊರೆಯುವುದರಿಂದ ಗ್ರಾಮೀಣ ಜನರಿಗೆ ತುಂಬ ಅನುಕೂಲ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.