ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದ್ದು, ಬೇರೆ ದೇಶಕ್ಕೆ ಹೋಗದೆ ನಮ್ಮ ದೇಶದಲ್ಲಿಯೇ ಕೆಲಸ ಮಾಡಿ ದೇಶದ ಋಣ ತೀರಿಸಲು ಯುವಜನತೆ ಮುಂದಾಗಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ಕರೆ ನೀಡಿದರು.ಕುವೆಂಪುನಗರದ ಸಾಮ್ರಾಟ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗರದಾರರ ಸಂಘ ಹಾಗೂ ಮೈಸೂರು ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯುತ್ ಗುತ್ತಿಗೆದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಈ ದೇಶದ ಸಂಪತ್ತು, ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಪೈಪೋಟಿ ನಡೆಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ, ಛಲ ಇಟ್ಟುಕೊಂಡು ಸಾಧನೆ ಮಾಡಿ, ತಂದೆ- ತಾಯಿ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಅವರು ಹೇಳಿದರು.ವಿದ್ಯುತ್ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿದರೆ ಸಾರ್ವಜನಿಕರಿಗೆ ನಿರಂತರ ವಿದ್ಯುತ್ ನೀಡಬಹುದು. ಸಂಘಕ್ಕೆ ಸಮುದಾಯದ ಭವನ ನಿರ್ಮಿಸಲು ಎಂಡಿಎಯಿಂದ ಸಿಎ ನಿವೇಶನ ಕೇಳಿದ್ದೀರಿ, ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರ ನಡೆಸಿ ಪ್ರೋತ್ಸಾಹಿಸಿದರೆ ನೂರಕ್ಕೆ ನೂರು ಸಿಎ ನಿವೇಶನ ಮಂಜೂರು ಮಾಡಿಸಿಕೊಡುವುದಾಗಿ ಅವರು ಭರವಸೆ ನೀಡಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾದ ಶ್ರೀರಂಗಪಟ್ಟಣ ಶಾಸಕ ಎ.ಬಿ. ರಮೆಶ್ ಬಂಡಿಸಿದ್ದೇಗೌಡ ಮಾತನಾಡಿ, ನಮ್ಮಲ್ಲಿ ಲೈನ್ ಮ್ಯಾನ್ ಸಂಖ್ಯೆ ಕಡಿಮೆ ಇದ್ದು, ಇತ್ತೀಚೆಗೆ ವಿದ್ಯುತ್ ಅವಗಢಗಳು ಹೆಚ್ಚಾಗುತ್ತಿವೆ. ಗುತ್ತಿಗೆದಾರರು ವಿದ್ಯುತ್ ಅವಘಡಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.ಭಾರತ ಅತ್ಯಂತ ಹೆಚ್ಚು ಮಾನವ ಸಂಪನ್ಮೂಲ ಇರುವ ದೇಶ. ಪ್ರಪಂಚದ ಅತ್ಯಂತ ಉನ್ನತ ಹುದ್ದೆಗಳಲ್ಲಿ ನಮ್ಮ ದೇಶದ ಯುವಕರಿದ್ದಾರೆ. ವಿದ್ಯಾರ್ಥಿಗಳು ಹಿಂದೆ ಗುರು, ಮುಂದೆ ಗುರಿ ಇಟ್ಟುಕೊಂಡು ಸಾಧನೆ ಮಾಡಿ. ನಿಮ್ಮ ಸಂಘದ ಮಕ್ಕಳಿಗೆ ಉಚಿತ ನೀಟ್ ತರಬೆತಿ ನೀಡಲು ಪ್ರಯತ್ನ ಮಾಡುತ್ತೇನೆ. ಪ್ರತಿಭಾವಂತ ಮಕ್ಕಳನ್ನು ಗುರುತಿಸುವುದು ಅತ್ಯಂತ ಅಗತ್ಯವಾಗಿದ್ದು, ನಿಮ್ಮ ಸಂಘ ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾಗಿ ಯಶಸ್ವಿಯಾಗಿ ಬೆಳೆಯಲಿ ಎಂದು ಅವರು ಆಶಿಸಿದರು.
ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಸಿ. ರಮೆಶ್, ಜಿಲ್ಲಾಧ್ಯಕ್ಷ ಎಚ್.ಜೆ. ರಾಘವೆಂದ್ರ, ಸೆಸ್ಕ್ ತಾಂತ್ರಿಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್, ಎ.ಎಂ. ಸುನಿಲ್ ಕುಮಾರ್, ಪೂರ್ಣಚಂದ್ರ ತೇಜಸ್ವಿ, ಎಸ್.ಬಿ. ಅನಿತಾ, ಕೆ.ಎಸ್. ಅಭಿಲಾಷ್, ಸುದರ್ಶನ್, ರವೀಶ್, ಎಸ್. ಕಿರಣ್, ನವೀನ್ ಚಂದ್ರ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.