ಸಾರಾಂಶ
ಜಾನಪದ ಕಲೆ, ಗ್ರಾಮೀಣ ಭಾಗದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಗ್ರಾಮೀಣ ಸೊಗಡನ್ನು ಹಚ್ಚ ಹಸಿರಾಗಿಡುವ ಪ್ರಯತ್ನದ ಫಲವಾಗಿ ಕಾಲೇಜು ಆವರಣ ಅಕ್ಷರಶಃ ಹಳ್ಳಿಯ ವಾತಾವರಣದಲ್ಲಿ ಕಂಗೊಳಿಸುತ್ತಿತ್ತು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಕಾಲೇಜು ಸಿಬ್ಬಂದಿ ಸಂಕ್ರಾಂತಿ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿದರು.ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಿಇಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಆಶಯ್ ಮಧು ರಾಶಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಸಂಕ್ರಾಂತಿ ಸಂಭ್ರಮದಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಹಳ್ಳಿ ಸೊಗಡನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಎಂದರು.
ಇದೇ ವೇಳೆ ಎತ್ತಿಗಾಡಿಯಲ್ಲಿ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ವಿದ್ಯಾರ್ಥಿಗಳು ಅಧ್ಯಾಪಕರನ್ನು ಕೂರಿಸಿಕೊಂಡು ಚಾಲನೆ ಮಾಡಿದ್ದು ವಿಶೇಷವಾಗಿತ್ತು. ಮಳವಳ್ಳಿ- ಮದ್ದೂರು ಮುಖ್ಯ ರಸ್ತೆಯಲ್ಲಿ ಹತ್ತಾರು ಎತ್ತಿನಗಾಡಿಗಳ ಮೂಲಕ ಪೂಜಾ ಕುಣಿತ, ವೀರಗಾಸೆ ಸೇರಿ ಜನಪದ ಕಲಾ ಪ್ರಕಾರಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಸಂಭ್ರಮದಲ್ಲಿ ಬಂಡೂರು ಕುರಿಗಳು ಗಮನ ಸೆಳೆದವು. ಕಾಲೇಜಿನ ತುಂಬೆಲ್ಲ ಸಂಕ್ರಾಂತಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವಿವಿಧ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಸೆಲ್ಫಿ ತೆಗೆದುಕೊಂಡು ಕುಣಿದು ಕುಪ್ಪಳಿಸಿದರು.ಜಾನಪದ ಕಲೆ, ಗ್ರಾಮೀಣ ಭಾಗದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಗ್ರಾಮೀಣ ಸೊಗಡನ್ನು ಹಚ್ಚ ಹಸಿರಾಗಿಡುವ ಪ್ರಯತ್ನದ ಫಲವಾಗಿ ಕಾಲೇಜು ಆವರಣ ಅಕ್ಷರಶಃ ಹಳ್ಳಿಯ ವಾತಾವರಣದಲ್ಲಿ ಕಂಗೊಳಿಸುತ್ತಿತ್ತು.
ಹಸುಗಳನ್ನು ತಂದು ಕಿಚ್ಚು ಹಾಯಿಸಿ ಸಂಭ್ರಮ ಪಟ್ಟರೆ, ಭಾರತೀ ಔಷಧ ವಿಜ್ಞಾನ ಕಾಲೇಜಿನ ವತಿಯಿಂದ ಮಡೆ ಸ್ಪರ್ಧೆ ನಡೆಯಿತು. ಬಗೆ ಬಗೆಯ ಪೊಂಗಲ್ ತಯಾರಿಸಿದ ವಿವಿಧ ಅಂಗಸಂಸ್ಥೆಗಳ ವನಿತೆಯರು ಬಹುಮಾನ ಗಳಿಸಿದರು.ಆಹಾರ ಮಳಿಗೆಯಲ್ಲಿ ಭರ್ಜರಿ ವ್ಯಾಪಾರ:
ಆಹಾರ ಮಳಿಗೆಯಲ್ಲಿ ವಿದ್ಯಾರ್ಥಿಗಳೇ ತಯಾರು ಮಾಡಿದ ಚಕ್ಕುಲಿ, ನಿಪ್ಪಟ್ಟು, ರವೆ ಉಂಡೆ ಸೇರಿ ಮನೆಯ ತೋಟದಲ್ಲಿ ಬೆಳೆದ ತರಕಾರಿ, ಸೌತೆಕಾಯಿ, ಹಸಿರುಕಾಳು ಹಾಗೂ ಮಜ್ಜಿಗೆ ಪಾನಕ, ಹೋಳಿಗೆ, ಕಜ್ಜಾಯ, ರಾಗಿ ರೊಟ್ಟಿ ವ್ಯಾಪಾರ ಬಲೂ ಜೋರಾಗಿತ್ತು. ವಿದ್ಯಾರ್ಥಿಗಳಿಂದ ಹಾಡು, ನೃತ್ಯ, ಹಾಸ್ಯ, ಗಾದೆ, ಒಗಟು ಸೇರಿ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ದೇಶಿ ಉಡುಗೆ ತೊಟ್ಟ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನ ನೀಡಿದರೆ ಕಾರ್ಯಕ್ರಮದ ವಿಶೇಷತೆ ಕಜ್ಜಾಯದ ಬುತ್ತಿ ಸ್ಪರ್ಧೆಗೆ ಹಲವರು ಭಾಗವಹಿಸುವ ಮೂಲಕ ಬಹುಮಾನ ಪಡೆದರು.